ಇಬ್ರಿಯ ಅಕ್ಷರಕ್ರಮಾನುಸಾರವಾದ ಪ್ರಾರ್ಥನೆ
೨೫
ದಾವೀದನ ಕೀರ್ತನೆ.
೧ ಯೆಹೋವನೇ, ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.
೨ ನನ್ನ ದೇವರೇ, ನಿನ್ನನ್ನೇ ನಂಬಿದ್ದೇನೆ,
ನನ್ನನ್ನು ಅಪಮಾನಕ್ಕೆ ಗುರಿಪಡಿಸಬೇಡ.
ಶತ್ರುಗಳ ಉತ್ಸಾಹಕ್ಕೆ ಆಸ್ಪದಮಾಡಬೇಡ.
೩ ನಿಷ್ಕಾರಣ ದ್ರೋಹಿಗಳಿಗೆ ಅಪಮಾನವಾಗಬೇಕೇ ಹೊರತು,
ನಿನ್ನನ್ನು ನಿರೀಕ್ಷಿಸಿದವರಿಗೆ ಎಂದಿಗೂ ಆಗಬಾರದು.
೪ ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಯಪಡಿಸು;
ನೀನು ಒಪ್ಪುವ ದಾರಿಯನ್ನು ತೋರಿಸು.
೫ ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡೆಸುತ್ತಾ ಉಪದೇಶಿಸು;
ನೀನೇ ನನ್ನನ್ನು ರಕ್ಷಿಸುವ ದೇವರು;
ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ.
೬ ಯೆಹೋವನೇ, ನೀನು ಆದಿಯಿಂದಲೂ ನನ್ನನ್ನು ಕರುಣಿಸುವವನಾಗಿ,
ನನಗೆ ಮಾಡಿದ ಮಹೋಪಕಾರಗಳನ್ನು ನೆನಸಿಕೋ.
೭ ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ಮತ್ತು ದ್ರೋಹಗಳನ್ನೂ ಮನಸ್ಸಿನಲ್ಲಿಡದೆ,
ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಪುಮಾಡಿಕೋ.
೮ ಯೆಹೋವನು ದಯಾಳುವೂ, ಸತ್ಯಸ್ವರೂಪನೂ ಆಗಿದ್ದಾನೆ;
ದಾರಿತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡೆಸುವನು.
೯ ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡೆಸುವನು;
ಅವರಿಗೆ ತನ್ನ ಮಾರ್ಗವನ್ನು ತೋರಿಸುವನು.
೧೦ ಯೆಹೋವನ ನಿಬಂಧನೆ ಮತ್ತು ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ,
ಆತನ ಎಲ್ಲಾ ಮಾರ್ಗಗಳು ಕೃಪೆಯೂ, ಸತ್ಯತೆಯುಳ್ಳವು.
೧೧ ಯೆಹೋವನೇ, ನನ್ನ ಪಾಪವು ಬಹುಘೋರವಾಗಿದೆ;
ಆದರೂ ನಿನ್ನ ಹೆಸರಿನ ನಿಮಿತ್ತ ಅದನ್ನು ಕ್ಷಮಿಸು.
೧೨ ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವರೋ
ಅವರಿಗೆ ಉಚಿತವಾದ ಮಾರ್ಗವನ್ನು ಆತನು ಬೋಧಿಸುವನು.
೧೩ ಅವರು ಸುಖದಿಂದಲೇ ಇರುವರು;
ಅವರ ಸಂತತಿಯವರು ದೇಶವನ್ನು ಅನುಭವಿಸುವರು.
೧೪ ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು;
ಅವರಿಗೆ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು.
೧೫ ನನ್ನ ದೃಷ್ಟಿ ಯಾವಾಗಲೂ ಯೆಹೋವನಲ್ಲಿದೆ;
ಆತನೇ ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವವನು.
೧೬ ನಾನು ಒಬ್ಬೊಂಟಿಗನೂ, ಬಾಧೆಪಡುವವನೂ ಆಗಿದ್ದೇನೆ;
ನೀನು ಕಟಾಕ್ಷವಿಟ್ಟು ನನ್ನನ್ನು ಕರುಣಿಸು.
೧೭ ನನ್ನ ಮನೋವ್ಯಥೆಗಳನ್ನು ನಿವಾರಿಸು;
ಸಂಕಟಗಳಿಂದ ನನ್ನನ್ನು ಬಿಡಿಸು.
೧೮ ನಾನು ಕುಗ್ಗಿರುವುದನ್ನೂ, ಕಷ್ಟಪಡುವುದನ್ನೂ ನೋಡಿ,
ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು.
೧೯ ನನಗೆ ಎಷ್ಟೋ ಶತ್ರುಗಳು ಇದ್ದಾರಲ್ಲಾ;
ಅವರು ಕಡು ವೈರತ್ವದಿಂದ ನನ್ನನ್ನು ಹಗೆಮಾಡುತ್ತಾರೆ.
೨೦ ನನ್ನ ಪ್ರಾಣವನ್ನು ಕಾಪಾಡಿ ಉಳಿಸು;
ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ, ನನಗೆ ಆಶಾಭಂಗವಾಗಬಾರದು.
೨೧ ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ;
ನಿರ್ದೋಷಭಕ್ತಿಯೂ ಮತ್ತು ಯಥಾರ್ಥತ್ವವೂ ನನ್ನನ್ನು ಕಾಯಲಿ.
೨೨ ದೇವರೇ, ಇಸ್ರಾಯೇಲರನ್ನು ಅವರ ಎಲ್ಲಾ ಬಾಧೆಗಳಿಂದ ವಿಮೋಚಿಸು.