ವೈರಿಗಳಿಂದ ಬಿಡಿಸಬೇಕೆಂಬ ವಿಜ್ಞಾಪನೆ
೩೫
ದಾವೀದನ ಕೀರ್ತನೆ.
(ಕೀರ್ತ. 7)
 
೧ ಯೆಹೋವನೇ, ನನ್ನ ಸಂಗಡ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯಮಾಡು;
ನನ್ನ ಮೇಲೆ ಯುದ್ಧ ಮಾಡುವವರ ಸಂಗಡ ಯುದ್ಧ ಮಾಡು.
೨ ಖೇಡ್ಯ ಮತ್ತು ಗುರಾಣಿಯನ್ನು ಹಿಡಿದುಕೊಂಡು,
ನನಗೆ ಸಹಾಯಕನಾಗಿ ನಿಲ್ಲು.
೩ ನೀನು ಭರ್ಜಿಯನ್ನೂ ಹಾಗೂ ಯುದ್ಧದ ಕೊಡಲಿಯನ್ನೂ ಹಿಡಿದು,
ನನ್ನನ್ನು ಹಿಂದಟ್ಟುವ ವೈರಿಗಳನ್ನು ಎದುರಿಸು;
“ನಾನೇ ನಿನ್ನ ರಕ್ಷಣೆ” ಎಂದು ಅಭಯಕೊಡು.
೪ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವರು ಆಶಾಭಂಗಪಟ್ಟು ಅವಮಾನಹೊಂದಲಿ;
ನನಗೆ ಕೇಡನ್ನು ಕಲ್ಪಿಸುವವರು ಕಳವಳದಿಂದ ಹಿಂದಿರುಗಿ ಓಡಲಿ.
೫ ಅವರು ಗಾಳಿ ಹಾರಿಸುವ ಹೊಟ್ಟಿನಂತಾಗಲಿ;
ಯೆಹೋವನ ದೂತನು ಅವರನ್ನು ಅಟ್ಟಿಬಿಡಲಿ.
೬ ಕತ್ತಲೆಯೂ, ಜಾರಿಕೆಯೂ ಇರುವ ದಾರಿಯಲ್ಲಿ
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
೭ ಅವರು ನಿಷ್ಕಾರಣವಾಗಿ ನನಗೆ ಬಲೆಯೊಡ್ಡಿದ್ದಾರೆ;
ಕಾರಣವಿಲ್ಲದೆ ನನ್ನ ಪ್ರಾಣವನ್ನು ತೆಗೆಯಬೇಕೆಂದು ಗುಂಡಿಯನ್ನು ತೋಡಿದ್ದಾರೆ.
೮ ಅವನಿಗೆ ನಾಶನವು ಅಕಸ್ಮತ್ತಾಗಿ ಬರಲಿ;
ತಾನು ಹಾಸಿದ ಬಲೆಯಲ್ಲಿ ತಾನೇ ಸಿಕ್ಕಿಬೀಳಲಿ.
ತಾನು ತೋಡಿದ ಕುಣಿಯಲ್ಲಿ ತಾನೇ ಬಿದ್ದುಹೋಗಲಿ.
೯ ಆಗ ನನ್ನ ಮನಸ್ಸಿಗೆ ಯೆಹೋವನ ದೆಸೆಯಿಂದ ಹರ್ಷವುಂಟಾಗುವುದು;
ಆತನಿಂದಾದ ರಕ್ಷಣೆಯ ನಿಮಿತ್ತ ಆನಂದಪಡುವೆನು.
೧೦ ಯೆಹೋವನೇ, ಕುಗ್ಗಿದವನನ್ನು ಬಲಾತ್ಕಾರಿಯಿಂದಲೂ,
ದಿಕ್ಕಿಲ್ಲದ ಬಡವನನ್ನು ಸೂರೆಮಾಡುವವನಿಂದಲೂ ತಪ್ಪಿಸಿ ರಕ್ಷಿಸುವಾತನೇ,
“ನಿನಗೆ ಸಮಾನರು ಯಾರಿದ್ದಾರೆ?” ಎಂದು ನನ್ನ ಎಲುಬುಗಳೆಲ್ಲಾ ಹೇಳುವವು.
೧೧ ನ್ಯಾಯವಿರುದ್ಧ ಸಾಕ್ಷಿಗಳು ನನಗೆ ವಿರುದ್ಧವಾಗಿ ಎದ್ದಿದ್ದಾರೆ;
ನಾನರಿಯದ ಸಂಗತಿಗಳ ವಿಷಯದಲ್ಲಿ ನನ್ನನ್ನು ವಿಚಾರಿಸುತ್ತಾರೆ.
೧೨ ಅವರು ಉಪಕಾರಕ್ಕೆ ಅಪಕಾರವನ್ನೇ ಮಾಡುತ್ತಾರೆ;
ನಾನು ದಿಕ್ಕಿಲ್ಲದವನಾದೆನು.
೧೩ ನಾನಾದರೋ ಅವರ ಅಸ್ವಸ್ಥಕಾಲದಲ್ಲಿ ಗೋಣಿ ತಟ್ಟನ್ನೇ ಕಟ್ಟಿಕೊಂಡಿದ್ದೆನು;
ಉಪವಾಸದಿಂದ ನನ್ನ ಆತ್ಮವನ್ನು ನೋಯಿಸಿದೆನು.
ನನ್ನ ತಲೆಬಾಗಿಸಿ ಪ್ರಾರ್ಥಿಸಿದೆನು.
೧೪ ಅಸ್ವಸ್ಥನಾದವನನ್ನು ಸ್ನೇಹಿತನೋ, ಅಣ್ಣನೋ ಎಂದು ಭಾವಿಸಿ ನಡೆದುಕೊಂಡೆನು;
ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅಳುತ್ತಿದ್ದೆನು.
೧೫ ಆದರೂ ನನಗೆ ಆಪತ್ತು ಬಂದಾಗ,
ಅವರು ಸಂತೋಷಿಸುತ್ತಾ ಕೂಡಿಕೊಂಡರು;
ನಿರಾಕಾರಣವಾಗಿ ಈ ಭ್ರಷ್ಟರು ನನಗೆ ವಿರುದ್ಧವಾಗಿ ಕೂಡಿ ಕೊಂಡಾಡಿದರು,
ಸೂರೆ ಮಾಡುವುದನ್ನು ಬಿಡಲೇ ಇಲ್ಲ.
೧೬ ಆಹಾರಕ್ಕೋಸ್ಕರ ಪರಿಹಾಸ್ಯಮಾಡುವ ಮೂರ್ಖರ ಸಂಗಡ,
ನನ್ನ ಮೇಲೆ ಹಲ್ಲುಕಡಿಯುತ್ತಾರೆ.
೧೭ ಕರ್ತನೇ, ಇನ್ನೆಷ್ಟರ ವರೆಗೆ ಸುಮ್ಮನೆ ನೋಡುತ್ತಾ ಇರುವಿ?
ಅವರ ಅಪಾಯದಿಂದ ನನ್ನ ಪ್ರಾಣವನ್ನು ಬಿಡಿಸು;
ನನ್ನ ಪರಮಪ್ರಿಯ ಪ್ರಾಣವನ್ನು ಆ ಸಿಂಹಗಳ ಬಾಯಿಗೆ ಸಿಕ್ಕದಂತೆ ತಪ್ಪಿಸು.
೧೮ ಆಗ ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
ಬಹುಜನರ ಮುಂದೆ ಸ್ತುತಿಸುವೆನು.
೧೯ ಅವಶ್ಯವಿಲ್ಲದ ವಿರೋಧಿಗಳು ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಅವಕಾಶಕೊಡಬೇಡ;
ನಿಷ್ಕಾರಣ ವೈರಿಗಳ ಕಣ್ಣುಸನ್ನೆಗೆ ಆಸ್ಪದಕೊಡಬೇಡ.
೨೦ ಅವರ ಮಾತುಗಳು ಸಮಾಧಾನಕರವಾದವುಗಳಲ್ಲ;
ದೇಶದ ಸಾಧುಜನರನ್ನು ಕೆಡಿಸುವುದಕ್ಕೆ ಮೋಸವನ್ನು ಕಲ್ಪಿಸುತ್ತಾರೆ.
೨೧ ಅವರು ನನ್ನನ್ನು ನೋಡಿ ಬಾಯಿಕಿಸಿದು, “ಆಹಾ, ಆಹಾ, ನಮ್ಮ ಕಣ್ಣು ಕಂಡಿತಲ್ಲಾ” ಎಂದು ಅನ್ನುತ್ತಾರೆ.
೨೨ ಯೆಹೋವನೇ, ನೀನೇ ನೋಡಿದಿಯಲ್ಲವೇ;
ಸುಮ್ಮನಿರಬೇಡ;
ನನ್ನ ಒಡೆಯನೇ, ನನ್ನಿಂದ ದೂರವಾಗಿರುವುದೇಕೆ?
೨೩ ನನ್ನ ದೇವರೇ, ಎದ್ದು ನನಗಾಗಿ ನ್ಯಾಯವನ್ನು ನಿರ್ಣಯಿಸು;
ನನ್ನ ಕರ್ತನೇ, ಎಚ್ಚತ್ತು ನನ್ನ ವಿವಾದವನ್ನು ವಿಚಾರಿಸು.
೨೪ ಯೆಹೋವನೇ, ನನ್ನ ದೇವರೇ, ನಿನ್ನ ನೀತಿಗನುಸಾರವಾಗಿ ನನಗೆ ತೀರ್ಪುಕೊಡು;
ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಶತ್ರುಗಳಿಗೆ ಆಸ್ಪದವಿರಬಾರದು.
೨೫ ಆಹಾ, ನಮ್ಮ ಆಶೆ ನೆರವೇರಿತು ಅಂದುಕೊಳ್ಳುವುದಕ್ಕೆ ಅವರಿಗೆ ಅವಕಾಶವಿರಬಾರದು;
ಅವನನ್ನು ನುಂಗಿಬಿಟ್ಟಿದ್ದೇವೆಂದು ಅವರು ಕೊಚ್ಚಿಕೊಳ್ಳಬಾರದು.
೨೬ ನನ್ನ ಕೇಡಿನಲ್ಲಿ ಹಿಗ್ಗುವವರೆಲ್ಲರು ಆಶಾಭಂಗಪಟ್ಟು ಅವಮಾನಹೊಂದಲಿ;
ನನ್ನನ್ನು ಹೀಯಾಳಿಸಿ ಆತ್ಮಸ್ತುತಿಮಾಡಿಕೊಳ್ಳುವವರು,
ಅವಮಾನವನ್ನೂ, ಅಪಕೀರ್ತಿಯನ್ನೂ ಹೊಂದಲಿ.
೨೭ ನನ್ನ ನ್ಯಾಯಸ್ಥಾಪನೆಯನ್ನು ಬಯಸುವವರು
ಆನಂದದೊಡನೆ ಜಯಧ್ವನಿಮಾಡಲಿ;
ತನ್ನ ಸೇವಕನ ಹಿತವನ್ನು ಕೋರುವ ಯೆಹೋವನಿಗೆ ಸ್ತೋತ್ರ ಎಂದು ಯಾವಾಗಲೂ ಹೇಳುವವರಾಗಲಿ.
೨೮ ನನ್ನ ನಾಲಿಗೆಯು ನಿನ್ನ ನೀತಿಯನ್ನೂ ಮಹಿಮೆಯನ್ನೂ ದಿನವೆಲ್ಲಾ ವರ್ಣಿಸುವುದು.