ರಾಜಾಶೀರ್ವಾದ
೭೨
ಸೊಲೊಮೋನನ ಕೀರ್ತನೆ.
(ಕೀರ್ತ. 21; 45)
೧ ದೇವರೇ, ಅರಸನಿಗೆ ನಿನ್ನ ನ್ಯಾಯವನ್ನು;
ರಾಜಕುಮಾರನಿಗೆ ನಿನ್ನ ನೀತಿಯನ್ನು ಅನುಗ್ರಹಿಸು.
೨ ಅವನು ನಿನ್ನ ಜನರಿಗೆ ನೀತಿಯಿಂದಲೂ,
ಕುಗ್ಗಿಹೋದ ನಿನ್ನವರಿಗೆ ನ್ಯಾಯವಾಗಿಯೂ ತೀರ್ಪುಕೊಡಲಿ.
೩ ಗುಡ್ಡ ದಿನ್ನೆಗಳೆಲ್ಲವು ನಿನ್ನ ಜನರಿಗೋಸ್ಕರ,
ನೀತಿಗನುಸಾರವಾಗಿ ಸುಕ್ಷೇಮವನ್ನು ಫಲಿಸಲಿ.
೪ ಅವನು ಬಡವರ ನ್ಯಾಯವನ್ನು ಸ್ಥಾಪಿಸಲಿ;
ದೀನರ ಮಕ್ಕಳನ್ನು ಉದ್ಧರಿಸಲಿ;
ಪ್ರಜಾಹಿಂಸಕರನ್ನು ಖಂಡಿಸಿಬಿಡಲಿ.
೫ ಸೂರ್ಯನು, ಚಂದ್ರನು ಇರುವವರೆಗೂ,
ತಲತಲಾಂತರಗಳವರೆಗೂ ಅವರು ನಿನಗೆ ಭಯಪಡಲಿ.
೬ ಹುಲ್ಲುಕೊಯ್ದ ಮೇಹುಗಾಡಿನ ಮೇಲೆ ಸುರಿಯುವ ವೃಷ್ಟಿಯಂತೆಯೂ,
ಭೂಮಿಯನ್ನು ನೆನಸುವ ಹದಮಳೆಯಂತೆಯೂ ಅವನು ಇರಲಿ.
೭ ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ;
ಚಂದ್ರನಿರುವವರೆಗೂ ಪರಿಪೂರ್ಣ ಸೌಭಾಗ್ಯವಿರಲಿ.
೮ ಅವನು ಸಮುದ್ರದಿಂದ ಸಮುದ್ರದ ವರೆಗೂ,
ಯೂಫ್ರೇಟೀಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಆಳಲಿ.
೯ ಅರಣ್ಯವಾಸಿಗಳು ಅವನಿಗೆ ಅಡ್ಡಬೀಳಲಿ;
ಅವನ ವೈರಿಗಳು ಮಣ್ಣುಮುಕ್ಕಲಿ.
೧೦ ತಾರ್ಷೀಷ್ ಪ್ರಾಂತ್ಯದ ಮತ್ತು ಸಮುದ್ರದ ಕರಾವಳಿಯ ಅರಸರು ಕಪ್ಪಗಳನ್ನು ಸಲ್ಲಿಸಲಿ;
ಶೆಬಾ ಮತ್ತು ಸೆಬಾ ಎಂಬ ಪ್ರದೇಶಗಳ ರಾಜರೂ ಕಾಣಿಕೆಗಳನ್ನು ತಂದೊಪ್ಪಿಸಲಿ.
೧೧ ಎಲ್ಲಾ ಅರಸರೂ ಅವನಿಗೆ ಸಾಷ್ಟಾಂಗವೆರಗಲಿ;
ಸರ್ವಜನಾಂಗಗಳು ಆತನನ್ನು ಸೇವಿಸಲಿ.
೧೨ ಏಕೆಂದರೆ ಅವನು ಮೊರೆಯಿಡುವ ಬಡವರನ್ನೂ,
ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು.
೧೩ ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.
೧೪ ಕುಯುಕ್ತಿ, ಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು;
ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.
೧೫ ಅವನು ಬಾಳಲಿ; ಶೆಬಾ ಪ್ರಾಂತ್ಯದ ಬಂಗಾರವು ಅವನಿಗೆ ಸಮರ್ಪಣೆಯಾಗಲಿ.
ಅವನಿಗೋಸ್ಕರ ಯಾವಾಗಲೂ ದೇವರಲ್ಲಿ ವಿಜ್ಞಾಪನೆಯು ನಡೆಯಲಿ;
ದಿನದಿನವೂ ಅವನಿಗೆ ಆಶೀರ್ವಾದಗಳುಉಂಟಾಗಲಿ.
೧೬ ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ;
ಪೈರುಗಳ ಶಬ್ದವು ಲೆಬನೋನಿನ ಮರಗಳ ಸಪ್ಪಳದಂತಿರಲಿ.
ಹೊಲದಲ್ಲಿ ಕಾಯಿಪಲ್ಯದಂತೆ ಪಟ್ಟಣಗಳಲ್ಲಿ ಜನರು ಹೆಚ್ಚಲಿ.
೧೭ ಅವನ ನಾಮವು ಸ್ಥಿರವಾಗಿರಲಿ;
ಅವನ ಹೆಸರು ಸೂರ್ಯನಿರುವವರೆಗೆ ಇರಲಿ.
ಎಲ್ಲಾ ಜನಾಂಗಗಳವರು ಅವನನ್ನು ಧನ್ಯನೆಂದು ಹೇಳಿ,
ಅವನಿಗಿದ್ದ ಆಶೀರ್ವಾದವು ತಮಗೂ ಆಗಬೇಕೆಂದು ಕೋರುವವರಾಗಲಿ.
೧೮ ಮಹತ್ಕಾರ್ಯಗಳನ್ನು ನಡೆಸುವುದರಲ್ಲಿ ಅದ್ವಿತೀಯನೂ,
ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವು.
೧೯ ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲಕ್ಕೂ ಸ್ತುತಿ ಇರಲಿ;
ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ. ಆಮೆನ್. ಆಮೆನ್.
೨೦ ಇಲ್ಲಿಗೆ ಇಷಯನ ಮಗನಾದ ದಾವೀದನ ಪ್ರಾರ್ಥನೆಗಳ ಸಮಾಪ್ತಿ.