ದೇವರನ್ನು ವಿಶ್ವಾಸದಿಂದ ಆರಾಧಿಸುವುದು
೯೫
(ಕೀರ್ತ. 81; 96—100)
೧ ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ;
ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ.
೨ ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ;
ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ.
೩ ಯೆಹೋವನು ಮಹಾದೇವರೂ,
ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ.
೪ ಭೂಮಿಯ ಅಗಾಧವು ಆತನ ಕೈಯಲ್ಲಿರುತ್ತದೆ;
ಪರ್ವತಶಿಖರಗಳು ಆತನವೇ.
೫ ಆತನೇ ಸಮುದ್ರವನ್ನು ನಿರ್ಮಿಸಿದವನು;
ಅದು ಆತನದೇ, ಒಣನೆಲವು ಆತನ ಕೈಕೆಲಸವೇ.
೬ ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ
ಸಾಷ್ಟಾಂಗವೆರಗಿ ಆರಾಧಿಸೋಣ.
೭ ಆತನು ನಮ್ಮ ದೇವರು;
ನಾವೋ ಆತನು ಪಾಲಿಸುವ ಪ್ರಜೆಯೂ,
ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ.
ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು.
೮ ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ,
ಮಸ್ಸಾದಲ್ಲಿ ಮಾಡಿದ ದಿನದಂತೆ,
ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ.
೯ ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು;
ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಪರಿಶೋಧಿಸಿದರು.
೧೦ ನಾನು ನಲ್ವತ್ತು ವರುಷ ಆ ಸಂತತಿಯವರ ವಿಷಯದಲ್ಲಿ ಬೇಸರಗೊಂಡೆನು;
“ಈ ಜನರು ಹೃದಯದಲ್ಲಿ ತಪ್ಪಿಹೋಗುವವರು,
ನನ್ನ ಮಾರ್ಗವನ್ನು ತಿಳಿಯದವರು” ಎಂದು ಹೇಳಿದೆನು.
೧೧ ಆದುದರಿಂದ ಇವರು, “ನನ್ನ ವಿಶ್ರಾಂತಿಯಲ್ಲಿ ಸೇರಬಾರದು” ಎಂದು
ಕೋಪಗೊಂಡು ಪ್ರಮಾಣಮಾಡಿದೆನು.