೧೪
ಒಬ್ಬ ಮುಖ್ಯಸ್ಥನ ಮನೆಯಲ್ಲಿ ಯೇಸು ಊಟಕ್ಕೆ ಕೂತಿದ್ದಾಗ ಕರಿಸಿಕೊಂಡವರಿಗೂ ಕರೆದವನಿಗೂ ಆತನು ಸಾಮ್ಯರೂಪವಾಗಿ ಉಪದೇಶಮಾಡಿದ್ದು
(ಮತ್ತಾಯನು 22:2-10)
೧ ಆತನು ಸಬ್ಬತ್‍ದಿನದಲ್ಲಿ ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಗೆ ಊಟಕ್ಕೆ ಹೋದಾಗ ಅವರು ಆತನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ೨ ಆಗ ಯೇಸು ತನ್ನೆದುರಿಗೆ ಜಲೋದರವುಳ್ಳ* ಹೊಟ್ಟೆಯಲ್ಲಿ ನೀರು ತುಂಬಿಕೊಂಡಿರುವ ಒಂದು ರೋಗ ಒಬ್ಬ ಮನುಷ್ಯನಿರುವದನ್ನು ನೋಡಿ - ೩ ಸಬ್ಬತ್‍ದಿನದಲ್ಲಿ ಸ್ವಸ್ಥಮಾಡುವದು ಸರಿಯೋ? ಸರಿಯಲ್ಲವೋ ಎಂದು ಧರ್ಮೋಪದೇಶಕರನ್ನೂ ಫರಿಸಾಯರನ್ನೂ ಕೇಳಿದನು. ೪ ಅವರು ಸುಮ್ಮನೇ ಇರಲು ಆತನು ಅವನ ಕೈ ಹಿಡಿದು ಅವನನ್ನು ವಾಸಿಮಾಡಿ ಕಳುಹಿಸಿ - ೫ ನಿಮ್ಮಲ್ಲಿ ಯಾವನೊಬ್ಬನ ಮಗನಾಗಲಿ ಎತ್ತಾಗಲಿ ಬಾವಿಯಲ್ಲಿ ಬಿದ್ದರೆ ಅವನು ತಡಮಾಡದೆ ಸಬ್ಬತ್‍ದಿನದಲ್ಲಾದರೂ ಮೇಲಕ್ಕೆ ತೆಗೆಯುವುದಿಲ್ಲವೇ ಎಂದು ಅವರನ್ನು ಕೇಳಿದನು. ೬ ಅವರು ಅದಕ್ಕೆ ಉತ್ತರಕೊಡಲಾರದೆ ಇದ್ದರು.
೭ ಊಟಕ್ಕೆ ಕರಿಸಿಕೊಂಡವರು ಪಂಕ್ತಿಯ ಮೊದಲನೆಯ ಸ್ಥಾನವನ್ನು ಆರಿಸಿಕೊಳ್ಳುವದನ್ನು ನೋಡಿ ಯೇಸು ಒಂದು ಸಾಮ್ಯವನ್ನು ಹೇಳಿದನು, ಏನಂದರೆ - ೮ ಯಾವನಾದರೂ ನಿಮ್ಮನ್ನು ಮದುವೆ ಊಟಕ್ಕೆ ಕರೆದರೆ ಪಂಕ್ತಿಯೊಳಗೆ ಮೊದಲನೆಯ ಸ್ಥಾನದಲ್ಲಿ ಕೂತುಕೊಳ್ಳಬೇಡ; ಒಂದು ವೇಳೆ ನಿನಗಿಂತ ಗೌರವವುಳ್ಳವನನ್ನು ಅವನು ಕರೆದಿರಬಹುದು, ೯ ಮತ್ತು ನಿನ್ನನ್ನೂ ಅವನನ್ನೂ ಕರೆದವನು ಬಂದು - ಇವನಿಗೆ ಸ್ಥಳ ಬಿಡು ಎಂದು ನಿನಗೆ ಹೇಳುವಾಗ ನೀನು ನಾಚಿಕೊಂಡು ಕಡೆಯಸ್ಥಾನದಲ್ಲಿ ಕೂತುಕೊಳ್ಳುವದಕ್ಕೆ ಹೋಗುವಿ. ೧೦ ಆದರೆ ಯಾವನಾದರೂ ನಿನ್ನನ್ನು ಕರೆದಾಗ ನೀನು ಹೋಗಿ ಕಡೆಯ ಸ್ಥಾನದಲ್ಲಿ ಕೂತುಕೋ; ಹೀಗೆ ಮಾಡಿದರೆ ನಿನ್ನನ್ನು ಕರೆದವನು ಬಂದು ನಿನ್ನನ್ನು ನೋಡಿ - ಸ್ನೇಹಿತನೇ, ಇನ್ನೂ ಮೇಲಕ್ಕೆ ಬಾ ಅನ್ನುವನು. ಆಗ ನಿನ್ನ ಸಂಗಡ ಕುಳಿತಿರುವವರೆಲ್ಲರ ಮುಂದೆ ನಿನಗೆ ಗೌರವ ದೂರಕುವುದು. ೧೧ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.
೧೨ ಆತನು ತನ್ನನ್ನು ಊಟಕ್ಕೆ ಕರೆದವನಿಗೆ ಸಹ ಒಂದು ಮಾತು ಹೇಳಿದನು; ಅದೇನಂದರೆ - ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲಿ ನಿನ್ನ ಅಣ್ಣತಮ್ಮಂದಿರನ್ನಾಗಲಿ ನಿನ್ನ ಬಂಧುಬಾಂಧವರನ್ನಾಗಲಿ ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ. ಒಂದು ವೇಳೆ ಅವರು ಸಹ ಪ್ರತಿಯಾಗಿ ನಿನ್ನನ್ನು ಕರೆದಾರು, ಮತ್ತು ನಿನಗೆ ಮುಯ್ಯಿಗೆಮುಯ್ಯಾಗುವದು. ೧೩ ಅದರೆ ನೀನು ಔತಣ ಮಾಡಿಸುವಾಗ ಬಡವರು, ಅಂಗಹೀನವಾದವರು, ಕುಂಟರು, ಕುರುಡರು ಇಂಥವರನ್ನು ಕರೆ; ೧೪ ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ನೀತಿವಂತರು ಜೀವಿತರಾಗಿ ಪುನರುತ್ತಾನ ಹೊಂದುವಾಗ ದೇವರೆ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು.
೧೫ ಊಟಕ್ಕೆ ಕೂಳಿತವರಲ್ಲಿ ಒಬ್ಬನು ಈ ಮಾತುಗಳನ್ನು ಕೇಳಿ - ದೇವರ ರಾಜ್ಯದಲ್ಲಿ ಊಟಮಾಡುವವನೇ ಧನ್ಯನು ಎಂದು ಹೇಳಲು ೧೬ ಯೇಸು ಅವನಿಗೆ ಹೇಳಿದ್ದೇನಂದರೆ - ಒಬ್ಬ ಮನುಷ್ಯನು ಬಹಳವಾಗಿ ಅಡಿಗೆಮಾಡಿಸಿ ಅನೇಕರಿಗೆ ಊಟಕ್ಕೆ ಆಮಂತ್ರಿಸಿದನು. ೧೭ ಆ ಮೇಲೆ ಊಟದ ಹೊತ್ತಿಗೆ ಅವನು ಊಟಕ್ಕೆ ಆಹ್ವಾನಿಸಲ್ಪಟ್ಟವರ ಬಳಿಗೆ ಬಂದು - ಈಗ ಎಲ್ಲವೂ ಸಿದ್ಧವಾಗಿದೆ ಉಟಕ್ಕೆ ಬರಬೇಕು ಎಂದು ಕರೆಯುವದಕ್ಕೆ ತನ್ನ ಆಳನ್ನು ಕಳುಹಿಸಿದನು. ೧೮ ಆದರೆ ಅವರೆಲ್ಲರೂ ಕ್ಷಮಿಸಬೇಕೆಂದು ಒಂದೇ ಮನಸ್ಸಿನಿಂದ ಹೇಳುವುದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ ನಾನು ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ, ಅದನ್ನು ಹೋಗಿ ನೋಡುವ ಅಗತ್ಯವಿದೆ, ನನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು. ೧೯ ಮತ್ತೊಬ್ಬನು - ನಾನು ಐದು ಜೋಡಿ ಎತ್ತುಗಳನ್ನು ಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕೆ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು. ೨೦ ಇನ್ನೊಬ್ಬನು - ನಾನು ಮದುವೆಮಾಡಿಕೊಂಡಿದ್ದೇನೆ, ಆದ್ದರಿಂದ ನಾನು ಬರುವುದಕ್ಕಾಗುವುದಿಲ್ಲ ಅಂದನು. ೨೧ ಆ ಆಳು ಬಂದು ತನ್ನ ಯಜಮಾನನಿಗೆ ಈ ಸಂಗತಿಗಳನ್ನು ತಿಳಿಸಲು ಮನೆಯ ಯಜಮಾನನು ಸಿಟ್ಟುಗೊಂಡು ಆಳಿಗೆ - ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು, ಅಂಗಹೀನರು, ಕುರುಡರು, ಕುಂಟರು, ಇಂಥವರನ್ನು ಇಲ್ಲಿಗೆ ಕರಕೊಂಡು ಬಾ ಎಂದು ಹೇಳಿದನು. ೨೨ ಬಳಿಕ ಆ ಆಳು - ಅಯ್ಯಾ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾಯಿತು; ಆದರೂ ಇನ್ನೂ ಸ್ಥಳ ಉಳಿದಿದೆ ಅಂದನು. ೨೩ ಆಗ ಆ ಯಜಮಾನನು ತನ್ನ ಆಳಿಗೆ ಹೇಳಿದ್ದೆನೆಂದರೆ - ನೀನು ಹಾದಿಗಳಿಗೂ ಬೇಲಿಗಳ ಬಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರಕೊಂಡು ಬಾ, ನನ್ನ ಮನೆ ತುಂಬಲಿ. ೨೪ ಆದರೆ ಊಟಕ್ಕೆ ಹೇಳಿಸಿಕೊಂಡವರಲ್ಲಿ ಒಬ್ಬನಾದರೂ ನಾನು ಮಾಡಿಸಿದ ಅಡಿಗೆಯ ಸವಿಯನ್ನು ನೋಡಬಾರದು ಎಂದು ನಿಮಗೆ ಹೇಳುತ್ತೇನೆ ಅಂದನು.
ಯೇಸು ತನ್ನನ್ನು ಅನುಸರಿಸುವವರು ತಕ್ಕ ಆಲೋಚನೆ ಮಾಡಿಕೊಂಡು ಬರಬೇಕೆಂದು ಸಾಮ್ಯರೂಪವಾಗಿ ಉಪದೇಶಿಸಿದ್ದು
(ಮತ್ತಾಯನು 10:37-39)
೨೫ ಬಹು ಜನರು ಗುಂಪುಗುಂಪಾಗಿ ಯೇಸುವಿನ ಸಂಗಡ ಹೋಗುತ್ತಾ ಇರಲು ಆತನು ತಿರುಗಿಕೊಂಡು ಅವರಿಗೆ ಹೇಳಿದ್ದೇನಂದರೆ - ೨೬ ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ-ತಾಯಿ, ಹೆಂಡತಿ, ಮಕ್ಕಳು, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. ೨೭ ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು ಅವನು ನನ್ನ ಶಿಷ್ಯನಾಗಿರಲಾರನು. ೨೮ ನಿಮ್ಮಲ್ಲಿ ಯಾವನಾದರೂ ಒಂದು ಗೋಪುರವನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂಳಿತುಕೊಂಡು - ಅದಕ್ಕೆ ಎಷ್ಟು ಖರ್ಚು ಆದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಇದೆಯೋ ಎಂದು ಲೆಕ್ಕಮಾಡುವದಿಲ್ಲವೇ? ೨೯ ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು - ೩೦ ಈ ಮನುಷ್ಯನು ಕಟ್ಟಿಸುವದಕ್ಕಂತೂ ತೊಡಗಿದನು, ಕೆಲಸಪೂರೈಸಲಾರದೆ ಹೋದನು ಎಂದು ಅವನನ್ನು ಹಾಸ್ಯಮಾಡಾರು. ೩೧ ಇಲ್ಲವೆ ಯಾವ ಅರಸನಾದರೂ ಮತ್ತೊಬ್ಬ ಅರಸನ ಸಂಗಡ ಯುದ್ಧಮಾಡುವದಕ್ಕೆ ಹೋಗುವಾಗ ತನ್ನ ಮೇಲೆ ಇಪ್ಪತ್ತು ಸಾವಿರ ದಂಡು ತೆಗೆದುಕೊಂಡು ಬರುವವನನ್ನು ತಾನು ಹತ್ತು ಸಾವಿರ ದಂಡಿನಿಂದ ಎದುರಿಸುವದಕ್ಕೆ ಶಕ್ತನಾಗುವೆನೋ ಇಲ್ಲವೋ ಎಂದು ಕೂಳಿತುಕೊಂಡು ಆಲೋಚಿಸುವದಿಲ್ಲವೇ? ೩೨ ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಮಾಡಿಕೊಳ್ಳುವನು. ೩೩ ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು.
೩೪ ಉಪ್ಪಂತೂ ಒಳ್ಳೆಯ ಪದಾರ್ಥವೇ; ಉಪ್ಪು ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ರುಚಿಬರಿಸಲು ಸಾಧ್ಯ? ೩೫ ಅದು ಭೂಮಿಗಾದರೂ ತಿಪ್ಪೆಗಾದರೂ ಉಪಯೋಗಕ್ಕೆ ಬರುವುದಿಲ್ಲ; ಅದನ್ನು ಹೊರಗೆ ಬಿಸಾಡುತ್ತಾರೆ. ಕೇಳುವದಕ್ಕೆ ಕಿವಿಯುಳ್ಳವನು ಕೇಳಲಿ ಅಂದನು.

*೧೪:೨ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿರುವ ಒಂದು ರೋಗ