ದೇವರು ಸದಾಚಾರವನ್ನೇ ಮೆಚ್ಚುವನು
೫೦
ಆಸಾಫನ ಕೀರ್ತನೆ.
 
೧ ಬಲಿಷ್ಠ ದೇವರಾದ ಯೆಹೋವನು
ಪೂರ್ವದಿಂದ ಪಶ್ಚಿಮ ದಿಕ್ಕಿನವರೆಗೂ ಇರುವ ಭೂನಿವಾಸಿಗಳೆಲ್ಲರನ್ನೂ,
ತನ್ನ ಸನ್ನಿಧಿಯಲ್ಲಿ ಬರಬೇಕೆಂದು ಕರೆಯುತ್ತಾನೆ.
೨ ಅತ್ಯಂತ ರಮಣೀಯವಾದ ಚೀಯೋನಿನಲ್ಲಿರುವ,
ದೇವರು ಪ್ರಕಾಶಿಸುತ್ತಾನೆ.
೩ ನಮ್ಮ ದೇವರು ಪ್ರತ್ಯಕ್ಷನಾಗುವನು,
ಎಷ್ಟು ಮಾತ್ರವೂ ಸುಮ್ಮನಿರುವುದಿಲ್ಲ;
ಆತನ ಮುಂಭಾಗದಲ್ಲಿ ಬೆಂಕಿ ಪ್ರಜ್ವಲಿಸುತ್ತದೆ;
ಆತನ ಸುತ್ತಲು ಬಿರುಗಾಳಿ ಬೀಸುತ್ತದೆ.
೪ ಆತನು ತನ್ನ ಪ್ರಜೆಗಳ ನ್ಯಾಯವಿಚಾರಣೆಯಲ್ಲಿ ಭೂಮ್ಯಾಕಾಶಗಳನ್ನು
ಸಾಕ್ಷಿಗಳನ್ನಾಗಿ ನೇಮಿಸುತ್ತಾನೆ.
೫ “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆಯನ್ನು ಮಾಡಿಕೊಂಡ ನನ್ನ ಭಕ್ತರನ್ನು
ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸುತ್ತಾನೆ.
೬ ದೇವರು ತಾನೇ ನ್ಯಾಯಾಧಿಪತಿ;
ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುತ್ತದೆ.
ಸೆಲಾ
೭ ಆತನು ಆಜ್ಞಾಪಿಸುವುದು ಏನೆಂದರೆ, “ಪ್ರಜೆಗಳಿರಾ, ಇಸ್ರಾಯೇಲ್ಯರೇ,
ದೇವರಾದ ನಾನೇ ನಿಮ್ಮ ದೇವರು;
ನಿಮಗೆ ಖಂಡಿತವಾಗಿ ಹೇಳುತ್ತೇನೆ” ಕೇಳಿರಿ.
೮ ನಾನು ನಿಮ್ಮ ಯಜ್ಞದ ವಿಷಯದಲ್ಲಿ ತಪ್ಪೆಣಿಸುವುದಿಲ್ಲ;
ಸರ್ವಾಂಗಹೋಮಗಳನ್ನು ನೀವು ನಿತ್ಯವೂ ನನಗೆ ಸಮರ್ಪಿಸುತ್ತೀರಲ್ಲಾ.
೯ ಆದರೂ ನಿಮ್ಮ ಮನೆಗಳಿಂದ ನನಗೆ ಹೋರಿ ಬೇಕಾಗಿಲ್ಲ;
ನಿಮ್ಮ ದೊಡ್ಡಿಗಳಿಂದ ಹೋತ ಬೇಕಿಲ್ಲ.
೧೦ ಕಾಡಿನಲ್ಲಿರುವ ಸರ್ವಮೃಗಗಳೂ,
ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ.
೧೧ ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆ;
ಅಡವಿಯ ಜೀವಜಂತುಗಳೆಲ್ಲಾ ನನಗೆ ಗೊತ್ತುಂಟು.
೧೨ ನನಗೆ ಹಸಿವೆಯಿದ್ದರೆ ನಿಮಗೆ ತಿಳಿಸುವುದಿಲ್ಲ;
ಏಕೆಂದರೆ ಲೋಕವೂ ಅದರಲ್ಲಿರುವುದೆಲ್ಲವೂ ನನ್ನದಲ್ಲವೇ.
೧೩ ನಾನು ಹೋರಿಗಳ ಮಾಂಸವನ್ನು ತಿನ್ನುವುದೂ,
ಹೋತಗಳ ರಕ್ತವನ್ನು ಕುಡಿಯುವುದೂ ಉಂಟೇ?
೧೪ ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ;
ವಾಗ್ದಾನ ಮಾಡಿದ ಹರಕೆಗಳನ್ನು ಪರಾತ್ಪರನಿಗೆ ಸಲ್ಲಿಸಿರಿ.
೧೫ ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ, ಬಿಡಿಸುವೆನು;
ಆಗ ನನ್ನನ್ನು ಕೊಂಡಾಡುವಿರಿ.
೧೬ ದುಷ್ಟರಿಗಾದರೋ ದೇವರು ಹೇಳುವುದು ಏನೆಂದರೆ,
“ನನ್ನ ವಿಧಿಗಳನ್ನು ಹೇಳುವುದಕ್ಕೆ ನಿಮಗೇನು ಬಾಧ್ಯತೆ ಉಂಟು?
ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಚರಿಸುವುದೇಕೆ?
೧೭ ನೀವೋ ನನ್ನ ಸುಶಿಕ್ಷಣವನ್ನು ಹಗೆಮಾಡುತ್ತೀರಲ್ಲಾ;
ನನ್ನ ಆಜ್ಞೆಯನ್ನು ಉಲ್ಲಂಘಿಸುತ್ತೀರಿ.
೧೮ ನೀವು ಕಳ್ಳರೊಡನೆ ಸೇರಿ ಅವರಿಗೆ ಸಮ್ಮತಿ ನೀಡುತ್ತೀರಿ;
ಜಾರರ ಒಡನಾಟದಲ್ಲಿ ನೀವು ಸಂತೋಷದಿಂದ ಇರುತ್ತೀರಿ.
೧೯ ನಿಮ್ಮ ಬಾಯಿಯನ್ನು ಕೇಡಿಗೆ ಒಪ್ಪಿಸುತ್ತೀರಿ;
ನಾಲಿಗೆಯು ಮೋಸವನ್ನು ನೇಯುತ್ತದೆ.
೨೦ ನೀವು ಕುಳಿತುಕೊಂಡು ನಿಮ್ಮ ಸಹೋದರರ ವಿರುದ್ಧವಾಗಿ ಮಾತನಾಡುತ್ತೀರಿ;
ನಿಮ್ಮ ಒಡಹುಟ್ಟಿದವರನ್ನು ದೂರುತ್ತೀರಿ.
೨೧ ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.
ಆದುದರಿಂದ, ‘ದೇವರೂ ನಮ್ಮಂಥವನೇ’ ಎಂದು ತಿಳಿದುಕೊಂಡಿರಿ.
ಈಗಲಾದರೋ ನಾನು ಎಲ್ಲವನ್ನು,
ನಿಮ್ಮ ಮುಂದೆ ವಿವರಿಸಿ ನಿಮ್ಮನ್ನು ಅಪರಾಧಿಗಳೆಂದು ಸ್ಥಾಪಿಸುವೆನು.
೨೨ ದೇವರನ್ನು ಬಿಟ್ಟವರೇ, ಇದನ್ನು ಮನದಟ್ಟು ಮಾಡಿಕೊಳ್ಳಿರಿ;
ಇಲ್ಲವಾದರೆ ನಿಮ್ಮನ್ನು ಹರಿದುಬಿಟ್ಟೇನು.
ನಿಮ್ಮನ್ನು ತಪ್ಪಿಸುವವರು ಯಾರೂ ಇರುವುದಿಲ್ಲ.
೨೩ ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು;
ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.”