ದೇವಸ್ತುತಿ
೧೧೧
(ಕೀರ್ತ. 112)
೧ ಯೆಹೋವನಿಗೆ ಸ್ತೋತ್ರ! ನಾನು ಯೆಹೋವನನ್ನು ಕೊಂಡಾಡುವೆನು;
ಯಥಾರ್ಥರ ಕೂಟದಲ್ಲಿಯೂ, ನೆರೆದ ಸಭೆಯಲ್ಲಿಯೂ,
ಮನಃಪೂರ್ವಕವಾಗಿ ಕೀರ್ತಿಸುವೆನು.
೨ ಯೆಹೋವನ ಕೃತ್ಯಗಳು ಮಹತ್ತಾದವುಗಳು;
ಅವುಗಳಲ್ಲಿ ಸಂತೋಷಿಸುವವರು ಅವುಗಳನ್ನೇ ಧ್ಯಾನಿಸುವರು.
೩ ಆತನ ಕಾರ್ಯವು ಘನ, ಮಾನಗಳುಳ್ಳದ್ದು;
ಆತನ ನೀತಿಯು ಸದಾಕಾಲವೂ ಇರುವುದು.
೪ ಆತನು ತನ್ನ ಅದ್ಭುತಕೃತ್ಯಗಳ ಜ್ಞಾಪಕವನ್ನು ಉಳಿಯಮಾಡಿದ್ದಾನೆ.
ಯೆಹೋವನು ಕೃಪೆಯೂ, ಕನಿಕರವೂ ಉಳ್ಳವನು.
೫ ತನ್ನಲ್ಲಿ ಭಯಭಕ್ತಿಯುಳ್ಳವರಿಗೆ ಆಹಾರವನ್ನು ಕೊಟ್ಟಿದ್ದಾನೆ;
ತನ್ನ ಒಡಂಬಡಿಕೆಯನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿದ್ದಾನೆ
೬ ಆತನು ಅನ್ಯಜನಗಳ ಸ್ವಾಸ್ತ್ಯವನ್ನು ತನ್ನ ಪ್ರಜೆಗೆ ಕೊಡುವುದರ ಮೂಲಕ
ಸ್ವಪ್ರತಾಪವನ್ನು ತೋರ್ಪಡಿಸಿದ್ದಾನೆ.
೭ ಆತನ ಕೈಕೆಲಸಗಳು ನೀತಿ, ಸತ್ಯತೆಗಳನ್ನು ಪ್ರಕಟಿಸುತ್ತವೆ;
ಆತನ ನಿಯಮಗಳೆಲ್ಲಾ ಸ್ಥಿರವಾಗಿವೆ.
೮ ಅವು ದೃಢವಾದ ಆಧಾರವುಳ್ಳವುಗಳು; ಯುಗಯುಗಾಂತರಕ್ಕೂ ಇರುವವು.
ಸತ್ಯ, ನೀತಿಗಳಿಗನುಸಾರವಾಗಿ ವಿಧಿಸಲ್ಪಟ್ಟಿವೆ.
೯ ಯೆಹೋವನು ತನ್ನ ಜನರಿಗೆ ವಿಮೋಚನೆಯನ್ನು ಉಂಟುಮಾಡಿದ್ದಾನೆ;
ತನ್ನ ಒಡಂಬಡಿಕೆಯನ್ನು ನಿತ್ಯಕ್ಕೂ ಸ್ಥಾಪಿಸಿದ್ದಾನೆ;
ಆತನ ನಾಮವು ಪರಿಶುದ್ಧವೂ, ಮಹೋನ್ನತವೂ ಆಗಿದೆ.
೧೦ ಯೆಹೋವನ ಭಯವೇ ಜ್ಞಾನಕ್ಕೆ ಮೂಲ;
ಆತನ ಕಟ್ಟಳೆಗಳನ್ನು ಕೈಕೊಳ್ಳುವವರು ಪೂರ್ಣ ವಿವೇಕಿಗಳು.
ಆತನ ಸ್ತುತಿಯು ನಿರಂತರವಾದದ್ದು.