೧೦
೧ ಲೇಖನ ರೂಪವಾದ ಪ್ರತಿಜ್ಞೆಗೆ ಸಹಿಮಾಡಿದವರು ಯಾರಾರೆಂದರೆ: ಹಕಲ್ಯನ ಮಗನಾದ ನೆಹೆಮೀಯನೆಂಬ ದೇಶಾಧಿಪತಿ ಹಾಗೂ ಯಾಜಕನಾದ ಚಿದ್ಕೀಯ, ೨ ಸೆರಾಯ, ಅಜರ್ಯ, ಯೆರೆಮೀಯ, ೩ ಪಷ್ಹೂರ್, ಅಮರ್ಯ, ಮಲ್ಕೀಯ, ೪ ಹಟ್ಟೂಷ್, ಶೆಬನ್ಯ, ಮಲ್ಲೂಕ್, ೫ ಹಾರಿಮ್, ಮೆರೇಮೋತ್, ಓಬದ್ಯ, ೬ ದಾನೀಯೇಲ್, ಗಿನ್ನೆತೋನ್, ಬಾರೂಕ್, ೭ ಮೆಷುಲ್ಲಾಮ್, ಅಬೀಯ, ಮಿಯ್ಯಾಮಿನ್, ೮ ಮಾಜ್ಯ, ಬಿಲ್ಗೈ, ಶೆಮಾಯ ಎಂಬ ಯಾಜಕರು.
೯ ಲೇವಿಯರಲ್ಲಿ: ಅಜನ್ಯನ ಮಗನಾದ ಯೇಷೂವ, ಹೇನಾದಾದ್, ಬಿನ್ನೂಯ್, ಕದ್ಮೀಯೇಲ್ ಎಂಬುವರು. ೧೦ ಇವರ ಬಂಧುಗಳಾದ ಶೆಬನ್ಯ, ಹೋದೀಯ. ಕೆಲೀಟ, ಪೆಲಾಯ, ಹಾನಾನ್, ೧೧ ಮೀಕ, ರೆಹೋಬ್, ಹಷಬ್ಯ, ೧೨ ಜಕ್ಕೂರ್,‍ ಶೇರೇಬ್ಯ, ಶೆಬನ್ಯ, ೧೩ ಹೋದೀಯ, ಬಾನೀ, ಬೆನೀನೂ ಎಂಬುವರು. ೧೪ ಜನಪ್ರಧಾನರಲ್ಲಿ ಪರೋಷ್, ಪಹತ್ ಮೋವಾಬ್, ಏಲಾಮ್, ಜತ್ತೂ, ಬಾನೀ, ೧೫ ಬುನ್ನೀ, ಅಜ್ಗಾದ್, ಬೇಬೈ ೧೬ ಅದೋನೀಯ, ಬಿಗ್ವೈ, ಆದೀನ್, ೧೭ ಆಟೇರ್, ಹಿಜ್ಕೀಯ, ಅಜ್ಜೂರ್, ೧೮ ಹೋದೀಯ, ಹಾಷುಮ್, ಬೇಚೈ, ೧೯ ಹಾರೀಫ್, ಅನಾತೋತ್, ನೇಬೈ, ೨೦ ಮಗ್ಪೀಯಾಷ್, ಮೆಷುಲ್ಲಾಮ್, ಹೇಜೀರ್, ೨೧ ಮೆಷೇಜಬೇಲ್, ಚಾದೋಕ್, ಯದ್ದೂವ, ೨೨ ಪೆಲಟ್ಯ, ಹಾನಾನ್, ಆನಾಯ, ೨೩ ಹೋಷೇಯ, ಹನನ್ಯ, ಹಷ್ಷೂಬ್, ೨೪ ಹಲೋಹೇಷ್, ಪಿಲ್ಹ, ಶೋಬೇಕ್, ೨೫ ರೆಹೂಮ್, ಹಷಬ್ನ, ಮಾಸೇಯ, ೨೬ ಅಹೀಯ, ಹಾನಾನ್, ಆನಾನ್, ೨೭ ಮಲ್ಲೂಕ್, ಹಾರಿಮ್, ಬಾನ ಎಂಬುವರು. ೨೮ ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಾಲಯದ ಸೇವಕರು ಉಳಿದ ಜನರು ಇವರಲ್ಲಿ ದೇವರ ಧರ್ಮೋಪದೇಶದ ನಿಮಿತ್ತವಾಗಿ ಅನ್ಯದೇಶದವರ ಗೊಡವೆಯನ್ನು ತೊರೆದುಬಿಟ್ಟವರು ತಮ್ಮ ತಮ್ಮ ಹೆಂಡತಿಯರು, ಗ್ರಹಿಸಿಕೊಳ್ಳಲು ಶಕ್ತರಾದ ಗಂಡು ಹೆಣ್ಣು ಮಕ್ಕಳು ಇವರೊಡನೆ ಬಂದರು. ೨೯ ಮುಖಂಡರು ತಮ್ಮ ಸಹೋದರರೊಂದಿಗೆ ಸೇರಿಕೊಂಡು, ತಾವು ದೇವರ ಸೇವಕನಾದ ಮೋಶೆಯ ಮುಖಾಂತರ ಕೊಡಲ್ಪಟ್ಟ ದೇವರ ಧರ್ಮೋಪದೇಶವನ್ನು ಅನುಸರಿಸಿ ತಮ್ಮ ಕರ್ತನಾದ ಯೆಹೋವನ ಎಲ್ಲಾ ಆಜ್ಞಾನಿಯಮವಿಧಿಗಳನ್ನು ಅನುಸರಿಸಿ ನಡೆಯುವುದಾಗಿ ಆಣೆಯಿಟ್ಟು ಪ್ರಮಾಣ ಮಾಡಿದರು. ಹೇಗೆಂದರೆ:
೩೦ ಈ ದೇಶನಿವಾಸಿಗಳಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಿಲ್ಲ ಮತ್ತು ನಮ್ಮ ಗಂಡು ಮಕ್ಕಳಿಗೋಸ್ಕರ ಅವರಿಂದ ಹೆಣ್ಣುಗಳನ್ನು ತೆಗೆದುಕೊಳ್ಳುವುದಿಲ್ಲ. ೩೧ ದೇಶನಿವಾಸಿಗಳು ಮಾರುವುದಕ್ಕೋಸ್ಕರ ತರುವ ಯಾವ ಸರಕುಗಳನ್ನೂ, ಧಾನ್ಯವನ್ನೂ, ಸಬ್ಬತ್ ಮೊದಲಾದ ಪರಿಶುದ್ಧ ದಿನಗಳಲ್ಲಿ ಅವುಗಳನ್ನು ನಾವು ಕೊಂಡುಕೊಳ್ಳುವುದಿಲ್ಲ. ಪ್ರತಿ ಏಳನೆಯ ವರ್ಷದ ಭೂಮಿಯ ಸಾಗುವಳಿಯನ್ನೂ ಇತರರು ಕೊಡಬೇಕಾದ ಸಾಲವನ್ನೂ ಮನ್ನಾ ಮಾಡಿಬಿಡುತ್ತೇವೆ. ೩೨ ವರ್ಷಕ್ಕೆ ಒಂದು ಶೆಕೆಲಿನ ಮೂರನೆಯ ಒಂದು ಭಾಗವನ್ನು ದೇವಾಲಯದ ಸೇವೆಗಾಗಿ ಕೊಡಬೇಕೆಂಬ ನಿಯಮವನ್ನು ಪಾಲಿಸಿಕೊಳ್ಳುತ್ತೇವೆ. ೩೩ ಆ ಹಣವು ದೇವರ ಸನ್ನಿಧಿಯಲ್ಲಿ ಇಡತಕ್ಕ ರೊಟ್ಟಿ, ನಿತ್ಯಧಾನ್ಯ, ನೈವೇದ್ಯ ಇವುಗಳಿಗಾಗಿಯೂ, ನಿತ್ಯ ಸರ್ವಾಂಗಹೋಮ, ಸಬ್ಬತ್ ದಿನ, ಅಮಾವಾಸ್ಯೆ ಮತ್ತು ಜಾತ್ರೆ ಉತ್ಸವ ಇವುಗಳಲ್ಲಿ ಮಾಡಬೇಕಾಗಿರುವ ಸರ್ವಾಂಗಹೋಮ, ಸಮಾಧಾನಯಜ್ಞ, ಇಸ್ರಾಯೇಲರ ದೋಷಪರಿಹಾರಕ ಯಜ್ಞ ಇವುಗಳಿಗಾಗಿಯೂ ನಮ್ಮ ದೇವರ ದೇವಾಲಯಕ್ಕೆ ಸಂಬಂಧವಾದ ಬೇರೆ ಎಲ್ಲಾ ಕೆಲಸಕಾರ್ಯಗಳಿಗಾಗಿಯೂ ವೆಚ್ಚವಾಗಬೇಕು.
೩೪ ಧರ್ಮಶಾಸ್ತ್ರವಿಧಿಗಳಿಗೆ ಅನುಸಾರವಾಗಿ ನಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮೇಲೆ ಬೆಂಕಿ ಉರಿಸುವುದಕ್ಕಾಗಿ, ಪ್ರತಿ ವರ್ಷವೂ ನಿಯಮಿತ ಕಾಲಗಳಲ್ಲಿ ನಮ್ಮ ದೇವಾಲಯಕ್ಕೆ ಕಟ್ಟಿಗೆ ದೊರಕುವ ಹಾಗೆ, ಆಯಾ ಗೋತ್ರಾನುಸಾರ ಕಟ್ಟಿಗೆ ದಾನ ಮಾಡತಕ್ಕವರು ಇಂಥವರೇ ಎಂಬುದನ್ನು ಯಾಜಕರೂ, ಲೇವಿಯರೂ, ಸಾಧಾರಣ ಜನರೂ ಆಗಿರುವ ನಮ್ಮಲ್ಲಿ ಚೀಟು ಹಾಕಿ ಗೊತ್ತುಮಾಡಿಕೊಳ್ಳುತ್ತೇವೆ. ೩೫ ನಮ್ಮ ಭೂಮಿಯ ಬೆಳೆಗಳ ಮತ್ತು ಎಲ್ಲಾ ಹಣ್ಣಿನ ಮರಗಳ ಪ್ರಥಮ ಫಲಗಳನ್ನು ಪ್ರತಿ ವರ್ಷವೂ ಯೆಹೋವನ ಆಲಯಕ್ಕೆ ತಂದುಕೊಂಡುವೆವು. ೩೬ ನಮ್ಮ ಚೊಚ್ಚಲಮಕ್ಕಳ ವಿಷಯದಲ್ಲೂ, ನಮ್ಮ ಪಶುಗಳ ಹಿಂಡುಗಳಲ್ಲಿ ಚೊಚ್ಚಲಮರಿಗಳ ವಿಷಯದಲ್ಲೂ ಧರ್ಮಶಾಸ್ತ್ರವಿಧಿಗಳಿಗೆ ಅನುಸಾರವಾಗಿ ನಡೆದುಕೊಳ್ಳುವೆವು. ನಮ್ಮ ಚೊಚ್ಚಲ ಕರುಗಳನ್ನೂ, ಚೊಚ್ಚಲ ಆಡು, ಕುರಿಮರಿಗಳನ್ನೂ ನಮ್ಮ ದೇವಾಲಯಕ್ಕೆ ತಂದು ಅಲ್ಲಿ ಕೆಲಸ ನಡೆಸುತ್ತಿರುವ ಯಾಜಕರಿಗೆ ಕೊಡುವೆವು. ೩೭ ನಾವು ದೇವರಿಗಾಗಿ ಪ್ರತ್ಯೇಕಿಸಿ ಇಡತಕ್ಕ ಪ್ರಥಮಫಲದ ಹಿಟ್ಟು, ಹಣ್ಣುಹಂಪಲು, ದ್ರಾಕ್ಷಾರಸ, ಎಣ್ಣೆ ಮೊದಲಾದವುಗಳನ್ನು ಯಾಜಕ ಸೇವೆಗೋಸ್ಕರ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದು ಇಡುವೆವು. ನಮ್ಮ ಭೂಮಿಯ ಹುಟ್ಟುವಳಿಯ ದಶಮಾಂಶವು ಲೇವಿಯರದಾಗಿರುತ್ತದೆ. ಲೇವಿಯರು ತಾವೇ ಬಂದು, ನಮ್ಮ ಸಾಗುವಳಿಯ ಊರುಗಳಲ್ಲಿ ಅದನ್ನು ಶೇಖರಿಸಿಕೊಳ್ಳಬೇಕು.
೩೮ ಅವರು ದಶಮಾಂಶವನ್ನು ಕೂಡಿಸುವಾಗ ಆರೋನನ ವಂಶದವನಾದ ಯಾಜಕನೊಬ್ಬನು ಅವರ ಸಂಗಡ ಇರಬೇಕು. ಲೇವಿಯರು ತಮಗೆ ದೊರಕಿರುವ ಭಾಗದ ದಶಮಾಂಶವನ್ನು ದೇವಾಲಯದ ಬಂಡಾರದ ಕೊಠಡಿಗಳಲ್ಲಿ ಇರಿಸಬೇಕು. ೩೯ ಇಸ್ರಾಯೇಲರೂ ಮತ್ತು ಲೇವಿಯರೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು, ದೇವರಿಗಾಗಿ ಪ್ರತ್ಯೇಕಿಸತಕ್ಕ ಕಾಣಿಕೆಗಳನ್ನು ತಂದು ದೇವಾಲಯದಲ್ಲಿ ಸೇವೆ ನಡೆಸುತ್ತಿರುವ ಯಾಜಕರೂ, ದ್ವಾರಪಾಲಕರು, ಗಾಯಕರು ಇರುವ ಕೊಠಡಿಗಳಲ್ಲಿಯೂ ಹಾಗು ಪವಿತ್ರಾಲಯದ ಪಾತ್ರೆಗಳನ್ನು ಇಡುವ ಕೊಠಡಿಗಳಲ್ಲಿಯೂ ಇರಿಸಬೇಕು. ಅಲ್ಲದೆ ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯ ಮಾಡುವುದಿಲ್ಲ ಎಂದು ಬರೆದುಕೊಟ್ಟರು.