76
ಸ್ತುತಿಗೀತೆ. ರಚನೆಗಾರ: ಆಸಾಪ.
ಯೆಹೂದದ ಜನರು ದೇವರನ್ನು ಬಲ್ಲವರೇ ಸರಿ!
ಇಸ್ರೇಲಿನ ಜನರು ಆತನ ನಾಮವನ್ನು ಗೌರವಿಸುವರು.
ಆತನ ಗುಡಾರವು ಸಾಲೇಮಿನಲ್ಲಿದೆ.
ಆತನ ಆಲಯವು ಸಿಯೋನ್ ಬೆಟ್ಟದ ಮೇಲಿದೆ.
ಆ ಸ್ಥಳದಲ್ಲಿ ದೇವರು ಬಿಲ್ಲುಬಾಣಗಳನ್ನೂ ಗುರಾಣಿಗಳನ್ನೂ
ಖಡ್ಗಗಳನ್ನೂ ಇತರ ಯುದ್ಧಾಯುಧಗಳನ್ನೂ ನುಚ್ಚುನೂರು ಮಾಡಿದ್ದಾನೆ.
 
ದೇವರೇ, ಶತ್ರುಗಳನ್ನು ಸೋಲಿಸಿ
ಬೆಟ್ಟಗಳಿಂದ ಇಳಿದುಬರುವಾಗ ನೀನು ತೇಜೋಮಯನಾಗಿರುವೆ.
ಆ ಸೈನಿಕರು ತಾವೇ ಶಕ್ತಿವಂತರೆಂದುಕೊಂಡಿದ್ದರು. ಆದರೆ ಈಗ ಅವರು ಬಯಲುಗಳಲ್ಲಿ ಸತ್ತುಬಿದ್ದಿದ್ದಾರೆ.
ಅವರು ಧರಿಸಿಕೊಂಡಿದ್ದವುಗಳನ್ನೆಲ್ಲ ಸುಲಿಗೆ ಮಾಡಲಾಗಿದೆ.
ಆ ಸೈನಿಕರಲ್ಲಿ ಯಾರೂ ತಮ್ಮನ್ನು ಸಂರಕ್ಷಿಸಿಕೊಳ್ಳಲಾಗಲಿಲ್ಲ.
ಯಾಕೋಬನ ದೇವರು ಆ ಸೈನಿಕರನ್ನು ಗದರಿಸಲು
ರಥಾಶ್ವಗಳ ಸೇನೆಯು ಮೂರ್ಛೆಗೊಂಡಿತು.
ದೇವರೇ, ನೀನು ಭಯಂಕರನೇ ಸರಿ!
ನೀನು ಕೋಪಗೊಂಡಿರುವಾಗ ನಿನಗೆ ವಿರೋಧವಾಗಿ ಯಾರು ನಿಂತುಕೊಳ್ಳಬಲ್ಲರು?
ಯೆಹೋವನು ಎದ್ದುನಿಂತು
ತನ್ನ ನ್ಯಾಯತೀರ್ಪನ್ನು ಪ್ರಕಟಿಸಿದನು.
ದೇವರು ಲೋಕದ ದೀನರನ್ನು ರಕ್ಷಿಸಿದನು.
ಆತನು ಪರಲೋಕದಿಂದ ತೀರ್ಮಾನ ನೀಡುತ್ತಿರಲು ಭೂಲೋಕವೆಲ್ಲಾ ಭಯದಿಂದ ಸ್ತಬ್ಧವಾಯಿತು.
10 ದೇವರೇ, ನೀನು ದುಷ್ಟರನ್ನು ದಂಡಿಸುವಾಗ ಜನರು ನಿನ್ನನ್ನು ಕೊಂಡಾಡುವರು;
ನಿನ್ನ ಕೋಪವನ್ನು ತೋರಿಸುವಾಗ ಅಳಿದುಳಿದವರು ಬಲಿಷ್ಠರಾಗುವರು.
 
11 ದೇವರಾದ ಯೆಹೋವನಿಗೆ ಹರಕೆಗಳನ್ನು ಮಾಡಿದವರೇ,
ನಿಮ್ಮ ಹರಕೆಗಳನ್ನು ಸಲ್ಲಿಸಿರಿ.
ಸರ್ವಭೂನಿವಾಸಿಗಳೇ, ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
12 ಆತನು ಮಹಾನಾಯಕರುಗಳನ್ನು ಸೋಲಿಸುವನು.
ಭೂರಾಜರುಗಳೆಲ್ಲಾ ಆತನಿಗೆ ಭಯಪಡುವರು.