ಯೆಹೋವನನ್ನು ಸ್ತುತಿಸುವುದು
೧೧೩
೧ ಯೆಹೋವನಿಗೆ ಸ್ತೋತ್ರ!
ಯೆಹೋವನ ಸೇವಕರೇ, ಸ್ತೋತ್ರಮಾಡಿರಿ;
ಯೆಹೋವನ ನಾಮವನ್ನು ಸ್ತುತಿಸಿರಿ.
೨ ಈಗಿನಿಂದ ಯುಗಯುಗಕ್ಕೂ,
ಯೆಹೋವನ ನಾಮವು ಕೀರ್ತಿಸಲ್ಪಡಲಿ.
೩ ಯೆಹೋವನ ನಾಮವು ಪೂರ್ವದಿಂದ,
ಪಶ್ಚಿಮದವರೆಗೂ ಸ್ತುತಿಹೊಂದಲಿ.
೪ ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು;
ಆತನ ಪ್ರಭಾವವು ಮೇಲಣ ಲೋಕಕ್ಕಿಂತಲೂ ಉನ್ನತವಾಗಿದೆ.
೫ ನಮ್ಮ ಯೆಹೋವ ದೇವರಿಗೆ ಸಮಾನರು ಯಾರು?
ಆತನು ಉನ್ನತಲೋಕದಲ್ಲಿ ಆಸನಾರೂಢನಾಗಿ,
೬ ಆಕಾಶವನ್ನೂ, ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ.
೭ ಆತನು ದೀನರನ್ನು ಧೂಳಿನಿಂದ ಎಬ್ಬಿಸಿ,
ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ.
೮ ಪ್ರಭುಗಳ ಜೊತೆಯಲ್ಲಿ,
ಅಂದರೆ ಅವರ ಜನಾಧಿಪತಿಗಳೊಡನೆ ಅವರನ್ನು ಕುಳ್ಳಿರಿಸುತ್ತಾನೆ.
೯ ಬಂಜೆಯು ಮಕ್ಕಳೊಂದಿಗೆ,
ಸಂತೋಷದಿಂದ ಮನೆಯಲ್ಲಿ ವಾಸಿಸುವ ಹಾಗೆ ಮಾಡುತ್ತಾನೆ.
ಯೆಹೋವನಿಗೆ ಸ್ತೋತ್ರ!