ಸಂಪೂರ್ಣ ರಕ್ಷಣೆಯನ್ನು ನಿರೀಕ್ಷಿಸುವ ಭಕ್ತನ ವಿಜ್ಞಾಪನೆ
೮೫
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ.
 
೧ ಯೆಹೋವನೇ, ನಿನ್ನ ದೇಶವನ್ನು ಕಟಾಕ್ಷಿಸಿದ್ದಿ;
ಯಾಕೋಬ್ಯರನ್ನು ಸೆರೆಯಿಂದ ಬಿಡಿಸಿ ಬರಮಾಡಿದ್ದಿ.
೨ ನಿನ್ನ ಪ್ರಜೆಯ ದ್ರೋಹವನ್ನು ಕ್ಷಮಿಸಿದ್ದಿ;
ಅವರ ಎಲ್ಲಾ ಪಾಪಗಳನ್ನು ಅಳಿಸಿಬಿಟ್ಟಿದ್ದಿ.
ಸೆಲಾ
೩ ನಿನ್ನ ರೌದ್ರವನ್ನೆಲ್ಲಾ ತೊರೆದಿದ್ದಿ;
ನಿನ್ನ ಉಗ್ರಕೋಪವನ್ನು ಬಿಟ್ಟಿದ್ದಿ.
೪ ನಮ್ಮನ್ನು ರಕ್ಷಿಸುವ ದೇವರೇ, ನಮಗೆ ಅಭಿಮುಖನಾಗು;
ನಮ್ಮ ವಿಷಯದಲ್ಲಿ ಬೇಸರವನ್ನು ಬಿಡು.
೫ ಸದಾಕಾಲವೂ ನಮ್ಮ ಮೇಲೆ ಸಿಟ್ಟುಮಾಡಿ ಕೊಳ್ಳುವೆಯಾ?
ತಲತಲಾಂತರಗಳಿಗೂ ಕೋಪವನ್ನು ಬೆಳೆಸುವಿಯೋ?
೬ ನಿನ್ನ ಪ್ರಜೆಯಾದ ನಾವು ನಿನ್ನಲ್ಲಿ ಆನಂದಿಸುವಂತೆ,
ನೀನು ನಮ್ಮನ್ನು ಪುನಃ ಉಜ್ಜೀವಿಸುವುದಿಲ್ಲವೋ?
೭ ಯೆಹೋವನೇ, ನಿನ್ನ ಕೃಪೆಯನ್ನು ನಮಗೆ ತೋರಿಸು;
ನಿನ್ನ ರಕ್ಷಣೆಯನ್ನು ನಮಗೆ ಅನುಗ್ರಹಿಸು.
೮ ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ.
ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ.
ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ.
೯ ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ.
ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು.
೧೦ ಆತನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಕೂಡಿರುವವು;
ನೀತಿಯು, ಸಮಾಧಾನವು ಮುದ್ದಿಟ್ಟುಕೊಳ್ಳುವವು.
೧೧ ಸತ್ಯತೆಯು ಭೂಮಿಯಿಂದ ಹುಟ್ಟುವುದು;
ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.
೧೨ ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು;
ನಮ್ಮ ದೇಶವು ತನ್ನ ಬೆಳೆ ಕೊಡುವುದು.
೧೩ ನೀತಿಯು ಆತನ ಮುಂದೆ ಹೋಗುತ್ತಾ,
ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿ ಮಾಡುವುದು.