2
ಮೋಶೆಯ ಜನನ ಮತ್ತು ಬಾಲ್ಯ
ಆ ನಂತರ ಲೇವಿಯ ವಂಶದವನಾದ ಒಬ್ಬನು ಲೇವಿ ಕುಲದ ಕನ್ಯೆಯನ್ನು ಮದುವೆ ಮಾಡಿಕೊಂಡನು. ಆಕೆಯು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. ಅದು ಸುಂದರವಾದ ಕೂಸೆಂದು ತಿಳಿದು ಮೂರು ತಿಂಗಳು ಅದನ್ನು ಬಚ್ಚಿಟ್ಟಳು. ಆಕೆ ಅದನ್ನು ಇನ್ನು ಹೆಚ್ಚುಕಾಲ ಮರೆಮಾಡಲಾಗದೆ, ಆಪಿನ ಪೆಟ್ಟಿಗೆಯನ್ನು ತೆಗೆದುಕೊಂಡು ಜೇಡಿಮಣ್ಣನ್ನೂ ರಾಳವನ್ನು ಹಚ್ಚಿ, ಕೂಸನ್ನು ಅದರಲ್ಲಿ ಮಲಗಿಸಿ, ನೈಲ್ ನದಿಯ ಅಂಚಿನಲ್ಲಿರುವ ಜಂಬುಹುಲ್ಲಿನಲ್ಲಿ ಇಟ್ಟಳು. ಕೂಸಿಗೆ ಏನಾಗುವುದೆಂದು ತಿಳಿದುಕೊಳ್ಳುವುದಕ್ಕೆ, ಆ ಕೂಸಿನ ಅಕ್ಕ ಸ್ವಲ್ಪ ದೂರದಲ್ಲಿ ನಿಂತುಕೊಂಡಳು.
ಅಷ್ಟರಲ್ಲಿ ಫರೋಹನ ಮಗಳು ಸ್ನಾನಕ್ಕಾಗಿ ನೈಲ್ ನದಿಯ ಬಳಿಗೆ ಬಂದಳು. ಆಕೆಯ ಸೇವಕಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬುಹುಲ್ಲಿನ ಪೆಟ್ಟಿಗೆಯನ್ನು ಕಂಡು, ದಾಸಿಯೊಬ್ಬಳನ್ನು ಕಳುಹಿಸಿ ಅದನ್ನು ತರಿಸಿದಳು. ಪೆಟ್ಟಿಗೆಯನ್ನು ತೆರೆದು ನೋಡುವಾಗ, ಆಹಾ! ಅಳುವ ಕೂಸು. ಆಕೆಗೆ ಅದರ ಮೇಲೆ ಕನಿಕರಹುಟ್ಟಿ, “ಇದು ಇಬ್ರಿಯರ ಮಕ್ಕಳಲ್ಲಿ ಒಂದಾಗಿರಬಹುದು” ಎಂದುಕೊಂಡಳು. ಆಗಲೇ ಮಗುವಿನ ಅಕ್ಕ ಬಂದು, “ಫರೋಹನ ಮಗಳಿಗೆ ನಿನಗೋಸ್ಕರ ಈ ಕೂಸನ್ನು ಮೊಲೆಕೊಟ್ಟು ಸಾಕುವುದಕ್ಕೆ ಇಬ್ರಿಯ ಸ್ತ್ರೀಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಬಹುದೋ?” ಎಂದು ಕೇಳಿದಳು. ಫರೋಹನ ಮಗಳು ಆಕೆಗೆ, “ಹೋಗು ಕರೆದುಕೊಂಡು ಬಾ” ಎಂದಳು. ಆ ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರೆದುತಂದಳು. ಫರೋಹನ ಮಗಳು ಮಗುವಿನ ತಾಯಿಗೆ, “ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಹಾಲುಕೊಟ್ಟು ಸಾಕಬೇಕು. ನಾನು ನಿನಗೆ ಸಂಬಳವನ್ನು ಕೊಡುವೆನು” ಎಂದು ಹೇಳಿದಳು. ಆ ಸ್ತ್ರೀಯು ಕೂಸನ್ನು ತೆಗೆದುಕೊಂಡು ಹೋಗಿ ಸಾಕಿದಳು. 10 ಆ ಹುಡುಗನು ಬೆಳೆದಾಗ, ಅವನನ್ನು ಫರೋಹನ ಮಗಳ ಬಳಿಗೆ ತೆಗೆದುಕೊಂಡು ಬಂದಳು, ಅವನು ಆಕೆಗೆ ಮಗನಾದನು. “ಇವನನ್ನು ನೀರಿನೊಳಗಿನಿಂದ ಎಳೆದುಕೊಂಡಿದ್ದೇನೆ,” ಎಂದು ಹೇಳಿ ಆಕೆಯು ಅವನಿಗೆ “ಮೋಶೆ* 2:10 ಮೋಶೆ ಅಂದರೆ ನೀರಿನೊಳಗಿನಿಂದ ಎಳೆಯಲ್ಪಟ್ಟವನು.” ಎಂದು ಹೆಸರಿಟ್ಟಳು.
ಮೋಶೆಯು ಮಿದ್ಯಾನ್ ದೇಶಕ್ಕೆ ಓಡಿಹೋದದ್ದು
11 ಮೋಶೆಯು ದೊಡ್ಡವನಾದ ಮೇಲೆ, ಸ್ವಜನರ ಬಳಿಗೆ ಹೋಗಿ ಅವರ ಬಿಟ್ಟೀಕೆಲಸಗಳನ್ನು ನೋಡುತ್ತಿದ್ದನು. ಆಗ ಒಬ್ಬ ಐಗುಪ್ತ್ಯದವನು ತನ್ನ ಸ್ವಂತ ಜನರಾದ ಸಹೋದರರಲ್ಲಿ ಒಬ್ಬನಾದ ಇಬ್ರಿಯನನ್ನು ಹೊಡೆಯುವುದನ್ನು ಕಂಡನು. 12 ಮೋಶೆ ಅತ್ತಿತ್ತ ನೋಡಿ, ಯಾರೂ ಇಲ್ಲವೆಂದು ತಿಳಿದು, ಆ ಐಗುಪ್ತ್ಯದವನನ್ನು ಹೊಡೆದು ಕೊಂದುಹಾಕಿ ಅವನ ಶವವನ್ನು ಮರಳಿನಲ್ಲಿ ಮುಚ್ಚಿಹಾಕಿದನು. 13 ಮರುದಿನ ಅವನು ಮತ್ತೆ ಹೊರಗೆ ಹೋದಾಗ, ಇಬ್ರಿಯರಾದ ಇಬ್ಬರು ಜಗಳವಾಡುತ್ತಿದ್ದರು. ಅನ್ಯಾಯಮಾಡುತ್ತಿದ್ದವನಿಗೆ ಅವನು, “ಏನಯ್ಯಾ, ನೀನು ಯಾಕೆ ಸ್ವಕುಲದವರನ್ನು ಹೊಡೆಯುತ್ತೀ?” ಎಂದು ಕೇಳಿದನು. 14 ಆ ಮನುಷ್ಯನು ಅವನಿಗೆ, “ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ, ನ್ಯಾಯಾಧಿಪತಿಯನ್ನಾಗಿಯೂ, ಇಟ್ಟವರು ಯಾರು? ಆ ಐಗುಪ್ತ್ಯನನ್ನು ಕೊಂದು ಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದಿಯೋ?” ಅಂದನು. ಈ ಮಾತನ್ನು ಕೇಳಿ ಮೋಶೆಯು ಭಯಪಟ್ಟು, “ನಿಶ್ಚಯವಾಗಿ ನಾನು ಮಾಡಿದ ಕಾರ್ಯವು ಬಯಲಿಗೆ ಬಂತಲ್ಲಾ” ಅಂದುಕೊಂಡನು. 15 ನಡೆದ ಸಂಗತಿಯು ಫರೋಹನಿಗೆ ತಿಳಿದುಬಂದಾಗ, ಅವನು ಮೋಶೆಯನ್ನು ಕೊಲ್ಲಬೇಕೆಂದು ಆಲೋಚಿಸುತ್ತಿದ್ದನು. ಆದುದರಿಂದ ಮೋಶೆಯು ಫರೋಹನ ಬಳಿಯಿಂದ ಓಡಿಹೋಗಿ ಮಿದ್ಯಾನ್ ದೇಶದಲ್ಲಿದ್ದ ಒಂದು ಬಾವಿಯ ಬಳಿಯಲ್ಲಿ ಕುಳಿತುಕೊಂಡನು.
16 ಮಿದ್ಯಾನರ ಯಾಜಕನಿಗೆ ಏಳು ಮಂದಿ ಹೆಣ್ಣು ಮಕ್ಕಳಿದ್ದರು. ಅವರು ಬಂದು ತಮ್ಮ ತಂದೆಯ ಕುರಿ ಮಂದೆಗಳಿಗೆ ನೀರು ಕುಡಿಸುವುದಕ್ಕಾಗಿ, ನೀರನ್ನು ಸೇದಿ ತೊಟ್ಟಿಗಳಲ್ಲಿ ತುಂಬಿಸುತ್ತಿದ್ದರು. 17 ಕುರುಬರು ಬಂದು ಅವರನ್ನು ಬಾವಿಯ ಬಳಿಯಿಂದ ಓಡಿಸಲು, ಮೋಶೆಯು ಅವರಿಗೆ ಸಹಾಯಕನಾಗಿ ಬಂದು ಅವರ ಕುರಿಗಳಿಗೆ ನೀರನ್ನು ಕುಡಿಸಿದನು. 18 ಆ ನಂತರ ಆ ಹೆಣ್ಣುಮಕ್ಕಳು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಬಂದಾಗ ಅವನು ಅವರಿಗೆ, “ಏಕೆ ಈ ಹೊತ್ತು ಬೇಗ ಬಂದಿದ್ದಿರಲ್ಲ?” ಎಂದು ಕೇಳಿದನು. 19 ಅದಕ್ಕೆ ಅವರು, “ಐಗುಪ್ತದವನಾದ ಒಬ್ಬ ಮನುಷ್ಯನು ನಮ್ಮನ್ನು ಕುರುಬರ ಕೈಯಿಂದ ತಪ್ಪಿಸಿದಲ್ಲದೆ, ಅವನು ನಮಗೋಸ್ಕರ ನೀರು ಸೇದಿ ಕುರಿಗಳಿಗೆ ಕುಡಿಸಿದನು” ಅಂದರು. 20 ಆಗ ಅವನು ತನ್ನ ಮಕ್ಕಳಿಗೆ, “ಅವನು ಎಲ್ಲಿದ್ದಾನೆ? ಏಕೆ ಆ ಮನುಷ್ಯನನ್ನು ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ನಮ್ಮೊಂದಿಗೆ ಊಟಮಾಡಲಿ” ಎಂದು ಹೇಳಿದನು.
21 ಮೋಶೆಯು ಆ ಮನುಷ್ಯನೊಂದಿಗೆ ವಾಸಮಾಡಲು ಬಯಸಿದನು. ಅವನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಮದುವೆಮಾಡಿ ಕೊಟ್ಟನು. 22 ಆಕೆ ಗಂಡು ಮಗುವನ್ನು ಹೆರಲು ಮೋಶೆ ನಾನು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದೇನೆಂದು ಹೇಳಿ ಅದಕ್ಕೆ ಗೇರ್ಷೋಮ್ ಎಂದು ಹೆಸರಿಟ್ಟನು.
ದೇವರು ಇಸ್ರಾಯೇಲರನ್ನು ಬಿಡಿಸುವುದಕ್ಕೆ ಮೋಶೆಯನ್ನು ನೇಮಿಸಿದ್ದು
23 ಹೀಗೆ ಬಹಳ ದಿನಗಳು ಕಳೆದ ನಂತರ ಐಗುಪ್ತ ದೇಶದ ಅರಸನು ಸತ್ತನು. ಇಸ್ರಾಯೇಲರು ತಾವು ಮಾಡಬೇಕಾದ ಬಿಟ್ಟೀ ಕೆಲಸಕ್ಕಾಗಿ ನಿಟ್ಟುಸಿರು ಬಿಟ್ಟು ಗೋಳಾಡುತ್ತಾ ಇದ್ದರು. ಆ ಗೋಳು ದೇವರಿಗೆ ಮುಟ್ಟಿತು. 24 ದೇವರು ಅವರ ನರಳಾಟವನ್ನು ಕೇಳಿ, ತಾನು ಅಬ್ರಹಾಮ, ಇಸಾಕ, ಯಾಕೋಬನ ಸಂಗಡ ಮಾಡಿದ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡನು. 25 ದೇವರು ಇಸ್ರಾಯೇಲರನ್ನು ನೋಡಿ ಅವರ ವಿಷಯದಲ್ಲಿ ಕನಿಕರಪಟ್ಟನು.

*2:10 2:10 ಮೋಶೆ ಅಂದರೆ ನೀರಿನೊಳಗಿನಿಂದ ಎಳೆಯಲ್ಪಟ್ಟವನು.