ಯೆಹೋವನು ಭಕ್ತಪಾಲಕನೂ, ಸರ್ವಾಧಿಪತಿಯೂ ಎಂಬುದು
೪೬
1 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಗೀತೆ; ತಾರಕಸ್ಥಾಯಿಯಲ್ಲಿ ಹಾಡತಕ್ಕದ್ದು.
(ಕೀರ್ತ. 76; 1 ಪೂರ್ವ. 15:20)
೧ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ;
ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.
೨ ಆದುದರಿಂದ ಭೂಮಿಯು ಮಾರ್ಪಟ್ಟರೂ,
ಬೆಟ್ಟಗಳು ಸಮುದ್ರದಲ್ಲಿ ಮುಳುಗಿಹೋದರೂ,
ನಮಗೇನೂ ಭಯವಿಲ್ಲ.
೩ ಸಮುದ್ರವು ಬೋರ್ಗರೆಯುತ್ತಾ ನೊರೆಯನ್ನು ಕಾರಿದರೇನು?
ಅದರ ಅಲ್ಲಕಲ್ಲೋಲಗಳಿಂದ ಪರ್ವತಗಳು ಚಲಿಸಿದರು ಭಯವಿಲ್ಲ?
ಸೆಲಾ
೪ ಒಂದು ನದಿ ಇದೆ; ಅದರ ಕಾಲಿವೆಗಳು,
ಪರಾತ್ಪರನ ಪರಿಶುದ್ಧ ನಿವಾಸಸ್ಥಾನವಾಗಿರುವ,
ದೇವರ ನಗರವನ್ನು ಸಂತೋಷಪಡಿಸುತ್ತವೆ.
೫ ದೇವರು ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ.
ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು.
೬ ಜನಾಂಗಗಳು ಕಳವಳಗೊಂಡವು;
ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿ ಹೋಯಿತು.
೭ ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ;
ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ.
ಸೆಲಾ
೮ ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ;
ಆತನು ಭೂಲೋಕದಲ್ಲಿ ಎಂಥಾ ವಿನಾಶವನ್ನು ಉಂಟುಮಾಡಿದ್ದಾನೆ.
೯ ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ಸ್ಥಗಿತಗೊಳಿಸಿದ್ದಾನೆ;
ಬಿಲ್ಲುಗಳನ್ನೂ, ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ;
ರಥಗಳನ್ನು ದಹಿಸಿಬಿಟ್ಟಿದ್ದಾನೆ.
೧೦ “ಮೌನವಾಗಿರ್ರಿ, ನಾನೇ ದೇವರು;
ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ” ಎಂದು ಹೇಳಿದ್ದಾನೆ.
೧೧ ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ;
ಯಾಕೋಬವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ.
ಸೆಲಾ.