೩
ಪೌಳಿಗೋಡೆಯನ್ನು ಕಟ್ಟಿದವರ ಪಟ್ಟಿ
೧ ಹೀಗೆ ಮಹಾಯಾಜಕನಾದ ಎಲ್ಯಾಷೀಬನೂ ಅವನ ಕುಟುಂಬದ ಯಾಜಕರೂ ಕುರಿಬಾಗಿಲನ್ನು ಕಟ್ಟಿ ಅದನ್ನು ಪ್ರತಿಷ್ಠಿಸಿ ಅದಕ್ಕೆ ಬಾಗಿಲುಗಳನ್ನು ಇಟ್ಟರು. ಅಲ್ಲಿಂದ ಹಮ್ಮೆಯಾ ಗೋಪುರದವರೆಗೆ ಗೋಡೆಕಟ್ಟಿ ಅದನ್ನು ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಗೋಪುರದವರೆಗೂ ಕಟ್ಟಿದರು. ೨ ಅಲ್ಲಿಂದ ಆಚೆಗೆ ಕಟ್ಟುತ್ತಿದ್ದವರು ಯೆರಿಕೋವಿನವರು; ನಂತರ ಇಮ್ರಿಯನ ಮಗನಾದ ಜಕ್ಕೂರನು.
೩ ಮೀನುಬಾಗಿಲನ್ನು ಕಟ್ಟಿದವರು ಹಸ್ಸೆನಾಹನ ಮನೆಯವರು. ಇವರು ಅವುಗಳಿಗೆ ಹೊಸ್ತಿಲುಗಳನ್ನಿಟ್ಟು ಅದಕ್ಕೆ ಬಾಗಿಲು ತಿರುಗುಣಿ ಅಗುಳಿಗಳನ್ನು ಇರಿಸಿದರು. ೪ ಅಲ್ಲಿಂದ ಮುಂದಕ್ಕೆ ಗೋಡೆಯನ್ನು ದುರಸ್ತಿ ಮಾಡಿಸಿದವನು ಊರೀಯನ ಮಗನೂ ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್. ಆ ಮೇಲೆ ಬೆರೆಕ್ಯನ ಮಗನೂ ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ನಂತರ ಬಾನನ ಮಗನಾದ ಚಾದೋಕ್; ಮುಂದಕ್ಕೆ ತೆಕೋವದವರು. ೫ ತೆಕೋವದವರಲ್ಲಿ ಶ್ರೀಮಂತರಾದರೋ ತಮ್ಮ ಒಡೆಯರ ಸೇವೆಗಾಗಿ ಹೆಗಲನ್ನು ಕೊಡಲಿಲ್ಲ.
೬ ಹಳೆಯದಾಗಿದ್ದ ಬಾಗಿಲುಗಳ ಜೀರ್ಣೋದ್ಧಾರ ಮಾಡಿದವರು ಪಾಸೇಹನ ಮಗನಾದ ಯೋಯಾದನೂ, ಬೆಸೋದ್ಯನ ಮಗನಾದ ಮೆಷುಲ್ಲಾಮನೂ. ಇವರು ಅವುಗಳಿಗೆ ಹೊಸ್ತಿಲುಗಳನ್ನಿಟ್ಟು ಅದಕ್ಕೆ ಬಾಗಿಲು, ತಿರುಗುಣಿ, ಅಗುಳಿಗಳನ್ನು ಇರಿಸಿದರು. ೭ ಅಲ್ಲಿಂದ ನದಿಯಾಚೆಯ ದೇಶಾಧಿಪತಿಯ ನ್ಯಾಯಸ್ಥಾನದವರೆಗೆ ಗಿಬ್ಯೋನಿನವನಾದ ಮೆಲೆಟ್ಯ, ಮೇರೋನೋತಿನವನಾದ ಯಾದೋನ್. ಇವರೂ, ಗಿಬ್ಯೋನ್ ಮತ್ತು ಮಿಚ್ಪ ಊರುಗಳವರೂ ಜೀರ್ಣೋದ್ಧಾರ ಮಾಡಿದ್ದರು. ೮ ಇದಾದ ನಂತರ ಹರ್ಹಯನ ಮಗನಾದ ಅಕ್ಕಸಾಲಿಗನಾದ ಉಜ್ಜೀಯೇಲ್; ಆ ಮೇಲೆ ಗಾಣಿಗನಾದ ಹನನ್ಯ; ಇವರು ಅಗಲವಾದ ಗೋಡೆಯವರೆಗೂ ಯೆರೂಸಲೇಮನ್ನು ಕಟ್ಟಿ ಭದ್ರಪಡಿಸಿದರು. ೯ ನಂತರ ಯೆರೂಸಲೇಮಿನ ಅರ್ಧ ಪಟ್ಟಣಗಳ ಒಡೆಯನೂ, ಹೂರನ ಮಗನೂ ಆದ ರೆಫಾಯನು ಅದರ ಕುಂದುಕೊರತೆಗಳನ್ನು ಸರಿಪಡಿಸಿದನು. ೧೦ ಇವರ ನಂತರ ಹರೂಮಫನ ಮಗನಾದ ಯೆದಾಯನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು. ಇವನ ನಂತರ ಹಷಬ್ನೆಯನ ಮಗನಾದ ಹಟ್ಟೂಷ್. ೧೧ ಗೋಡೆಯ ಇನ್ನೊಂದು ಭಾಗವನ್ನೂ ಒಲೆಬುರುಜನ್ನೂ ಜೀರ್ಣೋದ್ಧಾರ ಮಾಡಿದವರು ಹಾರೀಮನ ಮಗನಾದ ಮಲ್ಕೀಯನೂ, ಪಹತ್ ಮೋವಾಬ್ಯನ ಮಗನಾದ ಹಷ್ಷೂಬನು. ೧೨ ಅದರ ಆಚೆಗೆ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಯೆರೂಸಲೇಮಿನ ಅರ್ಧ ಪಟ್ಟಣಗಳ ಒಡೆಯನೂ, ಹಲ್ಲೊಹೇಷನ ಮಗನೂ ಆದ ಶಲ್ಲೂಮ ಮತ್ತು ಅವನ ಪುತ್ರಿಯರು. ೧೩ ತಗ್ಗಿನ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಹಾನೂನನೂ, ಜಾನೋಹ ಊರಿನವರು. ಇವರು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿ ಅಲ್ಲಿಂದ ತಿಪ್ಪೆ ಬಾಗಿಲಿನವರೆಗೂ ಸಾವಿರ ಮೊಳದ ಗೋಡೆಯನ್ನು ಕಟ್ಟಿದರು.
೧೪ ತಿಪ್ಪೆಬಾಗಿಲನ್ನು ಜೀರ್ಣೋದ್ಧಾರ ಮಾಡಿದವನು ಬೇತ್ ಹಕ್ಕೆರೆಮಿನ ಅರ್ಧ ಪಟ್ಟಣಗಳ ಒಡೆಯನೂ, ರೇಕಾಬನ ಮಗನೂ ಆದ ಮಲ್ಕೀಯ. ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿದನು.
೧೫ ಬುಗ್ಗೆ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವನು ಮಿಚ್ಪದ ಒಡೆಯನೂ, ಕೊಲ್ಹೋಜೆಯ ಮಗನೂ ಆದ ಶಲ್ಲೂನ್. ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಮಾಳಿಗೆಯನ್ನು ಹಾಕಿ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿ ದಾವೀದ ನಗರದಿಂದ ಇಳಿದು ಬರುವ ಸೋಪಾನಗಳ ಈಚೆ ಅರಸನ ತೋಟದ ಬಳಿಯಲ್ಲಿರುವ ಸಿಲೋವ ಕೊಳದ ಗೋಡೆಯನ್ನು ಕಟ್ಟಿದನು. ೧೬ ಇವನ ನಂತರ ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯಿಗಳ ಠಾಣ ಇವುಗಳವರೆಗೂ ಜೀರ್ಣೋದ್ಧಾರ ಮಾಡಿದವರು ಬೇತ್ಚೂರಿನ ಒಡೆಯನೂ, ಅಜ್ಬೂಕನ ಮಗನೂ ಆದ ನೆಹೆಮೀಯನು.
೧೭ ಇವನ ನಂತರ ಜೀರ್ಣೋದ್ಧಾರ ಮಾಡಿದವರು ಲೇವಿಯರು. ಅವರಲ್ಲಿ ಮೊದಲು ಬಾನಿಯ ಮಗನಾದ ರೆಹೂಮ್ ಸಮೀಪದಲ್ಲೇ ತನ್ನ ಪಟ್ಟಣದವರೊಡನೆ ಕಟ್ಟುತ್ತಿದ್ದ ಕೆಯೀಲದ ಅರ್ಧ ಪಟ್ಟಣಗಳ ಒಡೆಯನಾದ ಹಷಬ್ಯ ಇವರು. ೧೮ ಇವರ ನಂತರ ಇವರ ಬಂಧುಗಳಲ್ಲಿ ಕೆಯೀಲದ [ಎರಡನೆಯ] ಅರ್ಧ ಪಟ್ಟಣಗಳ ಒಡೆಯನೂ, ಹೇನಾದಾದನ ಮಗನೂ ಆದ ಬವ್ವೈ. ೧೯ ಇವನ ಸಮೀಪದಲ್ಲಿ ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಗೋಡೆಯ ಮೂಲೆಯಲ್ಲಿರುವ ಆಯುಧಶಾಲೆಗೆ ಹೋಗುವ ಮೆಟ್ಟಿಲುಗಳ ಎದುರಿಗಿರುವ ಭಾಗವನ್ನು ಮಿಚ್ಪದ ಅಧಿಕಾರಿಯೂ ಯೇಷೂವನ ಮಗ ಏಜೆರನು ಜೀರ್ಣೋದ್ಧಾರ ಮಾಡಿದನು. ೨೦ ಇವನು ಆಚೆ ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಮೂಲೆಯಿಂದ ಮಹಾಯಾಜಕನಾದ ಎಲ್ಯಾಷೀಬನ ಮನೆಯ ಬಾಗಿಲಿನವರೆಗೆ ಜಕ್ಕೈಯ ಮಗನಾದ ಬಾರೂಕನು ಆಸಕ್ತಿಯಿಂದ ಅದನ್ನು ಭದ್ರಪಡಿಸಿದನು. ೨೧ ಇವನು ಆಚೆ ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಎಲ್ಯಾಷೀಬನ ಮನೆಯ ಬಾಗಿಲಿನಿಂದ ಅದೇ ಮನೆಯ ಕೊನೆಯವರೆಗೆ, ಹಕ್ಕೋಚನ ಮೊಮ್ಮಗನೂ ಊರೀಯನ ಮಗನೂ ಆದ ಮೆರೇಮೋತನು ಜೀರ್ಣೋದ್ಧಾರ ಮಾಡಿದನು.
೨೨ ಮುಂದಿನ ಭಾಗವನ್ನು ಜೀರ್ಣೋದ್ಧಾರ ಮಾಡಿದವರು ಯೊರ್ದನ್ ಹೊಳೆಯ ತಗ್ಗಿನಲ್ಲಿ ವಾಸಿಸುತ್ತಿದ್ದ ಯಾಜಕರು. ೨೩ ಇವರ ನಂತರ ಬೆನ್ಯಾಮೀನ್ ಮತ್ತು ಹಷ್ಷೂಬರು; ಇವರು ತಮ್ಮ ತಮ್ಮ ಮನೆಗಳಿಗೆ ಎದುರಾಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದರು. ಇವರ ನಂತರ ಅನನ್ಯನ ಮೊಮ್ಮಗನೂ ಮಾಸೇಯನ ಮಗನೂ ಆದ ಅಜರ್ಯ. ಇವನು ತನ್ನ ಮನೆಯ ಹತ್ತಿರದಲ್ಲಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು. ೨೪ ಇವನ ನಂತರ ಅಜರ್ಯನ ಮನೆಯಿಂದ ಮೂಲೆಯವರೆಗೆ ಇರುವ ಗೋಡೆಯ ಇನ್ನೊಂದು ಭಾಗವನ್ನು ಜೀರ್ಣೋದ್ಧಾರ ಮಾಡಿದವನು ಹೇನಾದಾದನ ಮಗನಾದ ಬಿನ್ನೂಯ್. ೨೫ ಸೆರೆಮನೆಯ ಅಂಗಳದ ಹತ್ತಿರವಿದ್ದ ಅರಸನ ಅರಮನೆಯ ಮೇಲಿನ ಗೋಡೆಯನ್ನು ಮೀರಿನಿಂತಿರುವ ಮೂಲೆ ಗೋಪುರದ ಎದುರಿನ ಭಾಗವನ್ನು ಊಜೈಯನ ಮಗನಾದ ಪಾಲಾಲನೂ. ಇವನ ನಂತರ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು. ೨೬ ಈಗ ಮೂಲೆ ಗೋಪುರ ಮತ್ತು ನೀರು ಬಾಗಿಲಿನ ಪೂರ್ವದಿಕ್ಕಿಗಿರುವ ಓಫೇಲ್ ಗುಡ್ಡವು ದೇವಾಲಯದ ಸೇವಕರ ವಾಸಸ್ಥಾನವಾಗಿತ್ತು. ೨೭ ಆ ದೊಡ್ಡ ಮೂಲೆ ಗೋಪುರದ ಎದುರಿನಿಂದ ಓಫೇಲ್ ಗೋಡೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ತೆಕೋವದವರು ಜೀರ್ಣೋದ್ಧಾರ ಮಾಡಿದರು.
೨೮ ಯಾಜಕರು ಕುದುರೆ ಬಾಗಿಲಿನ ಆಚೆ ದಿನ್ನೆಯ ಮೇಲಿರುವ ಗೋಡೆಯಲ್ಲಿ ತಮ್ಮ ತಮ್ಮ ಮನೆಗಳ ಎದುರಿನ ಭಾಗಗಳನ್ನು ಜೀರ್ಣೋದ್ಧಾರ ಮಾಡಿದರು. ೨೯ ಇವರ ನಂತರ ಇಮ್ಮೇರನ ಮಗನಾದ ಚಾದೋಕನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು. ಇವನ ನಂತರ ಪೂರ್ವದಿಕ್ಕಿನ ದ್ವಾರಪಾಲಕನಾದ ಶೆಕನ್ಯನ ಮಗ ಶೆಮಾಯನು. ೩೦ ಇವನ ನಂತರ ಶೆಲೆಮ್ಯನ ಮಗನಾದ ಹನನ್ಯ; ಗೋಡೆಯ ಇನ್ನೊಂದು ಭಾಗವನ್ನು ಜೀರ್ಣೋದ್ಧಾರ ಮಾಡಿದವನು ಚಾಲಾಫನ ಆರನೆಯ ಮಗನಾದ ಹಾನೂನ್. ಇವನ ನಂತರ ಅಂದರೆ ತನ್ನ ಸ್ವಂತ ಕೊಠಡಿಯ ಮುಂದೆ ಬೆರೆಕ್ಯನ ಮಗನಾದ ಮೆಷುಲ್ಲಾಮ್ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡನು.
೩೧ ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ. ಇವನು ಸೈನ್ಯದವರು ಸೇರಿಬರುವ ಬಾಗಿಲಿನೆದುರಿನಲ್ಲಿರುವ ದೇವಾಲಯದ ಸೇವಕರ ಮತ್ತು ವರ್ತಕರ ಕೇರಿಯ ವರೆಗೂ ಮತ್ತು ಮೂಲೆಯುಪ್ಪರಿಗೆಯವರೆಗೂ ಜೀರ್ಣೋದ್ಧಾರ ಮಾಡಿದನು. ೩೨ ಈ ಮೂಲೆಯುಪ್ಪರಿಗೆಗೂ ಕುರಿಬಾಗಿಲಿಗೂ ಮಧ್ಯದಲ್ಲಿದ್ದ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಅಕ್ಕಸಾಲಿಗರು ಮತ್ತು ವರ್ತಕರು.