೨೭
ಅರಸನಾದ ಯೋತಾಮನು
೧ ಯೋತಾಮನು ಪಟ್ಟಕ್ಕೆ ಬಂದಾಗ ಅವನು ಇಪ್ಪತ್ತೈದು ವರುಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಹದಿನಾರು ವರುಷಗಳಕಾಲ ಆಳಿದನು. ಚಾದೋಕನ ಮಗಳಾದ ಯೆರೂಷ ಎಂಬಾಕೆಯು ಇವನ ತಾಯಿ. ೨ ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು. ಆದರೆ ಅವನಂತೆ ಯೆಹೋವನ ಆಲಯವನ್ನು ಪ್ರವೇಶಿಸಲಿಲ್ಲ. ಪ್ರಜೆಗಳಾದರೋ ದುರಾಚಾರಿಗಳಾಗಿಯೇ ಇದ್ದರು. ೩ ಯೆಹೋವನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿ, ಓಫೇಲ್ ಗೋಡೆಯ ಹೆಚ್ಚಿನ ಭಾಗವನ್ನು ಕಟ್ಟಿಸಿದವನು ಇವನೇ. ೪ ಇದಲ್ಲದೆ, ಇವನು ಯೆಹೂದ ಪರ್ವತ ಪ್ರದೇಶದಲ್ಲಿ ಪಟ್ಟಣಗಳನ್ನೂ, ಕಾಡುಗಳಲ್ಲಿ ದುರ್ಗಗಳನ್ನೂ, ಗೋಪುರಗಳನ್ನೂ ಕಟ್ಟಿಸಿದನು. ೫ ಅಮ್ಮೋನಿಯರ ಅರಸರೊಡನೆ ಯುದ್ಧ ಮಾಡಿ ಅವರನ್ನು ಗೆದ್ದನು. ಅಮ್ಮೋನಿಯರು ಆ ವರುಷದಲ್ಲಿ ಇವನಿಗೆ ನೂರು ತಲಾಂತು ಬೆಳ್ಳಿ, ಹತ್ತುಸಾವಿರ ಕೋರ್ (ಸಾವಿರ ಮೆಟ್ರಿಕ್ ಟನ್) ಗೋದಿ, ಹತ್ತುಸಾವಿರ ಕೋರ್ ಜವೆಗೋದಿ ಇವುಗಳನ್ನು ಕೊಡಬೇಕಾಯಿತು. ಅಮ್ಮೋನಿಯರು ಅವನಿಗೆ ಎರಡನೆಯ ಮತ್ತು ಮೂರನೆಯ ವರುಷಗಳಲ್ಲಿಯೂ ಹೀಗೆಯೇ ಕೊಟ್ಟರು. ೬ ಯೋತಾಮನು ತನ್ನ ದೇವರಾದ ಯೆಹೋವನ ಚಿತ್ತಾನುಸಾರವಾಗಿ ನಡೆದುಕೊಂಡದ್ದರಿಂದ ಬಲವುಳ್ಳವನಾದನು. ೭ ಯೋತಾಮನ ಉಳಿದ ಚರಿತ್ರೆಯೂ, ಅವನು ನಡೆಸಿದ ಯುದ್ಧಗಳು ಹಾಗೂ ಕಾರ್ಯ ಚಟುವಟಿಕೆಗಳು ಇಸ್ರಾಯೇಲರ ಮತ್ತು ಯೆಹೂದ್ಯರ ರಾಜ ಗ್ರಂಥಗಳಲ್ಲಿ ಬರೆಯಲ್ಪಟ್ಟಿದೆ. ೮ ಅವನು ತನ್ನ ಇಪ್ಪತ್ತೈದನೆಯ ವರುಷದಲ್ಲಿ ಪಟ್ಟಕ್ಕೆ ಬಂದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳ್ವಿಕೆ ನಡೆಸಿದನು. ೯ ಯೋತಾಮನು ತನ್ನ ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಆಹಾಜನು ಅರಸನಾದನು.