ಬಲಾತ್ಕಾರಿಗಳಿಂದ ತಪ್ಪಿಸಬೇಕೆಂಬ ಪ್ರಾರ್ಥನೆ
೨೬
ದಾವೀದನ ಕೀರ್ತನೆ.
೧ ಯೆಹೋವನೇ, ನನಗೋಸ್ಕರ ನ್ಯಾಯವನ್ನು ನಿರ್ಣಯಿಸು.
ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಂಡಿದ್ದೇನೆ.
ನಾನು ಕದಲದೆ ಯೆಹೋವನಲ್ಲೇ ಭರವಸವಿಟ್ಟಿದ್ದೇನೆ.
೨ ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು;
ನನ್ನ ಅಂತರಿಂದ್ರಿಯವನ್ನೂ, ಹೃದಯವನ್ನೂ ಪರಿಶೋಧಿಸು.
೩ ನಿನ್ನ ಶಾಶ್ವತವಾದ ಪ್ರೀತಿಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡಿದ್ದೇನೆ;
ನಿನಗೆ ನಂಬಿಗಸ್ತನಾಗಿ ನಡೆದುಕೊಂಡಿದ್ದೇನೆ.
೪ ನಾನು ಮೋಸಗಾರರ ಸಹವಾಸ ಮಾಡುವವನಲ್ಲ;
ಕಪಟಿಗಳನ್ನು ಸೇರುವವನಲ್ಲ.
೫ ನನಗೆ ದುರ್ಜನರ ಕೂಟವು ಅಸಹ್ಯ;
ದುಷ್ಟರ ಸಂಗವು ಬೇಕಿಲ್ಲ.
೬ ಯೆಹೋವನೇ, ನಾನು ನಿರ್ದೋಷಿ ಎಂದು,
ಕೈಗಳನ್ನು ತೊಳೆದುಕೊಂಡವನಾಗಿ,
೭ ನಿನ್ನ ಅದ್ಭುತಕೃತ್ಯಗಳ ವರ್ಣನೆಯ ಸ್ತೋತ್ರ ಮಾಡುತ್ತಾ,
ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು.
೮ ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ;
ನಿನ್ನ ಪ್ರಭಾವ ಸ್ಥಾನವು ನನಗೆ ಇಷ್ಟ.
೯ ಪಾಪಿಷ್ಟರ ಪ್ರಾಣದ ಸಂಗಡ ನನ್ನ ಪ್ರಾಣವನ್ನೂ ತೆಗೆಯಬೇಡ;
ಕೊಲೆಪಾತಕರ ಜೀವದೊಂದಿಗೆ ನನ್ನ ಜೀವವನ್ನೂ ತೆಗೆಯಬೇಡ.
೧೦ ಅವರ ಕೈಗಳು ಬಲಾತ್ಕಾರ ನಡೆಸುತ್ತವೆ;
ಅವರ ಬಲಗೈ ಲಂಚದಿಂದ ತುಂಬಿದೆ.
೧೧ ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಳ್ಳುವವನು;
ಯೆಹೋವನೇ, ಅವರಿಂದ ನನ್ನನ್ನು ವಿಮೋಚಿಸಿ ಪ್ರಸನ್ನನಾಗಿರು.
೧೨ ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ;
ಕೂಡಿದ ಸಭೆಯಲ್ಲಿ ಯೆಹೋವನನ್ನು ಕೊಂಡಾಡುವೆನು.