ಪಾಪಪರಿಹಾರಕ್ಕಾಗಿ ಪ್ರಾರ್ಥನೆ
೧೩೦
ಯಾತ್ರಾಗೀತೆ.
(ನೆಹೆ. 1:4-11)
೧ ಯೆಹೋವನೇ, ಪಾತಾಳದಲ್ಲಿದ್ದು ನಿನ್ನನ್ನು ಕೂಗಿಕೊಳ್ಳುತ್ತೇನೆ.
೨ ಕರ್ತನೇ, ನನ್ನ ಮೊರೆಯನ್ನು ಕೇಳು;
ನನ್ನ ವಿಜ್ಞಾಪನೆಯ ಶಬ್ದಕ್ಕೆ ಕಿವಿದೆರೆ.
೩ ಕರ್ತನೇ, ಯೆಹೋವನೇ, ನೀನು ಪಾಪಗಳನ್ನು ಲೆಕ್ಕಿಸುವುದಾದರೆ
ನಿನ್ನ ಮುಂದೆ ಯಾರು ನಿಲ್ಲಲು ಸಾಧ್ಯ?
೪ ನೀನು ಪಾಪವನ್ನು ಕ್ಷಮಿಸುವವನಾದುದರಿಂದ,
ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.
೫ ನಾನು ಯೆಹೋವನನ್ನು ಎದುರುನೋಡುತ್ತೇನೆ;
ನನ್ನ ಪ್ರಾಣವು ಆತನನ್ನು ಕಾದುಕೊಂಡಿದೆ;
ಆತನ ನುಡಿಯನ್ನು ನಿರೀಕ್ಷಿಸಿಕೊಂಡಿದ್ದೇನೆ.
೬ ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುತ್ತಾರಲ್ಲಾ;
ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುವುದಕ್ಕಿಂತ ವಿಶೇಷವಾಗಿ,
ನನ್ನ ಅಂತರಾತ್ಮವು ಕರ್ತನನ್ನು ಮುನ್ನೋಡುತ್ತದೆ.
೭ ಇಸ್ರಾಯೇಲೇ, ಯೆಹೋವನನ್ನು ಎದುರುನೋಡುತ್ತಿರು;
ಯೆಹೋವನು ಕೃಪಾಸಂಪನ್ನನು;
ಪೂರ್ಣವಿಮೋಚನೆಯು ಆತನಿಂದಲೇ ದೊರಕುವುದು.
೮ ಆತನೇ ಇಸ್ರಾಯೇಲನ್ನು ಅದರ ಸಕಲ ಪಾಪಗಳಿಂದ ವಿಮೋಚಿಸುವನು.