೪೨
ಅಣ್ಣಂದಿರು ಯೋಸೇಫನ ಬಳಿಗೆ ಬಂದದ್ದು
೧ ಐಗುಪ್ತ ದೇಶದಲ್ಲಿ ದವಸಧಾನ್ಯವುಂಟೆಂದು ಯಾಕೋಬನು ತಿಳಿದಾಗ ತನ್ನ ಮಕ್ಕಳಿಗೆ, “ನೀವು ಒಬ್ಬರನ್ನೊಬ್ಬರು ನೋಡಿಕೊಂಡಿರುವುದೇಕೆ?” ೨ “ಐಗುಪ್ತ ದೇಶದಲ್ಲಿ ದವಸಧಾನ್ಯ ಉಂಟೆಂಬುದನ್ನು ಕೇಳಿದ್ದೇನೆ. ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಹೋಗಿ ಬೇಕಾದ ದವಸವನ್ನು ಖರೀದಿಸಿಕೊಂಡು ಬನ್ನಿರಿ” ಎಂದು ಹೇಳಿದನು.
೩ ಯೋಸೇಫನ ಹತ್ತು ಮಂದಿ ಅಣ್ಣಂದಿರು ಧಾನ್ಯವನ್ನು ಖರೀದಿಸಿಕೊಂಡು ತರುವುದಕ್ಕಾಗಿ ಐಗುಪ್ತ ದೇಶಕ್ಕೆ ಹೋದರು. ೪ ಆದರೆ ಯಾಕೋಬನು ಯೋಸೇಫನ ತಮ್ಮನಾದ ಬೆನ್ಯಾಮೀನನಿಗೆ “ಕೇಡು ಉಂಟಾದೀತೆಂದು” ಹೇಳಿ ಅಣ್ಣಂದಿರ ಜೊತೆಯಲ್ಲಿ ಕಳುಹಿಸಲಿಲ್ಲ.
೫ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೋಸ್ಕರ ಐಗುಪ್ತ ದೇಶಕ್ಕೆ ಬಂದವರಲ್ಲಿ ಇಸ್ರಾಯೇಲನ ಮಕ್ಕಳೂ ಇದ್ದರು, ಏಕೆಂದರೆ ಕಾನಾನ್ ದೇಶದಲ್ಲಿಯೂ ಬರವಿತ್ತು.
೬ ಐಗುಪ್ತ ದೇಶದ ಮೇಲೆ ಅಧಿಕಾರವನ್ನು ನಡಿಸಿ ಜನರಿಗೆ ಧಾನ್ಯವನ್ನು ಮಾರುವವನು ಯೋಸೇಫನೇ ಆಗಿದ್ದನು. ಹೀಗಿರುವುದರಿಂದ ಅವನ ಅಣ್ಣಂದಿರು ಬಂದು ಅವನ ಮುಂದೆಯೇ ಅಡ್ಡಬಿದ್ದರು. ೭ ಯೋಸೇಫನು ಅವರನ್ನು ಕಂಡಾಗ ಅವರ ಗುರುತು ಹಿಡಿದು ತನ್ನ ಅಣ್ಣಂದಿರೆಂದು ತಿಳಿದರೂ ಅವರಿಗೆ ಅನ್ಯನಂತೆ ತೋರ್ಪಡಿಸಿಕೊಂಡು ಕಠಿಣ ನುಡಿಯಿಂದ, “ನೀವು ಎಲ್ಲಿಂದ ಬಂದವರು” ಎಂದು ಕೇಳಿದನು. ಅವರು, “ಧಾನ್ಯವನ್ನು ಕೊಂಡುಕೊಳ್ಳುವುದಕ್ಕೊಸ್ಕರ ಕಾನಾನ್ ದೇಶದಿಂದ ಬಂದಿದ್ದೇವೆ” ಎಂದರು.
೮ ಅಣ್ಣಂದಿರ ಗುರುತು ಯೋಸೇಫನಿಗೆ ತಿಳಿದಿದ್ದರೂ ಅವನ ಗುರುತು ಅವರಿಗೆ ತಿಳಿಯಲಿಲ್ಲ. ೯ ಯೋಸೇಫನು ಅವರ ವಿಷಯದಲ್ಲಿ ತನಗೆ ಬಿದ್ದ ಕನಸುಗಳನ್ನು ನೆನಪಿಗೆ ತಂದುಕೊಂಡನು. ಅವರಿಗೆ ಅವನು, “ನೀವು ಗೂಢಚಾರರು. ನಮ್ಮ ದೇಶದ ಭದ್ರತೆಯಿಲ್ಲದ ಸ್ಥಳಗಳನ್ನು ನೋಡುವುದಕ್ಕಾಗಿ ಬಂದವರು” ಎಂದು ಹೇಳಿದನು.
೧೦ ಅದಕ್ಕೆ ಅವರು, “ಇಲ್ಲ ಸ್ವಾಮಿ, ತಮ್ಮ ಸೇವಕರಾದ ನಾವು ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕಾಗಿ ಬಂದಿದ್ದೇವೆ. ೧೧ ನಾವೆಲ್ಲರೂ ಒಬ್ಬನೇ ತಂದೆಯ ಮಕ್ಕಳು. ನಾವು ಸತ್ಯವಂತರಾಗಿದ್ದೇವೆ ಹೊರತು ಗೂಢಚಾರರಲ್ಲ” ಅಂದರು.
೧೨ ಅವನು ಅವರಿಗೆ, “ಇಲ್ಲ, ನಮ್ಮ ದೇಶದ ಭದ್ರತೆಯಿಲ್ಲದ ಸ್ಥಳಗಳನ್ನು ತಿಳಿದುಕೊಳ್ಳುವುದಕ್ಕೆ ಬಂದ್ದಿದೀರಿ” ಎಂದು ಹೇಳಿದನು.
೧೩ ಅದಕ್ಕೆ ಅವರು, “ತಮ್ಮ ಸೇವಕರಾದ ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರು, ನಾವು ಕಾನಾನ್ ದೇಶದವರು, ಒಬ್ಬ ತಂದೆಯ ಮಕ್ಕಳು. ನಮ್ಮಲ್ಲಿ ಚಿಕ್ಕವನು ತಂದೆಯ ಬಳಿಯಲ್ಲಿದ್ದಾನೆ. ಮತ್ತೊಬ್ಬನು ಇಲ್ಲ” ಎಂದರು.
೧೪ ಯೋಸೇಫನು ಅವರಿಗೆ, “ನಾನು ಈಗಾಗಲೇ ಹೇಳಿದಂತೆ ನೀವು ಗೂಢಚಾರರೇ. ೧೫ ನೀವು ಪರೀಕ್ಷಿಸಲ್ಪಡುವುದು ಹೇಗೆಂದರೆ, ನಿಮ್ಮ ಚಿಕ್ಕ ತಮ್ಮನು ಬರಬೇಕು. ಅವನು ಬಂದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಟು ಹೋಗಬಾರದು. ೧೬ ಅವನನ್ನು ಕರೆದುಕೊಂಡು ಬರುವುದಕ್ಕೆ ನಿಮ್ಮಲ್ಲಿ ಒಬ್ಬನನ್ನು ಕಳುಹಿಸಿರಿ. ಅವನು ಬರುವವರೆಗೂ ನಿಮ್ಮನ್ನು ಸೆರೆಯಲ್ಲಿ ಇಡುತ್ತೇನೆ. ಹೀಗೆ ನಾನು ನಿಮ್ಮ ಮಾತುಗಳನ್ನು ಪರೀಕ್ಷಿಸಿ ನೀವು ಸತ್ಯವಂತರೋ ಅಲ್ಲವೋ ಎಂದು ತಿಳಿದುಕೊಳ್ಳುತ್ತೇನೆ. ನಿಮ್ಮ ತಮ್ಮನು ಬಾರದೆ ಹೋದರೆ ಫರೋಹನ ಜೀವದಾಣೆ ನೀವು ಗೂಢಚಾರರೇ” ಎಂದು ಹೇಳಿದನು. ೧೭ ಅವರೆಲ್ಲರನ್ನು ಅವನು, ಮೂರು ದಿನ ಕಾವಲಿನಲ್ಲಿರಿಸಿದನು.
೧೮ ಮೂರನೆಯ ದಿನದಲ್ಲಿ ಯೋಸೇಫನು ಅವರಿಗೆ, “ನಾನು ದೇವರಿಗೆ ಭಯಪಡುವವನು. ನೀವು ಸತ್ಯವಂತರಾಗಿದ್ದರೆ ಒಂದು ಕೆಲಸವನ್ನು ಮಾಡಿ ಬದುಕಿಕೊಳ್ಳಿರಿ. ೧೯ ನಿಮ್ಮಲ್ಲಿ ಒಬ್ಬನನ್ನು ಮಾತ್ರ ಸೆರೆಯಲ್ಲಿರಿಸುತ್ತೇನೆ. ಮಿಕ್ಕವರು ನಿಮ್ಮ ಮನೆಯವರಿಗೆ ಧಾನ್ಯವನ್ನು ತೆಗೆದುಕೊಂಡು ಹೋಗಿರಿ. ೨೦ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ ನಿಮ್ಮ ಮಾತನ್ನು ಸತ್ಯವೆಂದು ನಾನು ತಿಳಿದುಕೊಳ್ಳುವುದರಿಂದ ನೀವು ಸಾಯುವುದಿಲ್ಲ” ಎಂದನು. ಅವರು ಹಾಗೆಯೇ ಮಾಡಲು ಒಪ್ಪಿದರು.
೨೧ ಆಗ ಅವರು ತಮ್ಮ ತಮ್ಮೊಳಗೆ ಮಾತನಾಡಿಕೊಂಡು, “ನಾವು ನಮ್ಮ ತಮ್ಮನಿಗೆ ಮಾಡಿದ್ದು ಅಪರಾಧವೇ ಸರಿ. ಅವನು ನಮ್ಮನ್ನು ಬೇಡಿಕೊಂಡಾಗ ನಾವು ಅವನ ಪ್ರಾಣಸಂಕಟವನ್ನು ತಿಳಿದರೂ ಅವನ ಮೊರೆಗೆ ಕಿವಿಗೊಡಲಿಲ್ಲ. ಆ ಕಾರಣದಿಂದಲೇ ಈ ಸಂಕಟವು ನಮಗೆ ಪ್ರಾಪ್ತವಾಗಿದೆ” ಎಂದು ಮಾತನಾಡಿಕೊಂಡರು.
೨೨ ಅದಕ್ಕೆ ರೂಬೇನನು, “ಆ ಹುಡುಗನಿಗೆ ಏನೂ ಕೇಡು ಮಾಡಬೇಡಿರಿ ಎಂದು ನಾನು ಹೇಳಿದೆನಲ್ಲವೆ. ನೀವು ಕೇಳಲಿಲ್ಲ. ಆದುದರಿಂದ ಅವನಿಗಾದ ಪ್ರಾಣ ಹಾನಿಯ ವಿಷಯದಲ್ಲಿ ನಾವು ಈಗ ಉತ್ತರ ಹೇಳಬೇಕಾಗಿ ಬಂದಿದೆ” ಎಂದನು. ೨೩ ಯೋಸೇಫನು ದ್ವಿಭಾಷೆಯಲ್ಲಿ ಮಾತನಾಡಬಲ್ಲ ಅನುವಾದಕರೊಂದಿಗೆ ಮಾತನಾಡಿದ್ದರಿಂದ ಅವರು ತಮ್ಮ ಮಾತು ಅವನಿಗೆ ಗೊತ್ತಾಗುತ್ತದೆಂದು ತಿಳಿಯಲಿಲ್ಲ.
೨೪ ಯೋಸೇಫನಾದರೋ ಅವರ ಬಳಿಯಿಂದ ಹೊರಟು ಹೋಗಿ ಅತ್ತನು. ತರುವಾಯ ಅವರ ಬಳಿಗೆ ಹಿಂತಿರುಗಿ ಬಂದು ಅವರ ಸಂಗಡ ಮಾತನಾಡಿ ಅವರೊಳಗೆ ಸಿಮೆಯೋನನನ್ನು ಹಿಡಿಸಿ ಅವರ ಕಣ್ಣೆದುರಿಗೆ ಅವನಿಗೆ ಬೇಡಿಗಳನ್ನು ಹಾಕಿಸಿದನು.
೨೫ ಆ ಮೇಲೆ ಯೋಸೇಫನು ತನ್ನ ಆಳುಗಳಿಗೆ ಆ ಮನುಷ್ಯರ ಚೀಲಗಳಲ್ಲಿ ಧಾನ್ಯವನ್ನು ತುಂಬಿಸಿ ಒಬ್ಬೊಬ್ಬನ ಚೀಲದಲ್ಲಿ ಅವರವರು ತಂದಿದ್ದ ಹಣವನ್ನು ಅವರ ಚೀಲಗಳಲ್ಲೇ ಇಟ್ಟು ಅವರ ಪ್ರಯಾಣಕ್ಕೆ ಬೇಕಾದ ಆಹಾರವನ್ನು ಕೊಡಬೇಕೆಂದು ಅಪ್ಪಣೆ ಮಾಡಲು ಅವರು ಹಾಗೆಯೇ ಮಾಡಿದರು. ೨೬ ಇವರು ತಾವು ಕೊಂಡ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಹೊರಟು ಹೋದರು.
೨೭ ದಾರಿಯಲ್ಲಿ ಅವರು ಒಂದು ಸ್ಥಳದಲ್ಲಿ ಇಳಿದುಕೊಂಡಾಗ ಅವರಲ್ಲಿ ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡಬೇಕೆಂದು ತನ್ನ ಚೀಲವನ್ನು ಬಿಚ್ಚಿದಾಗ ಅದರ ಬಾಯಲ್ಲಿ ತಾನು ತಂದಿದ್ದ ಹಣವನ್ನು ಕಂಡನು. ೨೮ ಅವನು ತನ್ನ ಅಣ್ಣತಮ್ಮಂದಿರಿಗೆ, “ನಾನು ಕೊಟ್ಟ ಹಣವು ಹಿಂದಕ್ಕೆ ಬಂದಿದೆ. ಇಗೋ, ಅದು ನನ್ನ ಚೀಲದಲ್ಲಿದೆ” ಎಂದು ಹೇಳಲು ಅವರು ಧೈರ್ಯಗೆಟ್ಟು ನಡುಗುತ್ತಾ ಒಬ್ಬರನ್ನೊಬ್ಬರು ನೋಡಿ, “ದೇವರು ನಮಗೆ ಹೀಗೆ ಮಾಡಿದ್ದೇನು?” ಎಂದು ಅಂದುಕೊಂಡರು.
೨೯ ಅವರು ಕಾನಾನ್ ದೇಶಕ್ಕೆ ತಮ್ಮ ತಂದೆಯಾದ ಯಾಕೋಬನ ಬಳಿಗೆ ಬಂದು ನಡೆದ ಎಲ್ಲ ವಿಷಯವನ್ನು ತಿಳಿಸಿದರು. ೩೦ ಆ ದೇಶಾಧಿಪತಿ ನಮ್ಮ ಸಂಗಡ ಕಟುವಾಗಿ ಮಾತನಾಡಿ ನಮ್ಮನ್ನು ಗೂಢಚಾರರೆಂದು ಭಾವಿಸಿದನು. ೩೧ ನಾವು ಅವನಿಗೆ, “ನಾವು ಸತ್ಯವಂತರೇ ಹೊರತು ಗೂಢಚಾರರಲ್ಲ. ೩೨ ನಾವು ಒಬ್ಬ ತಂದೆಯಿಂದಲೆ ಹುಟ್ಟಿದ ಹನ್ನೆರಡು ಮಂದಿ ಅಣ್ಣತಮ್ಮಂದಿರಾಗಿದ್ದೇವೆ. ನಮ್ಮಲ್ಲಿ ಒಬ್ಬನಿಲ್ಲ. ಚಿಕ್ಕವನು ಈಗ ಕಾನಾನ್ ದೇಶದಲ್ಲಿ ನಮ್ಮ ತಂದೆಯ ಬಳಿಯಲ್ಲಿದಾನೆ” ಎಂದು ಹೇಳಿದೆವು.
೩೩ ಅದಕ್ಕೆ “ದೇಶಾಧಿಪತಿ, ನೀವು ಸತ್ಯವಂತರೋ ಅಲ್ಲವೋ ಎಂಬುದು ಗೊತ್ತಾಗುವುದಕ್ಕಾಗಿ ನಿಮ್ಮೊಳಗೆ ಒಬ್ಬನನ್ನು ನನ್ನ ಬಳಿಯಲ್ಲಿ ಬಿಟ್ಟು ನಿಮ್ಮ ಮನೆಯವರ ಕ್ಷಾಮ ನಿವಾರಣೆಗೆ ಬೇಕಾದದ್ದನ್ನು ತೆಗೆದುಕೊಂಡು ಹೋಗಿ, ೩೪ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು, ಕರೆದುಕೊಂಡು ಬಂದರೆ ನೀವು ಗೂಢಚಾರರಲ್ಲ ಸತ್ಯವಂತರೇ ಎಂದು ತಿಳಿದುಕೊಂಡು ನಿಮ್ಮ ಅಣ್ಣನನ್ನು ಸೆರೆಯಿಂದ ಬಿಡಿಸುತ್ತೇನೆ ಮತ್ತು ನೀವು ಈ ದೇಶದಲ್ಲಿ ವ್ಯಾಪಾರ ಮಾಡಬಹುದು” ಎಂದು ಹೇಳಿದನು ಎಂದರು.
೩೫ ಅವರು ತಮ್ಮ ಚೀಲಗಳನ್ನು ಬಿಚ್ಚಿ ನೋಡಿದಾಗ ಪ್ರತಿಯೊಬ್ಬನ ಚೀಲದಲ್ಲಿಯೂ ಅವರವರ ಹಣದ ಗಂಟು ಸಿಕ್ಕಿತು. ಅವರು, ಅವರ ತಂದೆಯೂ ಹಣದ ಗಂಟುಗಳನ್ನು ಕಂಡಾಗ ಭಯಪಟ್ಟರು. ೩೬ ಆಗ ಅವರ ತಂದೆಯಾದ ಯಾಕೋಬನು, “ಅವರಿಗೆ ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ. ಯೋಸೇಫನು ಇಲ್ಲ, ಸಿಮೆಯೋನನು ಇಲ್ಲ. ಬೆನ್ಯಾಮೀನನ್ನೂ ಕರೆದುಕೊಂಡು ಹೋಗಬೇಕೆಂದಿದ್ದೀರಿ. ಈ ಕಷ್ಟವೆಲ್ಲಾ ನನ್ನ ಮೇಲೆಯೇ ಬಂದಿತಲ್ಲಾ” ಎಂದು ಹೇಳಿದನು.
೩೭ ರೂಬೇನನು ತನ್ನ ತಂದೆಗೆ, “ನಾನು ಈ ಹುಡುಗನನ್ನು ತಿರುಗಿ ತಂದು ಒಪ್ಪಿಸದೆ ಹೋದರೆ ನನ್ನ ಇಬ್ಬರು ಗಂಡುಮಕ್ಕಳನ್ನು ಕೊಂದು ಹಾಕಬಹುದು. ಇವನನ್ನು ನನ್ನ ವಶಕ್ಕೆ ಕೊಟ್ಟರೆ ನಾನು ತಪ್ಪದೆ ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬರುತ್ತೇನೆ” ಎಂದು ಹೇಳಿದನು.
೩೮ ಆದರೆ ಯಾಕೋಬನು ಅವರಿಗೆ, “ನನ್ನ ಮಗನು ನಿಮ್ಮ ಸಂಗಡ ಹೋಗಬಾರದು. ಇವನ ಒಡಹುಟ್ಟಿದವನು ಸತ್ತು ಹೋದನು. ಇವನೊಬ್ಬನೇ ಉಳಿದಿದ್ದಾನೆ. ಮಾರ್ಗದಲ್ಲಿ ಇವನಿಗೇನಾದರೂ ಕೇಡಾದರೆ ಈ ಮುದಿ ತಲೆ ದುಃಖದಿಂದಲೇ ಸಮಾಧಿಗೆ ಸೇರಲು ನೀವು ಕಾರಣರಾಗುವಿರಿ” ಎಂದು ಹೇಳಿದನು.