ಸ್ವಪ್ರಜಾರಕ್ಷಕನಾಗಿರುವ ಸೃಷ್ಟಿಪಾಲಕನಿಗೆ ಸ್ತೋತ್ರ
೧೪೭
(ಕೀರ್ತ. 33)
೧ ಯೆಹೋವನಿಗೆ ಸ್ತೋತ್ರ!
ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದೂ, ಸಂತೋಷಕರವೂ ಆಗಿದೆ,
ಆತನನ್ನು ಕೀರ್ತಿಸುವುದು ಯುಕ್ತವಾಗಿದೆ.
೨ ಯೆಹೋವನು ಯೆರೂಸಲೇಮನ್ನು ಕಟ್ಟಿಸುತ್ತಿದ್ದಾನೆ,
ಚದರಿಹೋಗಿದ್ದ ಇಸ್ರಾಯೇಲರನ್ನು ಕೂಡಿಸುತ್ತಿದ್ದಾನೆ,
೩ ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ,
ಅವರ ಗಾಯಗಳನ್ನು ಕಟ್ಟುತ್ತಾನೆ.
೪ ಅವನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ,
ಪ್ರತಿಯೊಂದಕ್ಕೂ ಹೆಸರಿಟ್ಟಿದ್ದಾನೆ.
೫ ನಮ್ಮ ಕರ್ತನು ದೊಡ್ಡವನೂ, ಪರಾಕ್ರಮಿಯೂ ಆಗಿದ್ದಾನೆ,
ಆತನ ಜ್ಞಾನವು ಅಪರಿಮಿತವಾಗಿದೆ.
೬ ಯೆಹೋವನು ದೀನರಿಗೆ ಆಧಾರವಾಗಿದ್ದಾನೆ,
ದುಷ್ಟರನ್ನು ನೆಲಕ್ಕೆ ಹಾಕಿ ತುಳಿದುಬಿಡುತ್ತಾನೆ.
೭ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ,
ಕಿನ್ನರಿಯೊಡನೆ ನಮ್ಮ ದೇವರನ್ನು ಕೊಂಡಾಡಿರಿ.
೮ ಆತನು ಆಕಾಶದಲ್ಲಿ ಮೋಡಗಳನ್ನು ಕವಿಸುತ್ತಾನೆ,
ಭೂಮಿಗೋಸ್ಕರ ಮಳೆಯನ್ನು ಸಿದ್ಧಮಾಡುತ್ತಾನೆ,
ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ.
೯ ಆತನು ಪಶುಗಳಿಗೂ, ಕೂಗುತ್ತಿರುವ ಕಾಗೆಮರಿಗಳಿಗೂ
ಬೇಕಾದ ಆಹಾರಕೊಡುತ್ತಾನೆ.
೧೦ ಕುದುರೆಯ ಶಕ್ತಿಯಲ್ಲಿ ಆತನಿಗೆ ಇಷ್ಟವಿಲ್ಲ,
ಆಳಿನ ತೊಡೆಯ ಬಲವನ್ನು ಆತನು ಮೆಚ್ಚುವುದಿಲ್ಲ.
೧೧ ಯೆಹೋವನು ಆನಂದಿಸುವುದು
ತನ್ನ ಕೃಪೆಯನ್ನು ನಿರೀಕ್ಷಿಸುವ ಭಕ್ತರಲ್ಲೇ.
೧೨ ಯೆರೂಸಲೇಮೇ, ಯೆಹೋವನನ್ನು ಕೀರ್ತಿಸು,
ಚೀಯೋನೇ, ನಿನ್ನ ದೇವರನ್ನು ಸ್ತುತಿಸು.
೧೩ ಆತನು ನಿನ್ನ ಹೆಬ್ಬಾಗಿಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ,
ನಿನ್ನ ಮಕ್ಕಳನ್ನು ಆಶೀರ್ವದಿಸಿದ್ದಾನೆ.
೧೪ ಆತನು ನಿನ್ನ ಪ್ರಾಂತ್ಯದೊಳಗೆ ಸೌಭಾಗ್ಯವನ್ನು ಉಂಟುಮಾಡುತ್ತಾನೆ,
ಶ್ರೇಷ್ಠವಾದ ಗೋದಿಯಿಂದ ನಿನ್ನನ್ನು ತೃಪ್ತಿಗೊಳಿಸುತ್ತಾನೆ.
೧೫ ತನ್ನ ನುಡಿಯನ್ನು ಭೂಲೋಕಕ್ಕೆ ಕಳುಹಿಸುತ್ತಾನೆ,
ಆತನ ವಾಕ್ಯವು ಬಹು ವೇಗಶಾಲಿಯಾಗಿದೆ.
೧೬ ಉಣ್ಣೆಯಂತಿರುವ ಹಿಮವನ್ನು ಬೀಳಿಸುತ್ತಾನೆ,
ಇಬ್ಬನಿಯನ್ನು ಬೂದಿಯಂತೆ ಹರವುತ್ತಾನೆ.
೧೭ ರೊಟ್ಟಿ ತುಂಡುಗಳಂತಿರುವ ಆನೆಕಲ್ಲುಗಳನ್ನು ಸುರಿಸುತ್ತಾನೆ,
ಆತನು ಚಳಿಯನ್ನು ಬರಮಾಡಲು ಅದನ್ನು ಸಹಿಸುವವರು ಯಾರು?
೧೮ ಆತನು ಅಪ್ಪಣೆಕೊಡಲು ಅವು ಕರಗುತ್ತವೆ,
ತನ್ನ ಗಾಳಿಯನ್ನು ಬೀಸಮಾಡಲು ನೀರು ಹರಿಯುತ್ತದೆ.
೧೯ ಆತನು ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ,
ತನ್ನ ನಿಯಮವಿಧಿಗಳನ್ನು ಇಸ್ರಾಯೇಲರಿಗೆ ಪ್ರಕಟಿಸುತ್ತಾನೆ.
೨೦ ಬೇರೆ ಯಾವ ಜನಾಂಗದವರಿಗೂ ಆತನು ಹೀಗೆ ಮಾಡಲಿಲ್ಲ,
ಆತನ ನ್ಯಾಯವಿಧಿಗಳನ್ನು ಅವರು ಅರಿಯರು.
ಯೆಹೋವನಿಗೆ ಸ್ತೋತ್ರ!