ಸರ್ವಶಕ್ತನಾದ ದೇವರು ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂಬ ಪ್ರಾರ್ಥನೆ
೮೯
ಜೇರಹ ಕುಲದವನಾದ ಏತಾನನ ಪದ್ಯ.
(2 ಸಮು. 7; ಕೀರ್ತ. 44; 80)
೧ ಯೆಹೋವನೇ, ನಿತ್ಯವೂ ನಿನ್ನ ಕೃಪಾತಿಶಯವನ್ನು ಹಾಡಿಹರಸುವೆನು;
ನನ್ನ ಬಾಯಿ ನಿನ್ನ ಸತ್ಯವನ್ನು,
ಮುಂದಣ ಸಂತಾನದವರೆಲ್ಲರಿಗೂ ತಿಳಿಯಮಾಡುವುದು.
೨ ನಿನ್ನ ಪ್ರೀತಿಸಂಕಲ್ಪವು ನಿತ್ಯವು ಸಿದ್ಧಿಗೆ ಬರುತ್ತಲೇ ಇರುವುದು;
ಆಕಾಶದಲ್ಲಿ ನಿನ್ನ ಸತ್ಯತೆಯನ್ನು ಸ್ಥಾಪಿಸುವಿ ಎಂದು ತಿಳಿದುಕೊಂಡಿದ್ದೇನೆ.
೩ ನೀನು ನುಡಿದದ್ದೇನೆಂದರೆ, “ನಾನು ಆರಿಸಿಕೊಂಡ
ಸೇವಕನಾದ ದಾವೀದನ ಸಂಗಡ ಒಡಂಬಡಿಕೆ ಮಾಡಿಕೊಂಡು ಆಣೆಯಿಟ್ಟು,
೪ ‘ಶಾಶ್ವತವಾಗಿ ನಿನ್ನ ಸಂತತಿಯನ್ನು ಸ್ಥಾಪಿಸುವೆನು,
ತಲತಲಾಂತರಗಳಿಗೂ ನಿನ್ನ ಸಿಂಹಾಸನವನ್ನು ಸ್ಥಿರಪಡಿಸುವೆನು
ಎಂದು ಹೇಳಿದ್ದೇನೆ’ ” ಎಂಬುವುದೇ.
ಸೆಲಾ
೫ ಯೆಹೋವನೇ, ಗಗನವು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವುದು;
ನಿನ್ನ ಸತ್ಯವನ್ನು ಪರಿಶುದ್ಧರ ಸಭೆಯಲ್ಲಿ ಕೀರ್ತಿಸುವೆನು.
೬ ಮೇಘಮಂಡಲದಲ್ಲಿ ಯೆಹೋವನಿಗೆ ಸಮಾನರು ಯಾರು?
ದೇವದೂತರಲ್ಲಿ ಯೆಹೋವನಿಗೆ ಸರಿಯಾದವರು ಯಾರು?
೭ ಆತನು ಪರಿಶುದ್ಧರ ಸಭೆಯಲ್ಲಿ ಘನ ಹೊಂದುವ ದೇವರು;
ತನ್ನ ಎಲ್ಲಾ ಪರಿವಾರದವರಿಗಿಂತ ಭಯಂಕರನು.
೮ ಯೆಹೋವನೇ, ಸೇನಾಧೀಶ್ವರನಾದ ದೇವರೇ,
ನಿನಗೆ ಸಮಾನರು ಯಾರು?
ಯಾಹುವೇ, ನೀನು ಶಕ್ತನು, ಸತ್ಯತೆಯಿಂದ ಆವರಿಸಲ್ಪಟ್ಟವನು.
೯ ಸಮುದ್ರದ ಅಲ್ಲಕಲ್ಲೋಲಗಳನ್ನು ಅಧೀನದಲ್ಲಿ ಇಟ್ಟುಕೊಂಡಿರುವವನು ನೀನು;
ತೆರೆಗಳು ಏಳುವಾಗ ಅವುಗಳನ್ನು ತಡೆಯುವವನು ನೀನು.
೧೦ ರಹಬನ್ನು ಛೇದಿಸಿ ಸಾಯಿಸಿದವನು ನೀನು;
ನಿನ್ನ ಭುಜಬಲದಿಂದ ಶತ್ರುಗಳನ್ನು ಚದರಿಸಿಬಿಟ್ಟಿದ್ದಿ.
೧೧ ಆಕಾಶವೂ ನಿನ್ನದು, ಭೂಮಿಯೂ ನಿನ್ನದೇ;
ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನಿರ್ಮಿಸಿದವನು ನೀನು.
೧೨ ದಕ್ಷಿಣೋತ್ತರ ದಿಕ್ಕುಗಳನ್ನು ಉಂಟುಮಾಡಿದವನು ನೀನು.
ತಾಬೋರ್, ಹೆರ್ಮೋನ್ ಪರ್ವತಗಳು ನಿನ್ನ ನಾಮದಲ್ಲಿ ಆನಂದಧ್ವನಿ ಮಾಡುತ್ತವೆ.
೧೩ ನಿನ್ನ ಭುಜಬಲವು ಮಹಾಬಲವುಳ್ಳದ್ದು. ನಿನ್ನ ಹಸ್ತವು ಶಕ್ತಿಯುಳ್ಳದ್ದು;
ನಿನ್ನ ಬಲಗೈ ಮಹತ್ತುಗಳನ್ನು ನಡೆಸುತ್ತದೆ.
೧೪ ನೀತಿ ಮತ್ತು ನ್ಯಾಯಗಳು ನಿನ್ನ ಸಿಂಹಾಸನದ ಅಸ್ತಿವಾರವು;
ನಿನ್ನ ಸಾನ್ನಿಧ್ಯದೂತರು ಪ್ರೀತಿ ಮತ್ತು ಸತ್ಯತೆಗಳೇ.
೧೫ ಉತ್ಸಾಹಧ್ವನಿಯನ್ನು ಕೇಳಿದ ಜನರು ಧನ್ಯರು;
ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ.
೧೬ ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ;
ನಿನ್ನ ನೀತಿಯಿಂದ ಏಳಿಗೆ ಹೊಂದುತ್ತಾರೆ.
೧೭ ಅವರು ಹಿಗ್ಗುವ ಬಲವು ನೀನೇ.
ನಿನ್ನ ಕರುಣೆಯ ಕಟಾಕ್ಷದಿಂದ ನಮ್ಮ ಕೊಂಬು ಎತ್ತಲ್ಪಟ್ಟಿರುವುದು.
೧೮ ನಮಗೆ ಗುರಾಣಿಯಂತಿರುವ ನಮ್ಮ ಅರಸನು ಯೆಹೋವನೇ;
ಅವನು ಇಸ್ರಾಯೇಲರ ಪರಿಶುದ್ಧ ದೇವರು, ಸ್ವಕೀಯನು.
೧೯ ಆ ಕಾಲದಲ್ಲಿ ನೀನು ದರ್ಶನದಲ್ಲಿ ನಿನ್ನ ಭಕ್ತರಿಗೆ ಹೇಳಿದ್ದೇನೆಂದರೆ,
“ಒಬ್ಬ ಶೂರನಿಗೆ ರಕ್ಷಾಬಲವನ್ನು ಅನುಗ್ರಹಿಸಿದ್ದೇನೆ;
ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತಸ್ಥಾನದಲ್ಲಿಟ್ಟಿದ್ದೇನೆ.
೨೦ ನನ್ನ ಸೇವಕನಾದ ದಾವೀದನನ್ನು ಕಂಡು,
ಪರಿಶುದ್ಧ ತೈಲದಿಂದ ಅವನನ್ನು ಅಭಿಷೇಕಿಸಿದ್ದೇನೆ.
೨೧ ನನ್ನ ಹಸ್ತವು ಅವನ ಮೇಲೆ ಸ್ಥಿರವಾಗಿರುವುದು;
ನನ್ನ ಭುಜವು ಅವನನ್ನು ಬಲಪಡಿಸುವುದು.
೨೨ ವೈರಿಯ ಕುತಂತ್ರವು ಅವನಲ್ಲಿ ಸಾಗದು;
ಯಾವ ಕೆಡುಕನೂ ಅವನನ್ನು ಕುಗ್ಗಿಸಲಾರನು.
೨೩ ಅವನ ವಿರೋಧಿಗಳನ್ನು ಅವನ ಮುಂದೆಯೇ ಜಜ್ಜಿ ಹಾಕುವೆನು;
ಅವನ ದ್ವೇಷಿಗಳನ್ನು ಹತಮಾಡಿಬಿಡುವೆನು.
೨೪ ಆದರೆ ನನ್ನ ಪ್ರೀತಿ ಮತ್ತು ಸತ್ಯತೆಗಳು ಅವನೊಡನೆ ಇರುವವು;
ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವುದು.
೨೫ ಸಮುದ್ರದಿಂದ ನದಿಗಳವರೆಗೂ ಅವನ ಹಸ್ತಕ್ಕೆ ಅಧಿಕಾರವನ್ನು ಕೊಡುವೆನು.
೨೬ ಅವನು ನನಗೆ, ‘ನನ್ನ ತಂದೆಯೂ, ದೇವರೂ,
ಆಶ್ರಯದುರ್ಗವೂ ನೀನೇ’ ಎಂದು ಹೇಳುವನು.
೨೭ ನಾನಾದರೋ ಅವನನ್ನು ಜ್ಯೇಷ್ಠಪುತ್ರನನ್ನಾಗಿಯೂ,
ಭೂರಾಜರಲ್ಲಿ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು.
೨೮ ನನ್ನ ಕೃಪೆಯು ಅವನಲ್ಲಿ ಶಾಶ್ವತವಾಗಿ ಇರುವುದು;
ನನ್ನ ಒಡಂಬಡಿಕೆಯು ಅವನಲ್ಲಿ ಸ್ಥಿರವಾಗಿರುವುದು.
೨೯ ಅವನ ಸಂತಾನವನ್ನು ಯಾವಾಗಲೂ ಉಳಿಸುವೆನು.
ಅವನ ಸಿಂಹಾಸನವು ಆಕಾಶವಿರುವವರೆಗೂ ಇರುವುದು.
೩೦ ಅವನ ಸಂತಾನದವರು ನನ್ನ ಧರ್ಮಶಾಸ್ತ್ರವನ್ನು ಬಿಟ್ಟು,
ನನ್ನ ಆಜ್ಞೆಗಳಲ್ಲಿ ನಡೆಯದೆ,
೩೧ ನನ್ನ ವಿಧಿಗಳನ್ನು ಮೀರಿ, ನನ್ನ ನೇಮಗಳನ್ನು ಪಾಲಿಸದೆ ಹೋದರೆ,
೩೨ ಆಗ ನಾನು ಅವರ ದ್ರೋಹಕ್ಕಾಗಿ ಅವರನ್ನು ಬೆತ್ತದಿಂದ ಹೊಡೆಯುವೆನು;
ಅವರ ಅಪರಾಧಕ್ಕಾಗಿ ಪೆಟ್ಟುಕೊಡುವೆನು.
೩೩ ಆದರೂ ನಾನು ಅವನಲ್ಲಿಟ್ಟಿರುವ ಕೃಪೆಯನ್ನು ತಪ್ಪಿಸುವುದಿಲ್ಲ;
ನನ್ನ ನಂಬಿಗಸ್ತಿಕೆಯಿಂದ ಜಾರುವುದಿಲ್ಲ.
೩೪ ನನ್ನ ಒಡಂಬಡಿಕೆಯನ್ನು ಭಂಗಪಡಿಸುವುದಿಲ್ಲ;
ನನ್ನ ಮಾತನ್ನು ಬದಲಿಸುವುದಿಲ್ಲ.
೩೫ ನನ್ನ ಪವಿತ್ರತ್ವದಲ್ಲಿ ಆಣೆಯಿಟ್ಟು ಒಂದು ಸಂಗತಿಯನ್ನು ಹೇಳಿದ್ದೇನೆ;
ಅದರ ವಿಷಯದಲ್ಲಿ ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.
೩೬ ಅದೇನೆಂದರೆ, ಅವನ ಸಂತತಿಯು ಶಾಶ್ವತವಾಗಿ ಇರುವುದು;
ಅವನ ಸಿಂಹಾಸನವು ಸೂರ್ಯನಂತೆ ನನ್ನ ಎದುರಿನಲ್ಲಿದ್ದು,
೩೭ ಚಂದ್ರನಂತೆ ನಿತ್ಯಕ್ಕೂ ಸ್ಥಿರವಾಗಿರುವುದು.
ಪರಲೋಕದ ಸಾಕ್ಷಿ ಸತ್ಯವೇ ಸರಿ.”
ಸೆಲಾ.
೩೮ ಹೀಗೆ ಹೇಳಿದ ನೀನು ನಿನ್ನ ಅಭಿಷಿಕ್ತನ ಮೇಲೆ ಕೋಪಗೊಂಡವನಾಗಿ,
ಅವನನ್ನು ಅಸಹ್ಯಿಸಿ ತಳ್ಳಿಬಿಟ್ಟಿದ್ದೀ.
೩೯ ನೀನು ನಿನ್ನ ಸೇವಕನ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿ,
ಅವನ ಕಿರೀಟವನ್ನು ನೆಲಕ್ಕೆ ಹಾಕಿ ಅಪವಿತ್ರಮಾಡಿದ್ದೀ.
೪೦ ಅವನ ದೇಶದ ಮೇರೆಗಳನ್ನು ಕೆಡವಿ, ಕೋಟೆಗಳನ್ನು ಹಾಳುಮಾಡಿದ್ದೀ.
೪೧ ದಾರಿಗರೆಲ್ಲರೂ ಅವನನ್ನು ಸುಲಿಗೆ ಮಾಡುತ್ತಾರೆ;
ಅವನು ನೆರೆಹೊರೆಯವರ ಪರಿಹಾಸ್ಯಕ್ಕೆ ಗುರಿಯಾಗಿದ್ದಾನೆ.
೪೨ ಅವನ ವಿರೋಧಿಗಳ ಹಸ್ತವನ್ನು ಉನ್ನತಪಡಿಸಿದ್ದೀ;
ಅವನ ವೈರಿಗಳಿಗೆಲ್ಲಾ ಆನಂದವಾಗುವಂತೆ ಮಾಡಿದ್ದೀ.
೪೩ ಇದಲ್ಲದೆ ಅವನ ಕತ್ತಿಯನ್ನು ತಿರುಗಿಸಿಬಿಟ್ಟಿದ್ದೀ;
ಅವನನ್ನು ಯುದ್ಧದಲ್ಲಿ ನಿಲ್ಲದಂತೆ ಮಾಡಿದ್ದೀ.
೪೪ ಅವನ ವೈಭವವನ್ನು ತಡೆದುಬಿಟ್ಟಿದ್ದೀ;
ಅವನ ಸಿಂಹಾಸನವನ್ನು ನೆಲಕ್ಕುರುಳಿಸಿದ್ದೀ.
೪೫ ಅವನ ಯೌವನದ ದಿನಗಳನ್ನು ಬೇಗ ಮುಗಿಸಿ,
ನಾಚಿಕೆಯು ಅವನನ್ನು ಕವಿಯುವಂತೆ ಮಾಡಿದ್ದಿ.
ಸೆಲಾ
೪೬ ಯೆಹೋವನೇ, ಇನ್ನೆಷ್ಟರವರೆಗೆ ಮರೆಯಾಗಿರುವಿ?
ನಿನ್ನ ಕೋಪಾಗ್ನಿಯು ನಮ್ಮ ಮೇಲೆ ಸದಾ ಉರಿಯುತ್ತಿರಬೇಕೋ?
೪೭ ನನ್ನ ಆಯುಷ್ಯವು ಎಷ್ಟು ಅಲ್ಪವೆಂದೂ,
ಎಂಥಾ ವ್ಯರ್ಥ ಜೀವಿತಕ್ಕಾಗಿ ಮನುಷ್ಯರನ್ನು ನಿರ್ಮಿಸಿದ್ದಿ ಎಂದೂ ಜ್ಞಾಪಿಸಿಕೋ.
೪೮ ತಮ್ಮನ್ನು ಪಾತಾಳಕ್ಕೆ ತಪ್ಪಿಸಿಕೊಂಡು, ಮರಣಹೊಂದದೆ
ಚಿರಂಜೀವಿಯಾಗಿರುವವರು ಯಾರು?
ಸೆಲಾ
೪೯ ಕರ್ತನೇ, ನೀನು ನಿನ್ನ ಸತ್ಯತೆಯಲ್ಲಿ ಆಣೆಯಿಟ್ಟು,
ದಾವೀದನಿಗೆ ವಾಗ್ದಾನಮಾಡಿ ನಡೆಸುತ್ತಿದ್ದ ಹಿಂದಿನ ಕೃಪಾಕಾರ್ಯಗಳು ಎಲ್ಲಿ?
೫೦ ಯೆಹೋವನೇ, ನಿನ್ನ ವೈರಿಗಳು ನಿಂದಿಸುತ್ತಾರೆ;
ನಿನ್ನ ಅಭಿಷಿಕ್ತನನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡುತ್ತಾರೆ.
೫೧ ಕರ್ತನೇ, ನಿನ್ನ ಸೇವಕರಿಗಾಗುವ ಅಪವಾದವನ್ನೂ,
ನಾನು ಎಲ್ಲಾ ಜನಾಂಗಗಳ ನಿಂದಾಭಾರವನ್ನು ಉಡಿಲಲ್ಲಿ ಕಟ್ಟಿರುವುದನ್ನೂ ಜ್ಞಾಪಿಸಿಕೋ.
೫೨ ಯೆಹೋವನಿಗೆ ಸದಾಕಾಲವೂ ಕೊಂಡಾಟವಾಗಲಿ. ಆಮೆನ್, ಆಮೆನ್.