ಯಾತ್ರಿಕರು ಯೆರೂಸಲೇಮನ್ನು ಸ್ಮರಿಸುವುದು
೧೨೨
ಯಾತ್ರಾಗೀತೆ; ದಾವೀದನ ಕೀರ್ತನೆ.
೧ “ಯೆಹೋವನ ಮಂದಿರಕ್ಕೆ ಹೋಗೋಣ ಬಾ!”
ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.
೨ ಯೆರೂಸಲೇಮೇ! ನಮ್ಮ ಕಾಲುಗಳು,
ನಿನ್ನ ಬಾಗಿಲುಗಳಲ್ಲಿ ಸೇರಿರುತ್ತವಲ್ಲಾ.
೩ ಯೆರೂಸಲೇಮೇ! ನೀನು ಸರಿಯಾದ ಹೊಂದಿಕೆಯಿಂದ,
ಕಟ್ಟಲ್ಪಟ್ಟ ನಗರವಾಗಿದ್ದಿ.
೪ ಕುಲಗಳು ಅಂದರೆ ಯೆಹೋವನ ಕುಲದವರು,
ಯೆಹೋವನ ನಾಮದ ಕೀರ್ತನೆಗೋಸ್ಕರ,
ಇಲ್ಲಿಗೆ ಯಾತ್ರೆ ಮಾಡುತ್ತಿದ್ದರು.
ಇದು ಇಸ್ರಾಯೇಲರಲ್ಲಿದ್ದ ಕಟ್ಟಳೆಯಷ್ಟೆ.
೫ ನ್ಯಾಯಪೀಠಗಳಾಗಿರುವ ದಾವೀದನ ಮನೆತನದವರ,
ಸಿಂಹಾಸನಗಳು ಇಲ್ಲಿಯೇ ಇದ್ದವಲ್ಲಾ.
೬ ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ.
“ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ.
೭ ನಿನ್ನ ಪೌಳಿಗೋಡೆಗಳೊಳಗೆ ಶುಭವುಂಟಾಗಲಿ;
ನಿನ್ನ ಅರಮನೆಗಳಲ್ಲಿ ಸೌಭಾಗ್ಯವಿರಲಿ.”
೮ ನನ್ನ ಬಂಧುಮಿತ್ರರ ನಿಮಿತ್ತವಾಗಿ,
“ನಿನಗೆ ಸಮಾಧಾನವಾಗಲಿ” ಎಂದು ಹೇಳುತ್ತೇನೆ.
೯ ನಮ್ಮ ದೇವರಾದ ಯೆಹೋವನ ಮಂದಿರದ ನಿಮಿತ್ತವಾಗಿ,
ನಿನಗೆ ಸುಕ್ಷೇಮವನ್ನು ಹಾರೈಸುತ್ತೇನೆ.