77
ರಚನೆಗಾರ: ಆಸಾಫ.
ನಾನು ಸ್ವರವೆತ್ತಿ ದೇವರಿಗೆ ಮೊರೆಯಿಡುವೆನು.
ದೇವರೇ, ಸ್ವರವೆತ್ತಿ ಮೊರೆಯಿಡುವೆನು, ನನಗೆ ಕಿವಿಗೊಡು.
ನನ್ನ ಯೆಹೋವನೇ, ಇಕ್ಕಟ್ಟಿನಲ್ಲಿ ನಿನ್ನನ್ನು ಕರೆದೆನು;
ರಾತ್ರಿಯೆಲ್ಲಾ ನಿನಗಾಗಿ ಕೈಚಾಚಿಕೊಂಡಿದ್ದೆನು.
ಆದರೆ ನನ್ನ ಮನಸ್ಸು ಸಮಾಧಾನಗೊಳ್ಳಲಿಲ್ಲ.
ನಾನು ದೇವರನ್ನೇ ಧ್ಯಾನಿಸುತ್ತಾ ನನ್ನ ವ್ಯಥೆಯನ್ನು ಹೇಳಿಕೊಳ್ಳಬಯಸಿದೆ.
ಆದರೂ ನನ್ನಿಂದಾಗಲಿಲ್ಲ.
ನೀನು ನನಗೆ ನಿದ್ರೆಮಾಡಗೊಡಿಸಲಿಲ್ಲ.
ನಾನು ಬಹು ಗಲಿಬಿಲಿಗೊಂಡಿದ್ದರಿಂದ ನಿನ್ನೊಂದಿಗೆ ಮಾತಾಡಲಾಗಲಿಲ್ಲ.
ಹಿಂದಿನಕಾಲದ ಬಗ್ಗೆ ಯೋಚಿಸತೊಡಗಿದೆನು.
ಬಹುಕಾಲದ ಹಿಂದೆ ನಡೆದ ಸಂಗತಿಗಳ ಬಗ್ಗೆ ಯೋಚಿಸತೊಡಗಿದೆನು.
ರಾತ್ರಿಯಲ್ಲಿ, ನಾನು ಮಾಡುತ್ತಿದ್ದ ಗಾನವನ್ನು ನೆನಸಿಕೊಳ್ಳುವೆನು;
ಆಂತರ್ಯದಲ್ಲಿ ಮಾತಾಡುತ್ತಾ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವೆನು.
ನಾನು ಆಶ್ಚರ್ಯದಿಂದ ಹೀಗೆಂದುಕೊಳ್ಳುವೆನು:
“ನಮ್ಮ ಯೆಹೋವನು ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವನೇ?
ಆತನು ನಮ್ಮನ್ನು ಮತ್ತೆಂದಾದರೂ ಅಪೇಕ್ಷಿಸುವನೇ?
ದೇವರ ಕೃಪಾವಾತ್ಸಲ್ಯವು ಎಂದೆಂದಿಗೂ ನಿಂತುಹೋಯಿತೇ?
ಆತನು ನಮ್ಮೊಂದಿಗೆ ಮತ್ತೆಂದೂ ಮಾತಾಡುವುದಿಲ್ಲವೇ?
ದೇವರು ಕರುಣೆಯನ್ನು ಮರೆತುಬಿಟ್ಟಿರುವನೇ?
ಆತನ ಕನಿಕರವು ಬದಲಾವಣೆ ಹೊಂದಿ ಕೋಪವಾಗಿರುವುದೇ?”
 
10 ಬಳಿಕ ನಾನು ಹೀಗೆ ಆಲೋಚಿಸಿಕೊಂಡೆ: “ಮಹೋನ್ನತವಾದ ದೇವರು ತನ್ನ ಶಕ್ತಿಯನ್ನು ಕಳೆದುಕೊಂಡನೇ?”
ಎಂಬುದೇ ನನ್ನನ್ನು ಕಾಡಿಸುವ ಪ್ರಶ್ನೆ.
 
11 ಯೆಹೋವನೇ, ನಿನ್ನ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
ಬಹುಕಾಲದ ಹಿಂದೆ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
12 ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು;
ನಿನ್ನ ಕಾರ್ಯಗಳ ಕುರಿತಾಗಿ ಆಲೋಚಿಸುವೆನು.
13 ದೇವರೇ, ನಿನ್ನ ಮಾರ್ಗಗಳು ಪರಿಶುದ್ಧವಾಗಿವೆ.
ದೇವರೇ, ನಿನ್ನಂತೆ ಮಹತ್ವವುಳ್ಳವರು ಬೇರೆ ಯಾರೂ ಇಲ್ಲ.
14 ಅದ್ಭುತಕಾರ್ಯಗಳನ್ನು ಮಾಡಿದ ದೇವರು ನೀನೇ.
ನೀನು ಜನರಿಗೆ ನಿನ್ನ ಮಹಾಶಕ್ತಿಯನ್ನು ತೋರಿಸಿದೆ.
15 ನೀನು ನಿನ್ನ ಶಕ್ತಿಯಿಂದ ನಿನ್ನ ಜನರನ್ನು ರಕ್ಷಿಸಿದೆ.
ಯಾಕೋಬನ ಮತ್ತು ಯೋಸೇಫನ ಸಂತತಿಯವರನ್ನು ನೀನು ರಕ್ಷಿಸಿದೆ.
 
16 ದೇವರೇ, ನಿನ್ನನ್ನು ಕಂಡು ಜಲರಾಶಿಗಳು ಭಯಗೊಂಡವು.
ಆಳವಾದ ಜಲರಾಶಿಗಳು ಭಯದಿಂದ ನಡುಗಿದವು.
17 ದಟ್ಟವಾದ ಕಪ್ಪುಮೋಡಗಳು ಮಳೆಗರೆದವು.
ಜನರಿಗೆ ಮೇಘಮಂಡಲದಿಂದ ಗುಡುಗು ಕೇಳಿಸಿತು.
ನಿನ್ನ ಮಿಂಚಿನ ಬಾಣಗಳು ಆ ಮೋಡಗಳಲ್ಲಿ ಹಾರಿದವು.
18 ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು.
ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು.
ಭೂಮಿಯು ಅಲ್ಲಾಡಿ ಕಂಪಿಸಿತು.
19 ನೀನು ಸಮುದ್ರದಲ್ಲಿ ಮಾರ್ಗಮಾಡಿದೆ;
ಆಳವಾದ ಜಲರಾಶಿಗಳನ್ನು ದಾಟಿದೆ. ಆದರೆ ನಿನ್ನ ಹೆಜ್ಜೆಯ ಗುರುತು ಕಾಣಲೇ ಇಲ್ಲ.
20 ಕುರುಬನು ಕುರಿಹಿಂಡನ್ನು ಕರೆದೊಯ್ಯುವಂತೆ
ನಿನ್ನ ಜನರನ್ನು ಕರೆದೊಯ್ಯಲು ಮೋಶೆಯನ್ನೂ ಆರೋನನನ್ನೂ ಉಪಯೋಗಿಸಿದೆ.