ಭಕ್ತನ ಭಾಗ್ಯ
೧೨೮
ಯಾತ್ರಾಗೀತೆ.
(ಕೀರ್ತ. 127; 144:12-15)
 
೧ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ,
ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು.
೨ ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ,
ನೀನು ಧನ್ಯನು, ನಿನಗೆ ಶುಭವಿರುವುದು.
೩ ಅಂತಃಪುರದಲ್ಲಿರುವ ನಿನ್ನ ಹೆಂಡತಿಯು,
ಫಲಭರಿತವಾದ ದ್ರಾಕ್ಷಾಲತೆಯಂತೆ ಇರುವಳು;
ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು,
ಎಣ್ಣೇಮರದ ಸಸಿಗಳ ಹಾಗೆ ಇರುವರು.
೪ ಇಗೋ, ಯೆಹೋವನಲ್ಲಿ ಭಯಭಕ್ತಿಯುಳ್ಳ ಪುರುಷನು,
ಈ ರೀತಿಯಾಗಿ ಆಶೀರ್ವಾದ ಹೊಂದುವನು.
೫ ಚೀಯೋನಿನಲ್ಲಿರುವ ಯೆಹೋವನು ನಿನ್ನನ್ನು ಆಶೀರ್ವದಿಸಲಿ;
ಜೀವಮಾನವೆಲ್ಲಾ ಯೆರೂಸಲೇಮಿನ ಸೌಭಾಗ್ಯವನ್ನು ನೋಡುವವನಾಗು.
೬ ಮಕ್ಕಳ ಮಕ್ಕಳನ್ನು ಕಾಣುವವನಾಗು.
ಇಸ್ರಾಯೇಲರಿಗೆ ಶುಭವಾಗಲಿ.