೪
೧ ಆ ದಿನದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಪುರುಷನನ್ನು ಹಿಡಿದು,
“ನಾವು ಸ್ವಂತವಾಗಿ ದುಡಿದ ಅನ್ನವನ್ನು ಉಣ್ಣುವೆವು, ನಾವೇ ಸಂಪಾದಿಸಿದ ಬಟ್ಟೆಯನ್ನು ಉಟ್ಟುಕೊಳ್ಳುವೆವು,
ನಿನ್ನ ಹೆಸರು ಮಾತ್ರ ನಮಗಿದ್ದರೆ ಸಾಕು. ಯಜಮಾನನಾಗಿ ನಮ್ಮ ಮಾನ ಕಾಪಾಡಿದರೆ ಸಾಕು” ಎಂದು ಕೇಳಿಕೊಳ್ಳುವರು.
ಚೀಯೋನಿನ ಮುಂದಿನ ಸುಸ್ಥಿತಿ
೨ ಆ ದಿನದಲ್ಲಿ ಯೆಹೋವನು ದಯಪಾಲಿಸಿದ ಬೆಳೆಯಿಂದ ಇಸ್ರಾಯೇಲರಲ್ಲಿ ಉಳಿದವರಿಗೆ ಸೌಂದರ್ಯವೂ, ಮಹಿಮೆಯೂ ಉಂಟಾಗುವುವು. ದೇಶದಿಂದ ಫಲವೂ, ಉನ್ನತಿಯೂ, ಭೂಷಣವೂ ಲಭಿಸುವುದು. ೩ ಆಗ ಚೀಯೋನಿನಲ್ಲಿ ಉಳಿದವರು, ಯೆರೂಸಲೇಮಿನಲ್ಲಿ ಉಳಿದವರು ಮತ್ತು ಯೆರೂಸಲೇಮಿನಲ್ಲಿ ವಾಸಿಸುವರೆಂದು ದಾಖಲೆಗೊಂಡ ಪ್ರತಿಯೊಬ್ಬ ಮನುಷ್ಯನು ಪರಿಶುದ್ಧನೆಂದು ಕರೆಯಲ್ಪಡುವನು. ೪ ಆಗ ಕರ್ತನಾದ ಯೆಹೋವನು ನ್ಯಾಯತೀರ್ಪಿನ ಆತ್ಮದಿಂದಲೂ, ದಹಿಸುವ ಆತ್ಮದಿಂದಲೂ ಚೀಯೋನಿನ ಸ್ತ್ರೀಯರ ಕಲ್ಮಷವನ್ನೂ ಮತ್ತು ಯೆರೂಸಲೇಮಿನ ರಕ್ತದ ಕಲೆಯನ್ನು ತೊಳೆದುಬಿಡುವನು.
೫ ಆಮೇಲೆ ಯೆಹೋವನು ಚೀಯೋನ್ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೆಯೂ, ಅಲ್ಲಿ ನಡೆಯುವ ಸಭೆಗಳ ಮೇಲೆಯೂ, ಹಗಲಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಮಹಿಮೆಯು ಎಲ್ಲಾ ಕಡೆಯು ಆವರಿಸಿರುವುದು. ೬ ಅದು ಹಗಲಿನ ಬಿಸಿಲಿನಲ್ಲಿ ನೆರಳನ್ನೂ, ಸಣ್ಣ ದೊಡ್ಡ ಮಳೆಗಳಲ್ಲಿ ಆಶ್ರಯವನ್ನೂ ಕೊಡುವ ಗುಡಾರವಾಗಿರುವುದು.