3
ಮೋಶೆಯು - ಉರಿಯುತ್ತಿರುವ ಪೊದೆಯು
ಮೋಶೆಯು ತನ್ನ ಮಾವನಾದ, ಮಿದ್ಯಾನ್ಯರ ಯಾಜಕನಾದ ಇತ್ರೋನನ ಮಂದೆಯನ್ನು ಮೇಯಿಸುತ್ತಿರಲಾಗಿ ಆ ಮಂದೆಯನ್ನು ಅಡವಿಯ ಮತ್ತೊಂದುಭಾಗಕ್ಕೆ ನಡಿಸಿಕೊಂಡು ಹೋಗುತ್ತಾ, “ಹೋರೇಬ್” ಎಂಬ * 3:1 ಪರಿಶುದ್ಧ ಬೆಟ್ಟ.ದೇವರ ಬೆಟ್ಟಕ್ಕೆ ಬಂದನು. ಆಗ ಯೆಹೋವನ ದೂತನು ಮುಳ್ಳಿನ ಪೊದೆಯೊಳಗಿನಿಂದ ಉರಿಯುವ ಬೆಂಕಿ ಜ್ವಾಲೆಯಲ್ಲಿ ಅವನಿಗೆ ಕಾಣಿಸಿಕೊಂಡನು. ಮೋಶೆಯು ಕಣ್ಣೆತ್ತಿ ನೋಡಿದಾಗ, ಆ ಮುಳ್ಳಿನ ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು; ಆದರೆ ಅದು ಸುಟ್ಟು ಹೋಗಲಿಲ್ಲ. ಆಗ ಮೋಶೆ, “ಇದೇನು ಆಶ್ಚರ್ಯ! ಪೊದೆಯು ಸುಟ್ಟು ಹೋಗುತ್ತಿಲ್ಲವಲ್ಲಾ! ಇದನ್ನು ಹತ್ತಿರಕ್ಕೆ ಹೋಗಿ ನೋಡುವೆನು” ಅಂದುಕೊಂಡನು. ಅವನು ಅದನ್ನು ನೋಡುವುದಕ್ಕೆ ಹತ್ತಿರ ಬರುವುದನ್ನು ಯೆಹೋವನು ಕಂಡನು. ಆಗ ದೇವರು ಆ ಪೊದೆಯೊಳಗಿಂದ “ಮೋಶೆಯೇ, ಮೋಶೆಯೇ” ಎಂದು ಅವನನ್ನು ಕರೆದನು. ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು. ದೇವರು ಅವನಿಗೆ, “ನೀನು ಪೊದೆಯ ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಯಾಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಸ್ಥಳವಾಗಿದೆ” ಎಂದು ಹೇಳಿದನು. ಇದಲ್ಲದೆ ಆತನು ಅವನಿಗೆ, “ನಾನು ನಿನ್ನ ತಂದೆಯಾದ, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರೂ ಆಗಿದ್ದೇನೆ” ಎಂದು ಹೇಳಿದನು. ಮೋಶೆಯು ದೇವರನ್ನು ನೋಡುವುದಕ್ಕೆ ಭಯಪಟ್ಟು ಮುಖವನ್ನು ಮುಚ್ಚಿಕೊಂಡನು.
ಆಗ ಯೆಹೋವನು, “ಐಗುಪ್ತ ದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಿಶ್ಚಯವಾಗಿ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡುವ ವಿಷಯದಲ್ಲಿ, ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನೆಲ್ಲಾ ನಾನು ಬಲ್ಲೆನು. ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ಬಿಡಿಸುವುದಕ್ಕೂ ಆ ದೇಶದಿಂದ ಅವರನ್ನು 3:8 ಫಲವತ್ತಾದ ದೇಶ.ಹಾಲೂ ಮತ್ತು ಜೇನೂ ಹರಿಯುವ ವಿಸ್ತಾರವಾದ ಒಳ್ಳೆಯ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ. ಈಗ ಇಸ್ರಾಯೇಲರ ಕೂಗು ನನಗೆ ಮುಟ್ಟಿದೆ. ಐಗುಪ್ತ್ಯರು ಅವರಿಗೆ ಕೊಡುವ ಉಪದ್ರವವನ್ನು ನಾನು ನೋಡಿದ್ದೇನೆ. 10 ಆದುದರಿಂದ ಈಗ ಬಾ, ನನ್ನ ಜನರಾದ ಇಸ್ರಾಯೇಲರನ್ನು ಐಗುಪ್ತ ದೇಶದಿಂದ ಹೊರಗೆ ಬರಮಾಡುವುದಕ್ಕೆ ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ” ಅಂದನು.
11 ಆಗ ಮೋಶೆಯು ದೇವರಿಗೆ, “ಫರೋಹನ ಬಳಿಗೆ ಹೋಗುವುದಕ್ಕೂ ಮತ್ತು ಇಸ್ರಾಯೇಲರನ್ನು ಐಗುಪ್ತದೇಶದಿಂದ ಕರೆದುಕೊಂಡು ಬರುವುದಕ್ಕೂ ನಾನು ಎಷ್ಟರವನು?” ಎಂದು ಹೇಳಿದನು. 12 ಅದಕ್ಕೆ ದೇವರು, “ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು. ನೀನು ನನ್ನ ಜನರನ್ನು ಐಗುಪ್ತದೇಶದಿಂದ ಹೊರಗೆ ತಂದಾಗ ನೀವು ಈ ಬೆಟ್ಟದಲ್ಲೇ ನನ್ನನ್ನು ಆರಾಧಿಸುವಿರಿ. ನಿನ್ನನ್ನು ಕಳುಹಿಸಿದವನು ನಾನೇ ಎಂಬುವುದಕ್ಕೆ ಇದು ನಿನಗೆ ಗುರುತಾಗಿರುವುದು” ಅಂದನು.
ದೇವರು ತನ್ನ ಹೆಸರನ್ನು ಪ್ರಕಟಿಸಿದ್ದು
13 ಅದಕ್ಕೆ ಮೋಶೆಯು ದೇವರಿಗೆ, “ನಾನು ಇಸ್ರಾಯೇಲರ ಬಳಿಗೆ ಹೋಗಿ, ‘ನಿಮ್ಮ ಪೂರ್ವಿಕರ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ’ ಎಂದು ಹೇಳಿದಾಗ, ನನಗೆ ಒಂದು ವೇಳೆ ಅವರು, ಆತನ ಹೆಸರು ಏನು? ಎಂದು ಕೇಳಿದರೆ ನಾನೇನು ಉತ್ತರಕೊಡಬೇಕು” ಎಂದನು. 14 ದೇವರು ಮೋಶೆಗೆ, “ಇರುವಾತನೇ ಆಗಿದ್ದೇನೆ” ಎಂದು ಹೇಳಿದನು. “ಮತ್ತು ನೀನು ಇಸ್ರಾಯೇಲರಿಗೆ, ಇರುವಾತನೆಂಬುವವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು” ಅಂದನು.
15 ದೇವರು ಪುನಃ ಮೋಶೆಗೆ ಹೇಳಿದ್ದೇನೆಂದರೆ, “ನೀನು ಇಸ್ರಾಯೇಲರಿಗೆ, ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಬೇಕು. ಇದು ಸದಾಕಾಲಕ್ಕೂ ಇರುವ ನನ್ನ ಹೆಸರು. ಇದು ತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ. 16 ಆತನು, ನೀನು ಹೋಗಿ ಇಸ್ರಾಯೇಲರ ಹಿರಿಯರನ್ನು ಒಟ್ಟಾಗಿ ಸೇರಿಸಿ ಅವರಿಗೆ, “ನಿಮ್ಮ ಪೂರ್ವಿಕರ ದೇವರು ಅಂದರೆ ಅಬ್ರಹಾಮ್, ಇಸಾಕ್, ಯಾಕೋಬರ ದೇವರು ಆಗಿರುವ ಯೆಹೋವನು ನನಗೆ ದರ್ಶನಕೊಟ್ಟು ನಿಮ್ಮನ್ನು ಕಟಾಕ್ಷಿಸಿ ಐಗುಪ್ತದೇಶದಲ್ಲಿ ನಿಮಗೆ ಸಂಭವಿಸಿದ್ದನ್ನೆಲ್ಲಾ ನಿಶ್ಚಯವಾಗಿ ನಾನು ನೋಡಿದ್ದೇನೆ. 17 ಐಗುಪ್ತ ದೇಶದಲ್ಲಿ ನಿಮಗುಂಟಾದ ದುರವಸ್ಥೆಯಿಂದ ನಿಮ್ಮನ್ನು ಬಿಡಿಸಿ, ಹಾಲೂ ಮತ್ತು ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರೂ, ಹಿತ್ತಿಯರೂ, ಅಮೋರಿಯರೂ, ಪೆರಿಜೀಯರೂ, ಹಿವ್ವಿಯರೂ, ಯೆಬೂಸಿಯರೂ, ವಾಸವಾಗಿರುವ ದೇಶಕ್ಕೆ ಬರಮಾಡಬೇಕೆಂದು ನಿರ್ಣಯಿಸಿದ್ದೇನೆ” ಎಂಬುದಾಗಿ ಅವರಿಗೆ ಹೇಳು. 18 ಅವರು ನಿನ್ನ ಮಾತಿಗೆ ಕಿವಿಗೊಡುವರು. ನೀನು ಮತ್ತು ಇಸ್ರಾಯೇಲರ ಹಿರಿಯರು ಐಗುಪ್ತದೇಶದ ಅರಸನ ಬಳಿಗೆ ಹೋಗಿ ಅವನಿಗೆ, “ಇಬ್ರಿಯರ ದೇವರಾಗಿರುವ ಯೆಹೋವನು ನಮಗೆ ಪ್ರತ್ಯಕ್ಷನಾದನು. ಆದುದರಿಂದ ನಾವು ಮರುಭೂಮಿಯಲ್ಲಿ ಮೂರು ದಿನದ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾಗಿರುವ ಯೆಹೋವನಿಗಾಗಿ ಯಜ್ಞಮಾಡಬೇಕಾಗಿದೆ, ಅದಕ್ಕೆ ಅಪ್ಪಣೆಯಾಗಬೇಕು” ಎಂದು ಕೇಳಿಕೊಳ್ಳಿರಿ. 19 ಆ ಐಗುಪ್ತದ ಅರಸನು ನೀವು ಎಷ್ಟು ಬಲವಂತ ಮಾಡಿದರೂ ನಿಮ್ಮನ್ನು ಬಿಡುವುದಿಲ್ಲವೆಂದು ನನಗೆ ತಿಳಿದಿದೆ. 20 ಆದಕಾರಣ ನಾನು ನನ್ನ ಕೈಯನ್ನು ಚಾಚಿ ಐಗುಪ್ತ ದೇಶದಲ್ಲಿ ಮಹತ್ಕಾರ್ಯಗಳನ್ನು ಮಾಡಿ ಅದನ್ನು ನಾನಾ ವಿಧವಾಗಿ ಬಾಧಿಸುವೆನು. ಅನಂತರ ಅರಸನು ನಿಮ್ಮನ್ನು ಕಳುಹಿಸಿಕೊಡುವನು. 21 “ಇದಲ್ಲದೆ ಈ ನನ್ನ ಜನರ ಮೇಲೆ ಐಗುಪ್ತ್ಯರಿಗೆ ದಯೆಯುಂಟಾಗುವಂತೆ ಮಾಡುವೆನು. ಆದ್ದರಿಂದ ನೀವು ಹೊರಡುವಾಗ ಬರಿಗೈಯಲ್ಲಿ ಬರಬೇಕಾಗುವುದಿಲ್ಲ. 22 ನಿಮ್ಮಲ್ಲಿನ ಪ್ರತಿಯೊಬ್ಬ ಸ್ತ್ರೀಯು ನೆರೆಹೊರೆಯ ಹೆಂಗಸರಿಂದಲೂ, ನಿಮ್ಮ ಮನೆಗಳ ಅತಿಥಿಗಳಾಗಿ ತಂಗಿರುವ ಹೆಂಗಸರಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನೂ, ಬಟ್ಟೆಗಳನ್ನೂ ಕೇಳಿಕೊಳ್ಳಲಿ. ನೀವು ಅವುಗಳನ್ನು ನಿಮ್ಮ ಗಂಡು ಹೆಣ್ಣು ಮಕ್ಕಳಿಗೆ ತೊಡಿಸಿರಿ. ಹೀಗೆ ನೀವು ಐಗುಪ್ತ್ಯರನ್ನು ಸುಲಿಗೆ ಮಾಡಿಹೊರಟು ಬರುವಿರಿ” ಅಂದನು.

*3:1 3:1 ಪರಿಶುದ್ಧ ಬೆಟ್ಟ.

3:8 3:8 ಫಲವತ್ತಾದ ದೇಶ.