೪೫
ಯೋಸೇಫನು ತನ್ನನ್ನು ಗುರುತಿಸಿಕೊಂಡದ್ದು
೧ ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿ ನಿಂತಿದ್ದವರ ಮುಂದೆ ದುಃಖವನ್ನು ತಾಳಲಾರದೆ, “ಎಲ್ಲರನ್ನು ನನ್ನ ಬಳಿಯಿಂದ ಹೊರಗೆ ಕಳುಹಿಸಿರಿ” ಎಂದು ಕೂಗಿದನು. ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡುವ ವೇಳೆಯಲ್ಲಿ ಬೇರೆ ಯಾರೂ ಹತ್ತಿರ ಇರಲಿಲ್ಲ. ೨ ಅವನು ಗಟ್ಟಿಯಾಗಿ ಅತ್ತದ್ದರಿಂದ ಐಗುಪ್ತರಿಗೂ, ಫರೋಹನ ಮನೆಯವರಿಗೂ ಆ ಶಬ್ದವು ಕೇಳಿಸಿತು.
೩ ಅವನು, “ತನ್ನ ಅಣ್ಣತಮ್ಮಂದಿರಿಗೆ ನಾನು ಯೋಸೇಫನು, ನನ್ನ ತಂದೆ ಇನ್ನೂ ಇದ್ದಾನೋ?” ಎಂದು ಹೇಳಲು ಅವರು ಅವನ ಮುಂದೆ ತತ್ತರಗೊಂಡು ಉತ್ತರಕೊಡಲಾರದೆ ಹೋದರು. ೪ ಯೋಸೇಫನು, “ನನ್ನ ಹತ್ತಿರಕ್ಕೆ ದಯಮಾಡಿ ಬನ್ನಿರಿ” ಎಂದು ಅಣ್ಣಂದಿರಿಗೆ ಹೇಳಲು ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ “ಐಗುಪ್ತ ದೇಶಕ್ಕೆ ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನು ನಾನೇ. ೫ ನೀವು ನನ್ನನ್ನು ಹಾಗೆ ಮಾರಿದ್ದಕ್ಕಾಗಿ ವ್ಯಸನಪಟ್ಟು ದುಃಖಿಸಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು. ೬ ದೇಶಕ್ಕೆ ಬರ ಬಂದು ಎರಡು ವರ್ಷವಾಗಿದೆಯಷ್ಟೆ. ಇನ್ನೂ ಐದು ವರ್ಷಗಳ ಪರ್ಯಂತರ ಬಿತ್ತುವುದಕ್ಕಾಗಲಿ, ಕೊಯ್ಯುವುದಕ್ಕಾಗಲಿ, ಅವಕಾಶವಿಲ್ಲ. ೭ ನಿಮ್ಮ ಸಂತತಿ ಭೂಮಿಯ ಮೇಲೆ ಉಳಿಯುವಂತೆಯೂ ನೀವು ಈ ವಿಪತ್ತಿಗೆ ಸಿಕ್ಕದೆ, ಬಹು ಜನವಾಗುವಂತೆಯೂ ದೇವರು ನನ್ನನ್ನು ಮೊದಲು ಕಳುಹಿಸಿದನು.
೮ ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದನಲ್ಲದೆ ನೀವು ಕಳುಹಿಸಲಿಲ್ಲ. ನನ್ನ ತಂದೆಯು ನನ್ನನ್ನು ಫರೋಹನ ಮಂತ್ರಿಯನ್ನಾಗಿಯೂ, ಫರೋಹನ ಅರಮನೆಯಲ್ಲಿ ಅಧಿಪತಿಯನ್ನಾಗಿಯೂ, ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿಯೂ ಮಾಡಿದ್ದಾನೆ. ೯ ನೀವು ಬೇಗ ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ, ‘ನಿನ್ನ ಮಗನಾದ ಯೋಸೇಫನು ಹೀಗೆನ್ನುತ್ತಾನೆ, ದೇವರು ನನ್ನನ್ನು ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿ ನೇಮಿಸಿದ್ದಾನೆ. ನೀನು ತಡಮಾಡದೆ ನನ್ನ ಬಳಿಗೆ ಬಾ. ೧೦ ಗೋಷೆನ್ ಸೀಮೆಯಲ್ಲಿ ನೀನು ವಾಸಮಾಡಬಹುದು. ನೀನೂ, ನಿನ್ನ ಮಕ್ಕಳೂ, ಮೊಮ್ಮಕ್ಕಳೂ, ಕುರಿದನಗಳೂ ಮೊದಲಾದ ಎಲ್ಲವೂ ನನ್ನ ಬಳಿಯಲ್ಲೇ ಇರಬೇಕು. ೧೧ ಈ ಬರಗಾಲ ಮುಗಿಯುವುದಕ್ಕೆ ಇನ್ನೂ ಐದು ವರ್ಷ ಹೋಗಬೇಕು. ಆದ್ದರಿಂದ ನಿನಗೂ, ನಿನ್ನ ಮನೆಯವರಿಗೂ ನಿನಗಿರುವ ಎಲ್ಲವುಗಳಿಗೂ ಬಡತನವುಂಟಾಗದಂತೆ ಇಲ್ಲಿ ನಿನ್ನನ್ನು ಪೋಷಿಸುವೆನೆಂದು’ ಹೇಳುತ್ತಾನೆ ಎಂಬುದಾಗಿ ತಿಳಿಸಿರಿ.
೧೨ ನಾನು ಸ್ವತಃ ನಿಮ್ಮ ಸಂಗಡ ಮಾತನಾಡಿದ್ದೆನಲ್ಲಾ. ಅದಕ್ಕೆ ನೀವೇ ಸಾಕ್ಷಿ. ನನ್ನ ಒಡಹುಟ್ಟಿದವನಾದ ಬೆನ್ಯಾಮೀನನೂ ಸಾಕ್ಷಿ. ೧೩ ಐಗುಪ್ತ ದೇಶದಲ್ಲಿ ನನಗಿರುವ ಎಲ್ಲಾ ವೈಭವವನ್ನೂ, ನೀವು ಕಂಡಿದ್ದೆಲ್ಲವನ್ನು ತಂದೆಗೆ ತಿಳಿಸಿ ಬೇಗನೆ ಅವನನ್ನು ಇಲ್ಲಿಗೆ ಕರೆದುಕೊಂಡು ಬರಬೇಕು” ಎಂದು ಹೇಳಿ,
೧೪ ತನ್ನ ತಮ್ಮನಾದ ಬೆನ್ಯಾಮೀನನ ಕೊರಳನ್ನು ಅಪ್ಪಿಕೊಂಡು ಅತ್ತನು. ಬೆನ್ಯಾಮೀನನೂ ಅವನ ಕೊರಳನ್ನು ಅಪ್ಪಿಕೊಂಡು ಅತ್ತನು. ೧೫ ಇದಲ್ಲದೆ ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವರು ಅವನ ಸಂಗಡ ಮಾತನಾಡಿದರು.
೧೬ ಯೋಸೇಫನ ಅಣ್ಣತಮ್ಮಂದಿರು ಬಂದ ಸಮಾಚಾರವು ಫರೋಹನ ಮನೆಯವರಿಗೆ ತಿಳಿದಾಗ ಫರೋಹನಿಗೂ ಅವನ ಪರಿವಾರದವರಿಗೂ ಸಂತೋಷವಾಯಿತು. ೧೭ ಫರೋಹನು ಯೋಸೇಫನನ್ನು ಕರೆಯಿಸಿ, “ನೀನು ನಿನ್ನ ಅಣ್ಣತಮ್ಮಂದಿರಿಗೆ ತಿಳಿಸಬೇಕಾದ ನನ್ನ ಆಜ್ಞೆ ಏನೆಂದರೆ ‘ನಿಮ್ಮ ಕತ್ತೆಗಳ ಮೇಲೆ ಸಾಮಾನುಗಳನ್ನು ಹೇರಿ ಕಾನಾನ್ ದೇಶಕ್ಕೆ ಹೋಗಿ, ೧೮ ನಿಮ್ಮ ತಂದೆಯನ್ನೂ ಮನೆಯವರನ್ನೂ ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ನಾನು ನಿಮಗೆ ಐಗುಪ್ತ ದೇಶದಲ್ಲಿ ದೊರಕುವ ಉತ್ತಮ ವಸ್ತುಗಳನ್ನು ನಿಮಗೆ ಕೊಡುವೆನು ಮತ್ತು ನೀವು ಈ ದೇಶದ ಸುಖವನ್ನು ಅನುಭವಿಸುವಿರಿ.
೧೯ ಮತ್ತು ನಿಮ್ಮ ಹೆಂಡತಿ ಮಕ್ಕಳಿಗೋಸ್ಕರ ಐಗುಪ್ತ ದೇಶದಿಂದ ರಥಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ತಂದೆಯನ್ನು ಕರೆದುಕೊಂಡು ಬನ್ನಿರಿ. ೨೦ ನಿಮ್ಮ ಸಾಮಾಗ್ರಿಗಳಿಗಾಗಿ ಚಿಂತಿಸಬೇಡಿರಿ. ಐಗುಪ್ತ ದೇಶದಲ್ಲೆಲ್ಲಾ ಇರುವ ಉತ್ತಮ ವಸ್ತುಗಳು ನಿಮ್ಮದೇ’ ” ಎಂದು ಹೇಳಿದನು.
೨೧ ಇಸ್ರಾಯೇಲನ ಮಕ್ಕಳು ಅದೇ ರೀತಿಯಾಗಿ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ರಥಗಳನ್ನೂ ಮಾರ್ಗಕ್ಕೆ ಬೇಕಾದ ಆಹಾರವನ್ನೂ ಕೊಡಿಸಿದನು. ೨೨ ಇದಲ್ಲದೆ ಪ್ರತಿಯೊಬ್ಬನಿಗೂ ಶ್ರೇಷ್ಠ ವಸ್ತ್ರಗಳನ್ನು ಕೊಟ್ಟನು. ಬೆನ್ಯಾಮೀನನಿಗೋ ಮುನ್ನೂರು ನಾಣ್ಯಗಳನ್ನೂ ಹಾಗೂ ಐದು ಶ್ರೇಷ್ಠ ವಸ್ತ್ರಗಳನ್ನೂ ಕೊಟ್ಟನು. ೨೩ ತನ್ನ ತಂದೆಗೋಸ್ಕರ ಐಗುಪ್ತ ದೇಶದ ಒಳ್ಳೆಯ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಹೇರಿಸಿ, ಹತ್ತು ಹೆಣ್ಣುಕತ್ತೆಗಳ ಮೇಲೆ ತನ್ನ ತಂದೆಗೆ ಪ್ರಯಾಣಕ್ಕೆ ಬೇಕಾದ ದವಸ ಧಾನ್ಯಗಳನ್ನು, ರೊಟ್ಟಿ ಮತ್ತು ಇತರ ಆಹಾರವನ್ನು ಕಳುಹಿಸಿದನು. ೨೪ ಆಗ ತನ್ನ ಅಣ್ಣತಮ್ಮಂದಿರಿಗೆ, “ನೀವು ದಾರಿಯಲ್ಲಿ ಜಗಳಮಾಡಬೇಡಿರಿ” ಎಂದು ಬುದ್ಧಿ ಹೇಳಿ ಅವರಿಗೆ ಹೋಗುವುದಕ್ಕೆ ಅಪ್ಪಣೆಕೊಟ್ಟನು. ಅವರು ಹೊರಟು ಹೋದರು.
೨೫ ಅವರು ಐಗುಪ್ತ ದೇಶವನ್ನು ಬಿಟ್ಟು ಕಾನಾನ್ ದೇಶಕ್ಕೆ ಸೇರಿ ತಂದೆಯಾದ ಯಾಕೋಬನ ಬಳಿಗೆ ಬಂದರು. ೨೬ ಅವನಿಗೆ, “ಯೋಸೇಫನು ಇನ್ನೂ ಜೀವದಿಂದ ಇದ್ದಾನೆ ಅವನು ಐಗುಪ್ತ ದೇಶದ ಸರ್ವಾಧಿಕಾರಿಯಾಗಿದ್ದಾನೆ” ಎಂದು ತಿಳಿಸಲು, ಅವನು ಆಶ್ಚರ್ಯಪಟ್ಟು ನಂಬಲಿಲ್ಲ. ೨೭ ತರುವಾಯ ಯೋಸೇಫನು ಹೇಳಿ ಕಳುಹಿಸಿದ್ದ ಎಲ್ಲಾ ಮಾತುಗಳನ್ನು ಕೇಳಿ ತನ್ನ ಪ್ರಯಾಣಕ್ಕೋಸ್ಕರ ಯೋಸೇಫನ ಕಡೆಯಿಂದ ಬಂದ ರಥಗಳನ್ನು ನೋಡಿದಾಗ ಯಾಕೋಬನ ಆತ್ಮವು ಉಲ್ಲಾಸಗೊಂಡಿತು, ಅಲ್ಲದೆ ಅವನಿಗೆ ಹೊಸ ಜೀವ ಬಂದಂತಾಯಿತು. ೨೮ ಆಗ ಇಸ್ರಾಯೇಲನು, “ನನ್ನ ಮಗನಾದ ಯೋಸೇಫನು ಜೀವಂತವಾಗಿದ್ದಾನೆ. ನಾನು ಸಾಯುವುದಕ್ಕಿಂತ ಮೊದಲು ಹೋಗಿ ಅವನನ್ನು ನೋಡುವೆನು” ಎಂದನು.