ಶತ್ರಪೀಡಿತನ ವಿಜ್ಞಾಪನೆ
೮೬
ದಾವೀದನ ಕೀರ್ತನೆ.
(ಕೀರ್ತ. 25)
 
೧ ಯೆಹೋವನೇ, ಕಿವಿಗೊಡು; ನನಗೆ ಸದುತ್ತರವನ್ನು ದಯಪಾಲಿಸು;
ಕುಗ್ಗಿದವನೂ, ದಿಕ್ಕಿಲ್ಲದವನೂ ಆಗಿದ್ದೇನೆ.
೨ ನಾನು ನಿನ್ನ ಭಕ್ತನು; ನನ್ನ ಪ್ರಾಣವನ್ನು ಉಳಿಸು;
ನೀನೇ ನನ್ನ ದೇವರು; ನಿನ್ನಲ್ಲಿ ಭರವಸವಿಟ್ಟಿರುವ ನಿನ್ನ ಸೇವಕನನ್ನು ರಕ್ಷಿಸು.
೩ ಕರ್ತನೇ, ಕರುಣಿಸು;
ದಿನವೆಲ್ಲಾ ನಿನಗೆ ಮೊರೆಯಿಡುತ್ತೇನೆ.
೪ ಕರ್ತನೇ, ನಿನ್ನ ಸೇವಕನ ಹೃದಯವನ್ನು ಆನಂದಗೊಳಿಸು;
ನಿನ್ನನ್ನೇ ನಿರೀಕ್ಷಿಸುತ್ತಿರುವೆನಲ್ಲಾ.
೫ ಕರ್ತನೇ, ನೀನು ಒಳ್ಳೆಯವನೂ, ಕ್ಷಮಿಸುವವನೂ,
ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದಿಯಲ್ಲಾ.
೬ ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು;
ನನ್ನ ವಿಜ್ಞಾಪನೆಗಳ ಕೂಗನ್ನು ಲಾಲಿಸು.
೭ ನೀನು ಸದುತ್ತರವನ್ನು ದಯಪಾಲಿಸುವಿಯೆಂದು ನಂಬಿ,
ನನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನನ್ನೇ ಕರೆಯುವೆನು.
೮ ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ;
ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ.
೯ ಕರ್ತನೇ, ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು,
ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು.
೧೦ ಮಹೋನ್ನತನು, ಮಹತ್ಕಾರ್ಯಗಳನ್ನು ನಡೆಸುವವನು ನೀನು;
ನೀನೊಬ್ಬನೇ ದೇವರು.
೧೧ ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು;
ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು.
ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು.
೧೨ ಕರ್ತನೇ, ನನ್ನ ದೇವರೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು;
ಎಂದೆಂದಿಗೂ ನಿನ್ನ ನಾಮವನ್ನು ಘನಪಡಿಸುವೆನು.
೧೩ ನೀನು ಬಹಳವಾಗಿ ಕನಿಕರಿಸಿ,
ನನ್ನ ಪ್ರಾಣವನ್ನು ಪಾತಾಳದ ತಳದಿಂದ ತಪ್ಪಿಸಿದ್ದಿಯಲ್ಲಾ.
೧೪ ದೇವರೇ, ಅಹಂಕಾರಿಗಳು ನನಗೆ ವಿರುದ್ಧವಾಗಿ ಎದ್ದಿದ್ದಾರೆ;
ಬಲಾತ್ಕಾರಿಗಳ ಗುಂಪು ನನ್ನ ಪ್ರಾಣಕ್ಕಾಗಿ ಕಾದಿದೆ.
ಅವರು ನಿನ್ನನ್ನು ಲಕ್ಷಿಸುವುದಿಲ್ಲ.
೧೫ ಕರ್ತನೇ, ನೀನು ಕನಿಕರವೂ, ದಯೆಯೂ ಉಳ್ಳ ದೇವರು;
ದೀರ್ಘಶಾಂತನು, ಬಹಳ ಪ್ರೀತಿಯೂ, ನಂಬಿಕೆಯೂ ಉಳ್ಳವನು.
೧೬ ಕಟಾಕ್ಷವಿಟ್ಟು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ಬಲವನ್ನು ಅನುಗ್ರಹಿಸು;
ನಿನ್ನ ಸೇವಕಳ ಮಗನನ್ನು ರಕ್ಷಿಸು.
೧೭ ನನಗಾಗಿ ಒಂದು ಶುಭಸೂಚನೆಯನ್ನು ತೋರಿಸು;
ನನ್ನ ಶತ್ರುಗಳು ನೋಡಿ, “ಯೆಹೋವನು ಸಹಾಯಕನಾಗಿ
ಇವನನ್ನು ಸಂತೈಸಿದ್ದಾನೆ” ಎಂದು ನಾಚಿಕೆಪಡಲಿ.