ಯೆಹೋವನನ್ನು ಆಶ್ರಯಿಸಿಕೊಂಡವನು ಧನ್ಯನು
೧೪೬
೧ ಯೆಹೋವನಿಗೆ ಸ್ತೋತ್ರ!
ನನ್ನ ಮನವೇ, ಯೆಹೋವನನ್ನು ಸ್ತುತಿಸು.
೨ ಪ್ರಾಣವಿರುವವರೆಗೂ ಯೆಹೋವನನ್ನು ಸ್ತುತಿಸುವೆನು,
ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು.
೩ ಪ್ರಭುಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಭರವಸವಿಡಬೇಡಿರಿ,
ಅವರು ಸಹಾಯ ಮಾಡ ಶಕ್ತರಲ್ಲ,
೪ ಉಸಿರು ಹೋಗಲು ಅವರು ಮಣ್ಣಿಗೆ ಸೇರುತ್ತಾರೆ,
ಅವರ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವುದು.
೫ ಯಾರಿಗೆ ಯಾಕೋಬನ ದೇವರು ಸಹಾಯಕನೋ,
ಯಾರು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ,
ಅವನೇ ಧನ್ಯನು.
೬ ಭೂಮಿ, ಆಕಾಶ, ಸಾಗರ, ಜಲಚರ ಇವುಗಳನ್ನು ನಿರ್ಮಿಸಿದವನೂ,
ವಾಗ್ದಾನವನ್ನು ಯಾವಾಗಲೂ ನೆರವೇರಿಸುವವನೂ,
೭ ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ,
ಹಸಿದವರಿಗೆ ಆಹಾರ ಕೊಡುವವನೂ ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುತ್ತಾನೆ.
೮ ಯೆಹೋವನು ಕುರುಡರಿಗೆ ಕಣ್ಣು ಕೊಡುತ್ತಾನೆ.
ಯೆಹೋವನು ಕುಗ್ಗಿದವರನ್ನು ಉದ್ಧರಿಸುತ್ತಾನೆ.
ಯೆಹೋವನು ನೀತಿವಂತರನ್ನು ಪ್ರೀತಿಸುತ್ತಾನೆ.
೯ ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ.
ಆತನು ಅನಾಥರಿಗೂ, ವಿಧವೆಯರಿಗೂ ಆಧಾರವಾಗಿದ್ದಾನೆ.
ಆದರೆ ದುಷ್ಟರ ಮಾರ್ಗವನ್ನು ಡೊಂಕು ಮಾಡುತ್ತಾನೆ.
೧೦ ಯೆಹೋವನು ಸದಾಕಾಲವೂ ಅರಸನಾಗಿರುವನು,
ಚೀಯೋನೇ, ನಿನ್ನ ದೇವರು ತಲತಲಾಂತರಕ್ಕೂ ಆಳುವನು,
ಯೆಹೋವನಿಗೆ ಸ್ತೋತ್ರ!