೨೩
೧ ಏಳನೆಯ ವರುಷದಲ್ಲಿ ಯೆಹೋಯಾದನು ಧೈರ್ಯತಂದುಕೊಂಡು ಯೆರೋಹಾಮನ ಮಗನಾದ ಅಜರ್ಯ, ಯೆಹೋಹಾನಾನನ ಮಗನಾದ ಇಷ್ಮಾಯೇಲ್, ಓಬೇದನ ಮಗನಾದ ಅಜರ್ಯ, ಅದಾಯನ ಮಗನಾದ ಮಾಸೇಯ, ಜಿಕ್ರಿಯ ಮಗನಾದ ಎಲೀಷಾಫಾಟ್ ಎಂಬ ಶತಾಧಿಪತಿಗಳೊಡನೆ ಒಪ್ಪಂದ ಮಾಡಿಕೊಂಡನು. ೨ ಇವರು ಯೆಹೂದದಲ್ಲೆಲ್ಲಾ ಸಂಚರಿಸಿ ಎಲ್ಲಾ ಪಟ್ಟಣಗಳಿಂದ ಲೇವಿಯರನ್ನೂ, ಇಸ್ರಾಯೇಲರ ಗೋತ್ರ ಪ್ರಧಾನರನ್ನೂ ಒಟ್ಟುಗೂಡಿಸಲು ಅವರು ಯೆರೂಸಲೇಮಿಗೆ ಬಂದರು. ೩ ಹೀಗೆ ಕೂಡಿ ಬಂದವರೆಲ್ಲರೂ ದೇವಾಲಯದಲ್ಲಿ ಅರಸನೊಂದಿಗೆ ಒಪ್ಪಂದ ಮಾಡಿಕೊಂಡರು. ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು, ಯೆಹೋವನು ದಾವೀದನ ಸಂತಾನದವರಿಗೆ ಮಾಡಿದ ವಾಗ್ದಾನಕ್ಕೆ ಅನುಸಾರವಾಗಿ ಅರಸನಾಗತಕ್ಕವನು ಇವನೇ. ೪ ಈಗ ನೀವು ಮಾಡತಕ್ಕದ್ದು ಏನೆಂದರೆ: ಸಬ್ಬತ್ ದಿನದಂದು ದೇವಾಲಯದ ಸೇವೆಗೆ ಬರಬೇಕಾದ ಲೇವಿಯರಲ್ಲೂ, ಯಾಜಕರಲ್ಲೂ ಮೂರರಲ್ಲೊಂದು ಭಾಗದವರು ದೇವಸ್ಥಾನದ ದ್ವಾರಪಾಲಕರಾಗಿ ನಿಲ್ಲಬೇಕು. ೫ ಇನ್ನೊಂದು ಭಾಗದವರು ಅರಸನ ಅರಮನೆಯನ್ನೂ, ಮತ್ತೊಂದು ಭಾಗದವರು ಯೆಸೋದ್ ಬಾಗಿಲನ್ನೂ ಕಾಯಬೇಕು. ಇತರ ಜನರೆಲ್ಲರೂ ಯೆಹೋವನ ಆಲಯದ ಪ್ರಾಕಾರದಲ್ಲೇ ಇರಬೇಕು. ೬ ಯಾಜಕರೂ ಹಾಗು ಸೇವೆಯಲ್ಲಿರುವ ಲೇವಿಯರು ಹೊರತಾಗಿ ಯಾರೂ ಆಲಯದೊಳಗೆ ಬರಬಾರದು. ಏಕೆಂದರೆ ಅವರು ಪರಿಶುದ್ಧರಾಗಿರುವುದರಿಂದ ಬರಬಹುದು. ಉಳಿದ ಜನರೆಲ್ಲರೂ ಯೆಹೋವನ ಅಜ್ಞಾನುಸಾರವಾಗಿ ಹೊರಗಿರಬೇಕು. ೭ ಲೇವಿಯರು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ನಿಂತು ಆಲಯದೊಳಕ್ಕೆ ನುಗ್ಗುವವರನ್ನು ಸಂಹರಿಸಬೇಕು. ಅರಸನು ಹೋಗಿ ಬರುವಾಗಲೆಲ್ಲಾ ಅವರು ಅವನ ಜೊತೆಯಲ್ಲೇ ಇರಬೇಕು” ಎಂದು ಹೇಳಿದನು. ೮ ಲೇವಿಯ ಎಲ್ಲಾ ಯೆಹೂದ್ಯರೂ ಯಾಜಕನಾದ ಯೆಹೋಯಾದನ ಆಜ್ಞೆಯಂತೆ ನಡೆದುಕೊಂಡರು. ಅವನು ಸಬ್ಬತ್ ದಿನದಲ್ಲಿ ಸೇವಾ ವಿಮುಕ್ತರಾದ ವರ್ಗಗಳವರನ್ನು ಕಳುಹಿಸಿಬಿಡಲಿಲ್ಲ; ಆದುದರಿಂದ ಪ್ರತಿಯೊಬ್ಬನು ಸಬ್ಬತ್ ದಿನ ಮನೆಗೆ ಹೋಗಬೇಕಾಗಿದ್ದ ಮತ್ತು ಬರಬೇಕಾಗಿದ್ದ ತನ್ನ ಕೈಕೆಳಗಿನವರನ್ನು ಸೇರಿಸಿಕೊಂಡನು. ೯ ದೇವಾಲಯದಲ್ಲಿಟ್ಟಿದ್ದ ಅರಸನಾದ ದಾವೀದನ ಬರ್ಜಿ, ಗುರಾಣಿ, ಖೇಡ್ಯಗಳೇ ಮುಂತಾದ ಆಯುಧಗಳನ್ನು ಯಾಜಕನಾದ ಯೆಹೋಯಾದನು ಶತಾಧಿಪತಿಗಳಿಗೆ ಕೊಟ್ಟನು. ೧೦ ಆಯುಧಪಾಣಿಗಳಾದ ಎಲ್ಲಾ ಜನರನ್ನು ಅರಸನ ಸುತ್ತಲೂ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಯಜ್ಞವೇದಿಯ ವರೆಗೂ ಸಾಲಾಗಿ ನಿಲ್ಲಿಸಿದನು. ೧೧ ಆಮೇಲೆ ಯೆಹೋಯಾದನ ಮಕ್ಕಳು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ಅಭಿಷೇಕ ಮಾಡಿದರು. ಕೂಡಲೆ ಜನರು, “ಅರಸನು ಚಿರಂಜೀವಿಯಾಗಿರಲಿ” ಎಂದು ಹರಸಿದರು.
೧೨ ಜನರು ಅತ್ತಿತ್ತ ಓಡಾಡುತ್ತಾ ಅರಸನನ್ನು ಹರಸುವ ಗದ್ದಲವನ್ನು ಅತಲ್ಯಳು ಕೇಳಿ ಅವರು ಇದ್ದ ಯೆಹೋವನ ಆಲಯಕ್ಕೆ ಬಂದಳು. ೧೩ ಅಲ್ಲಿ ಅರಸನು ಬಾಗಿಲಿನ ಬಳಿಯಲ್ಲಿರುವ ರಾಜಸ್ತಂಭದ ಹತ್ತಿರ ನಿಂತಿದ್ದನು. ಅಧಿಪತಿಗಳು ಹಾಗೂ ತುತೂರಿಗಳನ್ನು ಊದುವವರೂ ಅರಸನ ಹತ್ತಿರ ಇದ್ದರು; ಸಾಧಾರಣ ಜನರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಗಾಯಕರು ವಾದ್ಯಗಳನ್ನು ನುಡಿಸುತ್ತಾ ಕೀರ್ತನೆಗಳನ್ನು ಹಾಡುತ್ತಿದ್ದರು. ಇದನ್ನು ಕಂಡಕೂಡಲೆ ಅತಲ್ಯಳು ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ, ದ್ರೋಹ” ಎಂದು ಕೂಗಿದಳು. ೧೪ ಆಗ ಯಾಜಕನಾದ ಯೆಹೋಯಾದನು ಸೇನಾನಿಗಳಾದ ಶತಾಧಿಪತಿಗಳನ್ನು ಹೊರಗೆ ಕರೆದುಕೊಂಡು ಹೋಗಿ ಅವರಿಗೆ, “ಈಕೆಯನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿರಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಸಾಗಿಸಿಕೊಂಡು ಹೊರಗೆ ತಳ್ಳಲಿ; ಮತ್ತು ಈಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ” ಎಂದು ಆಜ್ಞಾಪಿಸಿದನು. ೧೫ ಅವರು ಆಕೆಯನ್ನು ಹಿಡಿದು ಅರಸನ ಅರಮನೆಗೆ ಹೋಗುವ ಕುದುರೆ ಬಾಗಿಲಿನ ತನಕ ಒಯ್ದು, ಅವಳನ್ನು ಕೊಂದು ಹಾಕಿದರು.
ಯೆಹೋಯಾದನಿಂದ ಧಾರ್ಮಿಕ ಸುಧಾರಣೆ
೧೬ ಆ ನಂತರ ಯೆಹೋಯಾದನು ಎಲ್ಲಾ ಜನರನ್ನೂ, ಅರಸನನ್ನೂ ಪ್ರೇರೇಪಿಸಿ ತಾವೆಲ್ಲರೂ ಯೆಹೋವನ ಪ್ರಜೆಗಳಾಗಿರುವೆವೆಂದು ಅವರೊಡನೆ ಪ್ರಮಾಣ ಮಾಡಿದನು. ೧೭ ತರುವಾಯ ಜನರೆಲ್ಲರೂ ಬಾಳನ ಕ್ಷೇತ್ರಕ್ಕೆ ಹೋಗಿ ಪೂಜಾರಿಯಾದ ಮತ್ತಾನನನ್ನು ಯಜ್ಞವೇದಿಗಳ ಎದುರಿನಲ್ಲಿಯೇ ಕೊಂದುಹಾಕಿದನು; ಆ ಕ್ಷೇತ್ರವನ್ನೂ ಅದರಲ್ಲಿದ್ದ ಯಜ್ಞವೇದಿ ಹಾಗೂ ವಿಗ್ರಹಗಳನ್ನೂ ಒಡೆದುಹಾಕಿ ಹಾಳುಮಾಡಿ ಬಿಟ್ಟರು. ೧೮ ಯೆಹೋಯಾದನು ಲೇವಿಯರಾದ ಯಾಜಕರ ಕೈಕಳಗೆ ಯೆಹೋವನ ಆಲಯದ ಕಾವಲುಗಾರರನ್ನು ನೇಮಿಸಿದನು. ದಾವೀದನು ಆ ಯಾಜಕರನ್ನು ಯೆಹೋವನ ಆಲಯದ ಸೇವೆಗಾಗಿ ವರ್ಗವರ್ಗಗಳಾಗಿ ವಿಭಾಗಿಸಿದ್ದನು. ದಾವೀದನು ನೇಮಿಸಿದ್ದ ಉತ್ಸಾಹ ಗಾಯನದೊಡನೆ ಮೋಶೆಯ ಧರ್ಮಶಾಸ್ತ್ರಾನುಸಾರ ಯೆಹೋವನಿಗೆ ಸರ್ವಾಂಗಹೋಮ ಸಮರ್ಪಣೆ ಮಾಡುವುದೇ ಅವರ ಕರ್ತವ್ಯವಾಗಿತ್ತು. ೧೯ ಯಾವ ವಿಷಯದಲ್ಲಾದರೂ ಅಶುದ್ಧನಾದವನು ಯೆಹೋವನ ಆಲಯವನ್ನು ಪ್ರವೇಶಿಸದಂತೆ ಯೆಹೋಯಾದನು ಆಯಾ ಬಾಗಿಲುಗಳಲ್ಲಿ ದ್ವಾರಪಾಲಕರನ್ನಿರಿಸಿದನು. ೨೦ ಆಮೇಲೆ ಅವನು ಶತಾಧಿಪತಿಗಳು, ಶ್ರೀಮಂತರು, ಜನನಾಯಕರು ಹಾಗೂ ಸಾಧಾರಣ ಜನರು ಇವರೊಡನೆ ಅರಸನನ್ನು ಯೆಹೋವನ ಆಲಯದಿಂದ ಮೇಲಣ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು. ೨೧ ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು; ಪಟ್ಟಣವು ಶಾಂತವಾಯಿತು; ಅತಲ್ಯಳನ್ನು ಕತ್ತಿಯಿಂದ ಸಂಹರಿಸಿದರು.