ಅಪಜಯ ಹೊಂದಿದವರು ಜಯಕ್ಕಾಗಿ ಪ್ರಾರ್ಥಿಸುವುದು
೬೦
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಷೂಷನ್ ಎದೂತೆಂಬ ರಾಗ; ದಾವೀದನು ಅರಾಮ್ ರಾಜ್ಯಗಳ ಸಂಗಡ ಯುದ್ಧ ಮಾಡುವಷ್ಟರೊಳಗೆ ಯೋವಾಬನು ಹಿಂದಿರುಗಿ ಹೋಗಿ ಉಪ್ಪಿನ ತಗ್ಗಿನಲ್ಲಿ ಹನ್ನೆರಡು ಸಾವಿರ ಎದೋಮ್ಯರನ್ನು ಹೊಡೆದಾಗ ದಾವೀದನು ರಚಿಸಿದ ಕಾವ್ಯ. ಬಾಯಿಪಾಠ ಮಾಡಿಸತಕ್ಕದ್ದು.
 
೧ ದೇವರೇ, ನೀನು ನಮ್ಮನ್ನು ಕೋಪದಿಂದ ತಳ್ಳಿ ಕೆಡವಿಬಿಟ್ಟಿದ್ದೀ;
ನಮ್ಮ ರಕ್ಷಣಾ ಸಾಧನವನ್ನು ಮುರಿದುಬಿಟ್ಟಿದ್ದೀ;
ನಮ್ಮನ್ನು ಪುನಃ ಸ್ಥಿರವಾಗಿ ನಿಲ್ಲಿಸು.
೨ ನೀನು ದೇಶವನ್ನು ಕಂಪನಗೊಳಿಸಿ ಒಡೆದುಬಿಟ್ಟಿದ್ದೀ;
ಅದು ನಡುಗುತ್ತಿರುವುದಲ್ಲಾ.
ಅದರ ಒಡಕುಗಳನ್ನು ಸರಿಮಾಡು;
೩ ನಿನ್ನ ಜನರನ್ನು ಸಂಕಟಕ್ಕೆ ಗುರಿಪಡಿಸಿದ್ದೀ;
ನೀನು ನಮಗೆ ರೋಷವೆಂಬ ಪಾತ್ರೆಯಿಂದ ಪಾನಮಾಡಿಸಿದಿ.
೪ ನೀನು ನಿನ್ನ ಭಕ್ತರಿಗೆ ಧ್ವಜವನ್ನು ಕೊಟ್ಟಿದ್ದು,
ಅವರು ಬಿಲ್ಲುಗಾರರಿಗೆ ಹೆದರಿ ಓಡುವುದಕ್ಕೋ?
ಸೆಲಾ
೫ ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು.
ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು.
೬ ದೇವರು ತನ್ನ ಪವಿತ್ರತ್ವವನ್ನು ಸಾಕ್ಷಿಯಾಗಿ ನುಡಿದಿದ್ದಾನೆ.
ಜಯಘೋಷಮಾಡುವೆನು;
ಶೆಖೆಮ್ ಪ್ರದೇಶವನ್ನು ಹಂಚುವೆನು.
ಸುಖೋತ್ ಬಯಲನ್ನು ಅಳೆದುಕೊಡುವೆನು.
೭ ಗಿಲ್ಯಾದ್ ಸೀಮೆಯೂ ಮತ್ತು ಮನಸ್ಸೆಯ ದೇಶವೂ ನನ್ನವು;
ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣ.
ನನ್ನ ರಾಜದಂಡವು ಯೆಹೂದಕುಲವೇ.
೮ ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆಯು;
ಎದೋಮ್ ಸೀಮೆ ನನ್ನ ಪಾದರಕ್ಷೆಗಳನ್ನು ಬಿಡುವ ಸ್ಥಳ.
ಫಿಲಿಷ್ಟಿಯರು ನನ್ನ ವಿಷಯವಾಗಿ ಕೂಗಿಕೊಳ್ಳಲಿ.
೯ ಕೋಟೆಕೊತ್ತಲುಗಳುಳ್ಳ ನಗರಕ್ಕೆ
ನನ್ನನ್ನು ಕರೆದುಕೊಂಡು ಹೋಗುವವರು ಯಾರು?
ಎದೋಮ್ ಪ್ರಾಂತ್ಯದೊಳಗೆ ನನ್ನನ್ನು ಸೇರಿಸುವವರು ಯಾರು?
೧೦ ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ!
ದೇವರೇ, ನಮ್ಮನ್ನು ಕೈಬಿಟ್ಟಿರುವೆಯಾ?
೧೧ ನಮಗೆ ಕೈನೀಡಿ ಶತ್ರುಬಾಧೆಯಿಂದ ಪಾರುಮಾಡು;
ಮನುಷ್ಯರ ಸಹಾಯವು ವ್ಯರ್ಥ.
೧೨ ದೇವರ ಸಹಾಯದಿಂದ ಶೂರಕೃತ್ಯಗಳನ್ನು ನಡೆಸುವೆವು;
ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.