ಚೀಯೋನಿನ ಸೌಭಾಗ್ಯದ ಪುನಃಸ್ಥಾಪನೆಗಾಗಿ ಪ್ರಾರ್ಥನೆ
೧೨೬
ಯಾತ್ರಾಗೀತೆ.
(ಕೀರ್ತ. 85)
 
೧ ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರುಗಿ ಚೀಯೋನಿಗೆ ಬರಮಾಡಿದಾಗ,
ನಾವು ಕನಸು ಕಂಡವರಂತೆ ಇದ್ದೆವು.
೨ ಆಗ ನಮ್ಮ ಬಾಯಿ ಬಲು ನಗೆಯಿಂದಲೂ,
ನಮ್ಮ ನಾಲಿಗೆ ಹರ್ಷಗೀತದಿಂದಲೂ ತುಂಬಿದವು.
ಅನ್ಯಜನರು, “ಯೆಹೋವನು ಇವರಿಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದಾನೆ” ಎಂದು
ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
೩ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದು ನಿಜ;
ಆದುದರಿಂದ ನಾವು ಸಂತೋಷವುಳ್ಳವರಾಗಿದ್ದೇವೆ.
೪ ಯೆಹೋವನೇ, ನೀನು ದಕ್ಷಿಣದೇಶದ ಹಳ್ಳಗಳನ್ನೋ ಎಂಬಂತೆ,
ಸೆರೆಯಲ್ಲಿ ಉಳಿದಿರುವ ನಮ್ಮವರನ್ನೂ ತಿರುಗಿ ಬರಮಾಡು.
೫ ಅಳುತ್ತಾ ಬಿತ್ತುವವರು, ಹಾಡುತ್ತಾ ಕೊಯ್ಯುವರು,
೬ ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು,
ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.