ಸಾರ್ವಭೌಮನಾದ ಯೆಹೋವನನ್ನು ಸ್ತುತಿಸುವುದು
೯೭
೧ ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ;
ಭೂಲೋಕವು ಸಂತೋಷಿಸಲಿ;
ಸಮುದ್ರದ ತೀರಪ್ರದೇಶಗಳೆಲ್ಲಾ ಹರ್ಷಿಸಲಿ.
೨ ಮೋಡಗಳೂ, ಕಾರ್ಗತ್ತಲೆಯೂ ಆತನ ಸುತ್ತಲೂ ಇರುತ್ತವೆ;
ನೀತಿ ಮತ್ತು ನ್ಯಾಯಗಳು ಆತನ ಸಿಂಹಾಸನದ ಅಸ್ತಿವಾರ.
೩ ಬೆಂಕಿಯು ಆತನ ಮುಂದೆ ಹೋಗಿ,
ಸುತ್ತಲೂ ಆವರಿಸಿ ಆತನ ವೈರಿಗಳನ್ನು ದಹಿಸಿಬಿಡುತ್ತದೆ.
೪ ಆತನ ಮಿಂಚುಗಳು ಲೋಕವನ್ನು ಬೆಳಗಿಸಿದವು;
ಭೂಮಿಯು ಅದನ್ನು ಕಂಡು ನಡುಗಿತು.
೫ ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ
ಪರ್ವತಗಳು ಮೇಣದಂತೆ ಕರಗಿಹೋದವು.
೬ ಗಗನಮಂಡಲವು ಆತನ ನೀತಿಯನ್ನು ಪ್ರಸಿದ್ಧಪಡಿಸಿತು;
ಎಲ್ಲಾ ಜನರು ಆತನ ಮಹಿಮೆಯನ್ನು ಕಂಡರು.
೭ ವಿಗ್ರಹಗಳಲ್ಲಿ ಹಿಗ್ಗುವವರೂ,
ಮೂರ್ತಿಪೂಜಕರೆಲ್ಲರೂ ನಾಚಿಕೆಗೆ ಒಳಪಡುವರು;
ದೇವರುಗಳಿರಾ, ನೀವೆಲ್ಲರೂ ಆತನಿಗೆ ಅಡ್ಡಬೀಳಿರಿ.
೮ ಯೆಹೋವನೇ, ನೀನು ನ್ಯಾಯಸ್ಥಾಪಿಸಿದ ವಾರ್ತೆಯನ್ನು ಕೇಳಿ
ಚೀಯೋನ್ ಪಟ್ಟಣವು ಹರ್ಷಿಸಿತು;
ಯೆಹೂದ ಪ್ರಾಂತ್ಯದ ಊರುಗಳು ಸಂತೋಷಿಸಿದವು.
೯ ಯೆಹೋವನೇ, ನೀನು ಭೂಲೋಕದ ಸರ್ವಾಧಿಕಾರಿ;
ಎಲ್ಲಾ ದೇವರುಗಳಲ್ಲಿ ಮಹೋನ್ನತನು ನೀನೇ.
೧೦ ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ.
ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ,
ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.
೧೧ ನೀತಿವಂತರಿಗೋಸ್ಕರ ಪ್ರಕಾಶವೂ,
ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಕೊಡಲ್ಪಟ್ಟಿವೆ.
೧೨ ನೀತಿವಂತರೇ, ಯೆಹೋವನಲ್ಲಿ ಆನಂದಿಸಿರಿ;
ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.