೬
ಸೇವಾಕಾರ್ಯಕ್ಕೆ ಏಳು ಮಂದಿಯನ್ನು ನೇಮಿಸಿದ್ದು
೧ ಆ ದಿನಗಳಲ್ಲಿ ಶಿಷ್ಯರು ಹೆಚ್ಚುತ್ತಾ ಬರಲಾಗಿ ಅವರೊಳಗೆ ಗ್ರೀಕ್ ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ ದೂರು ನೀಡುತ್ತಾ ಅನುದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವುದಿಲ್ಲವೆಂದು ಗೊಣಗುಟ್ಟಿದರು. ೨ ಆಗ ಹನ್ನೆರಡು ಮಂದಿ ಅಪೊಸ್ತಲರು ಶಿಷ್ಯರನ್ನು ಒಟ್ಟುಗೂಡಿಸಿ, ನಾವು ದೇವರ ವಾಕ್ಯೋಪದೇಶವನ್ನು ಬಿಟ್ಟು ಉಪಚಾರಮಾಡುವುದು ಸರಿಯಲ್ಲವಲ್ಲಾ. ೩ ಆದುದರಿಂದ ಸಹೋದರರೇ, ಪವಿತ್ರಾತ್ಮಭರಿತರೂ, ಜ್ಞಾನಸಂಪನ್ನರೂ ಮತ್ತು ಒಳ್ಳೆಯ ಸಾಕ್ಷಿಯನ್ನುಳಿಸಿಕೊಂಡಿರುವ ಏಳು ಮಂದಿಯನ್ನು ನಿಮ್ಮೊಳಗಿಂದ ನೋಡಿ ಆರಿಸಿಕೊಳ್ಳಿರಿ. ಅವರನ್ನು ಈ ಕೆಲಸಕ್ಕಾಗಿ ನೇಮಿಸುವೆವು. ೪ ನಾವಾದರೋ ಪ್ರಾರ್ಥನೆಯನ್ನೂ, ವಾಕ್ಯೋಪದೇಶವನ್ನೂ ಮಾಡುವುದರಲ್ಲಿ ನಿರತರಾಗಿರುವೆವು ಎಂದು ಹೇಳಿದರು. ೫ ಈ ಮಾತು ಸರ್ವರಿಗೂ ಒಳ್ಳೆಯದೆಂದು ತೋಚಿತು. ಅವರು ಪವಿತ್ರಾತ್ಮಭರಿತರೂ, ನಂಬಿಕೆಯಿಂದ ತುಂಬಿದವರೂ ಆದ ಸ್ತೆಫನನನ್ನೂ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ, ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬುವವರನ್ನೂ ಆರಿಸಿಕೊಂಡು ಅಪೊಸ್ತಲರ ಮುಂದೆ ನಿಲ್ಲಿಸಿದರು. ೬ ಅಪೊಸ್ತಲರು ಅವರ ಮೇಲೆ ಕೈಗಳನ್ನಿಟ್ಟು ಪ್ರಾರ್ಥನೆಮಾಡಿ ಆ ಕಾರ್ಯಕ್ಕಾಗಿ ಅವರನ್ನು ನೇಮಿಸಿದರು.
೭ ದೇವರ ವಾಕ್ಯವು ಪ್ರಬಲವಾಯಿತು; ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂದಿತು. ಯಾಜಕರಲ್ಲಿಯೂ ಬಹುಜನರು ಕ್ರಿಸ್ತ ನಂಬಿಕೆಗೆ ಒಳಗಾಗುತ್ತಾ ಬಂದರು.
ಸ್ತೆಫನನ್ನು ಬಂಧಿಸಿದ್ದು
೮ ಸ್ತೆಫನನು ದೇವರ ಕೃಪೆಯಿಂದಲೂ, ಬಲದಿಂದಲೂ ತುಂಬಿದವನಾಗಿ ಜನರಲ್ಲಿ ಮಹಾ ಅದ್ಭುತ ಕಾರ್ಯಗಳನ್ನೂ, ಸೂಚಕಕಾರ್ಯಗಳನ್ನೂ ಮಾಡುತ್ತಾ ಇದ್ದನು. ೯ ಆದರೆ ಲಿಬೆರ್ತೀನರೆಂಬವರ ಸಮಾಜಕ್ಕೆ ಸೇರಿದ ಕುರೇನ್ಯದವರು ಮತ್ತು ಅಲೆಕ್ಸಾಂದ್ರಿಯದವರು, ಕಿಲಿಕ್ಯ ಮತ್ತು ಆಸ್ಯ ಸೀಮೆಗಳಿಂದ ಬಂದವರಲ್ಲಿ ಕೆಲವರು ಎದ್ದು ಸ್ತೆಫನನ ಸಂಗಡ ತರ್ಕಮಾಡುತ್ತಾ ಇದ್ದರು. ೧೦ ಅವನ ಮಾತಿನಲ್ಲಿ ಕಂಡುಬರುತ್ತಿದ್ದ ಜ್ಞಾನವನ್ನೂ, ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲಾರದೆ ಹೋದರು. ೧೧ ಆಗ ಅವರು ಕೆಲವು ಜನರಿಗೆ, ಇವನು ಮೋಶೆಗೆ ವಿರೋಧವಾಗಿಯೂ, ದೇವರಿಗೆ ವಿರೋಧವಾಗಿಯೂ ದೂಷಣೆಯ ಮಾತುಗಳನ್ನಾಡುವುದನ್ನು ಕೇಳಿದೆವೆಂದು ಹೇಳಿರಿ ಎಂದು ಕೆಲವರನ್ನು ಮನವೊಲಿಸಿದರು. ೧೨ ಅವರು ಜನರನ್ನೂ, ಹಿರಿಯರನ್ನೂ, ಶಾಸ್ತ್ರಿಗಳನ್ನೂ ಪ್ರಚೋದಿಸಿದರು ಮತ್ತು ಅವನನ್ನು ಹಿಡಿದು, ಎಳೆದುಕೊಂಡು, ಹಿರೀಸಭೆಗೆ ತೆಗೆದುಕೊಂಡು ಹೋಗಿ ಅವನಿಗೆ ವಿರುದ್ಧವಾಗಿ ಸುಳ್ಳುಸಾಕ್ಷಿಗಳನ್ನು ಕರತಂದು ನಿಲ್ಲಿಸಿದರು. ೧೩ ಆ ಸಾಕ್ಷಿಗಳು, ಈ ಮನುಷ್ಯನು ಈ ಪರಿಶುದ್ಧವಾದ ಸ್ಥಳಕ್ಕೆ ವಿರೋಧವಾಗಿಯೂ, ಧರ್ಮಶಾಸ್ತ್ರಕ್ಕೆ ವಿರೋಧವಾಗಿಯೂ ಮಾತನಾಡುವುದನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಿದರು. ೧೪ ಆ ನಜರೇತಿನ ಯೇಸು ಈ ಸ್ಥಳವನ್ನು ನಾಶಮಾಡಿ, ಮೋಶೆ ನಮಗೆ ನೇಮಿಸಿರುವ ಆಚಾರಗಳನ್ನು ಬೇರೆ ಮಾಡುವನೆಂಬುದಾಗಿ ಇವನು ಹೇಳುವುದನ್ನು ನಾವು ಕೇಳಿದ್ದೇವೆ ಅಂದರು. ೧೫ ಆಗ ಹಿರೀಸಭೆಯಲ್ಲಿ ಕುಳಿತಿದ್ದವರೆಲ್ಲರೂ ಅವನನ್ನು ದೃಷ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಇರುವುದನ್ನು ಕಂಡರು.