ಯೆಹೋವನ ಸನ್ನಿಧಿಯಲ್ಲಿ ಸೇರತಕ್ಕವರು
೨೪
ದಾವೀದನ ಕೀರ್ತನೆ.
 
೧ ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು;
ಲೋಕವೂ ಮತ್ತು ಅದರ ನಿವಾಸಿಗಳೂ ಆತನವೇ.
೨ ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು;
ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ.
೩ ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು?
ಆತನ ಪವಿತ್ರಸ್ಥಾನದಲ್ಲಿ ನಿಲ್ಲುವುದಕ್ಕೆ ಎಂಥವನು ಯೋಗ್ಯನು?
೪ ಯಾರು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ,
ಮೋಸ ಪ್ರಮಾಣಮಾಡದೆ,
ಶುದ್ಧಹಸ್ತವೂ, ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ,
೫ ಅವನೇ ಯೆಹೋವನಿಂದ ಶುಭವನ್ನು ಹೊಂದುವನು;
ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವನು.
೬ ಇಂಥವರೇ ಆತನ ದರ್ಶನವನ್ನು ಬಯಸುವವರು.
ಯಾಕೋಬ್ಯರ ದೇವರೇ, ನಿನ್ನ ಸಾನ್ನಿಧ್ಯವನ್ನು ಸೇರುವವರು ಇಂಥವರೇ.
ಸೆಲಾ
೭ ದ್ವಾರಗಳೇ, ಉನ್ನತವಾಗಿರ್ರಿ!
ಪುರಾತನವಾದ ಕದಗಳೇ ತೆರೆದುಕೊಂಡಿರ್ರಿ!
ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.
೮ ಮಹಾಮಹಿಮೆಯುಳ್ಳ ಈ ಅರಸನು ಯಾರು?
ಮಹಾ ಬಲಿಷ್ಠನೂ, ವಿಶೇಷ ಪರಾಕ್ರಮಿಯೂ ಆಗಿರುವ ಯೆಹೋವ,
ಯುದ್ಧವೀರನಾಗಿರುವ ಯೆಹೋವ.
೯ ದ್ವಾರಗಳೇ, ಉನ್ನತವಾಗಿರ್ರಿ!
ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ!
ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.
೧೦ ಮಹಾಮಹಿಮೆಯುಳ್ಳ ಈ ಅರಸನು ಯಾರು?
ಸೇನಾಧೀಶ್ವರನಾದ ಯೆಹೋವನೇ,
ಮಹಾಮಹಿಮೆಯುಳ್ಳ ಅರಸನು ಈತನೇ.
ಸೆಲಾ.