೧೮
ಮೀಕನಿಗೆ ಯೆಹೋವನ ಪ್ರವಾದನೆ
೧ ಯೆಹೋಷಾಫಾಟನಿಗೆ ಧನಘನತೆಗಳು ಬಹಳವಾಗಿದ್ದವು. ಅವನು ಅಹಾಬನೊಡನೆ ನೆಂಟಸ್ಥಿಕೆಯನ್ನು ಮಾಡಿಕೊಂಡನು. ೨ ಕೆಲವು ವರುಷಗಳಾದ ನಂತರ ಅವನ ಬಳಿಗೆ ಸಮಾರ್ಯಕ್ಕೆ ಹೋದನು. ಅಹಾಬನು ಅವನಿಗೂ ಅವನೊಡನೆ ಬಂದ ಜನರಿಗಾಗಿಯೂ ಹಿಂಡುಗಳಿಂದ ಅನೇಕ ದನಕುರಿಗಳನ್ನು ಕೊಯ್ದು ಔತಣವನ್ನು ಏರ್ಪಡಿಸಿದನು. ತನ್ನ ಸಂಗಡ ಯುದ್ಧಕ್ಕಾಗಿ ರಾಮೋತ್ ಗಿಲ್ಯಾದಿಗೆ ಬರಬೇಕೆಂದು ಅವನನ್ನು ಪ್ರೇರೆಪಿಸಿದನು. ೩ ಇಸ್ರಾಯೇಲರ ಅರಸನಾದ ಅಹಾಬನು ಯೆಹೂದ್ಯರ ಅರಸನಾದ ಯೆಹೋಷಾಫಾಟನನ್ನು, “ನನ್ನ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತೀಯೋ?” ಎಂದು ಕೇಳಿದನು. ಅದಕ್ಕೆ ಅವನು, “ನಾನೂ, ನೀನೂ ನನ್ನ ಜನರೂ ನಿನ್ನ ಜನರೂ ಒಂದೇ ಆಲ್ಲವೇ? ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಬರುವೆನು” ಎಂದು ಉತ್ತರ ಕೊಟ್ಟನು. ೪ ಯೆಹೋಷಾಫಾಟನು ಇಸ್ರಾಯೇಲರ ಅರಸನಿಗೆ, “ಇಂದು ಯೆಹೋವನ ಆಲೋಚನೆಯನ್ನು ಕೇಳು” ಎಂದು ಕೇಳಿಕೊಂಡನು. ೫ ಅನಂತರ ಇಸ್ರಾಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ನಾನೂರು ಮಂದಿ ಪ್ರವಾದಿಗಳನ್ನು ಸೇರಿಸಿ, “ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೋಗಬಹುದೋ? ಹೋಗಬಾರದೋ?” ಎಂದು ಕೇಳಿದನು. ಅವರು, “ಹೋಗಬಹುದು, ದೇವರು ಅದನ್ನು ಅರಸನ ಕೈಗೆ ಒಪ್ಪಿಸುವನು” ಎಂದರು. ೬ ಆದರೆ ಯೆಹೋಷಾಫಾಟನು ಇಸ್ರಾಯೇಲರ ಅರಸನಿಗೆ, “ಯೆಹೋವನ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸಬಹುದಾದ ಬೇರೊಬ್ಬ ಪ್ರವಾದಿ ಇಲ್ಲವೇ?” ಎಂದು ಕೇಳಿದನು. ೭ ಅವನು, “ನಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸ ಬಲ್ಲವನಾದ ಒಬ್ಬ ಪ್ರವಾದಿ ಇದ್ದಾನೆ, ಅವನು ಇಮ್ಲನ ಮಗನಾದ ಮೀಕಾಯೆಹು ಎಂಬುವವನು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ; ಅವನು ನನ್ನನ್ನು ಕುರಿತು ಯಾವಾಗಲೂ ಶುಭವನ್ನು ನುಡಿಯದೆ, ಅಶುಭವನ್ನೇ ನುಡಿಯುತ್ತಾನೆ” ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋಷಾಫಾಟನು, “ಅರಸನು ಹಾಗನ್ನಬಾರದು” ಎಂದನು. ೮ ಆಗ ಇಸ್ರಾಯೇಲರ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ, “ಬೇಗ ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು. ೯ ಇಸ್ರಾಯೇಲರ ಅರಸನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರ್ಯ ಪಟ್ಟಣದ ಹೆಬ್ಬಾಗಲಿನ ಹತ್ತಿರವಿರುವ ಬಯಲಿನಲ್ಲಿ ತಮ್ಮ ತಮ್ಮ ಆಸನಗಳ ಮೇಲೆ ಕುಳಿತುಕೊಂಡಿರಲು. ಎಲ್ಲಾ ಪ್ರವಾದಿಗಳು ಅವರ ಮುಂದೆ ಪರವಶರಾಗಿ ಪ್ರವಾದಿಸತೊಡಗಿದರು. ೧೦ ಅವರಲ್ಲಿ ಕೆನಾನನ ಮಗನಾದ ಚಿದ್ಕೀಯ ಎಂಬವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ ತಲೆಗೆ ಕಟ್ಟಿಕೊಂಡು ಬಂದು, “ಕೊಂಬುಗಳಿಂದಲೋ ಎಂಬಂತೆ ನೀನು ಅರಾಮ್ಯರನ್ನು ಇರಿದು ಕೊಂದುಹಾಕುವಿ ಎಂಬುದಾಗಿ ಯೆಹೋವನು ಹೇಳುತ್ತಾನೆ” ಎಂದನು. ೧೧ ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ನುಡಿದು, “ರಾಮೋತ್ ಗಿಲ್ಯಾದಿಗೆ ಹೋಗು; ನೀನು ಜಯಶಾಲಿಯಾಗಿ ಬರುವಿ; ಯೆಹೋವನು ಅದನ್ನು ಅರಸನ ಕೈಗೆ ಒಪ್ಪಿಸುವನು” ಎಂದರು.
೧೨ ಇತ್ತ ಮೀಕಾಯೆಹುವನ್ನು ಕರೆಯುವುದಕ್ಕೆ ಬಂದಿದ್ದ ದೂತನು ಅವನಿಗೆ, “ಎಲ್ಲಾ ಪ್ರವಾದಿಗಳೂ ಏಕ ಮನಸ್ಸಿನಿಂದ ಅರಸನಿಗೆ ಶುಭವನ್ನೇ ತಿಳಿಸುತ್ತಿದ್ದಾರೆ; ದಯವಿಟ್ಟು ನೀನೂ ಅವರಂತೆ ಶುಭವನ್ನೇ ತಿಳಿಸು” ಎಂದು ಹೇಳಿದನು. ೧೩ ಅದಕ್ಕೆ ಮೀಕಾಯೆಹುವು, “ಯೆಹೋವನಾಣೆ, ನನ್ನ ದೇವರು ಹೇಳುವುದನ್ನೇ ನುಡಿಯುತ್ತೇನೆ” ಎಂದು ಉತ್ತರಕೊಟ್ಟನು. ೧೪ ಅವನು ಅರಸನ ಬಳಿಗೆ ಬಂದಾಗ ಅರಸನು, “ಮೀಕಾಯೆಹುವೇ? ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕಾಗಿ ಹೋಗಬಹುದೋ? ಹೋಗಬಾರದೋ? ಎಂದು ಕೇಳಿದನು. ಅವನು, ಹೋಗಬಹುದು, ಕೃತಾರ್ಥನಾಗಿ ಬರುವಿರಿ, ವೈರಿಗಳು ನಿನ್ನ ಕೈವಶವಾಗುವರು” ಎಂದು ಹೇಳಿದನು. ೧೫ ಆಗ ಅರಸನು ಅವನಿಗೆ, “ಸತ್ಯವನ್ನೇ ತಿಳಿಸಬೇಕೆಂದು ಯೆಹೋವನ ಹೆಸರಿನಲ್ಲಿ ನಾನು ನಿನ್ನಿಂದ ಎಷ್ಟು ಸಾರಿ ಪ್ರಮಾಣ ಮಾಡಿಸಬೇಕು?” ಎಂದನು ೧೬ ಆಗ ಅವನು, “ಇಸ್ರಾಯೇಲರೆಲ್ಲರೂ ಕುರುಬನಿಲ್ಲದ ಕುರಿ ಹಿಂಡುಗಳಂತೆ ಬೆಟ್ಟಗಳಲ್ಲಿ ಚದರಿ ಹೋದದ್ದನ್ನು ಕಂಡೆನು; ಆಗ ಯೆಹೋವನು, ‘ಇವರು ಒಡೆಯನಿಲ್ಲದವರಾಗಿ ಇರುತ್ತಾರೆ; ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ’ ” ಎಂಬುದಾಗಿ ಉತ್ತರಕೊಟ್ಟನು. ೧೭ ಆಗ ಇಸ್ರಾಯೇಲರ ಅರಸನು ಯೆಹೋಷಾಫಾಟನಿಗೆ, “ಈ ಪ್ರವಾದಿಯು ನನಗೆ ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ, ತಿಳಿಸುತ್ತಾನೆಂದು ನಾನು ನಿನಗೆ ಹೇಳಲಿಲ್ಲವೋ?” ಎಂದನು. ೧೮ ಅದಕ್ಕೆ ಮಿಕಾಯೆಹುವು, “ಅದಿರಲಿ, ಯೆಹೋವನ ವಾಕ್ಯವನ್ನು ಕೇಳಿರಿ, ಯೆಹೋವನು ತನ್ನ ಸಿಂಹಾಸನದ ಮೇಲೆ ಕೂಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಆತನ ಎಡಬಲಗಡೆಗಳಲ್ಲಿ ನಿಂತಿದ್ದನ್ನೂ ಕಂಡೆನು. ೧೯ ಯೆಹೋವನು ತನ್ನ ಹತ್ತಿರ ನಿಂತವರನ್ನು, ‘ಇಸ್ರಾಯೇಲರ ಅರಸನಾದ ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಹೋಗಲು ಯಾರು ಪ್ರೇರೇಪಿಸ ಬಲ್ಲಿರಿ?’ ಎಂದು ಕೇಳಿದಾಗ, ಒಬ್ಬನು ಒಂದು ವಿಧವಾಗಿಯೂ ಇನ್ನೊಬ್ಬನು ಇನ್ನೊಂದು ವಿಧವಾಗಿಯೂ ಉತ್ತರಕೊಟ್ಟರು. ೨೦ ಕಡೆಯಲ್ಲಿ ಒಂದು ಆತ್ಮವು ಯೆಹೋವನ ಮುಂದೆ ಬಂದು ನಿಂತು ಆತನಿಗೆ, ‘ನಾನು ಹೋಗಿ ಅವನನ್ನು ಪ್ರೇರೇಪಿಸುವೆನು’ ಎಂದಿತು. ‘ಹೇಗೆ ಪ್ರೇರೇಪಿಸುವಿ?’ ಎಂದು ಯೆಹೋವನು ಕೇಳಲು, ೨೧ ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳ ಒಳಗೆ ಸೇರುವೆನು’ ಎಂದು ಉತ್ತರಕೊಟ್ಟಿತು. ಆಗ ಯೆಹೋವನು ಅದಕ್ಕೆ, ‘ಹೋಗಿ ಅದರಂತೆ ಮಾಡು; ಅವನನ್ನು ಪ್ರೇರೇಪಿಸು ನೀನು ಸಫಲನಾಗುವಿ’ ಎಂದನು. ೨೨ ನೋಡು, ಯೆಹೋವನು ನಿನ್ನ ವಿಷಯದಲ್ಲಿ ಕೇಡು ನುಡಿದು, ನಿನ್ನ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನು ಕಳುಹಿಸಿದ್ದಾನೆ” ಎಂದು ಹೇಳಿದನು. ೨೩ ಆಗ ಕೆನಾನನ ಮಗನಾದ ಚಿದ್ಕೀಯನು ಮೀಕಾಯೆಹುವಿನ ಬಳಿಗೆ ಹೋಗಿ ಅವನ ಕೆನ್ನೆಗೆ ಒಂದು ಏಟು ಹಾಕಿ, “ಯೆಹೋವನ ಆತ್ಮವು ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತಾಡುವುದಕ್ಕಾಗಿ ಯಾವ ಮಾರ್ಗವಾಗಿ ಬಂದಿತು?” ಎಂದನು. ೨೪ ಅದಕ್ಕೆ ಮೀಕಾಯೆಹುವು, “ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು” ಎಂದು ಉತ್ತರ ಕೊಟ್ಟನು. ೨೫ ಆಗ ಇಸ್ರಾಯೇಲರ ಅರಸನು ಸೇವಕರಿಗೆ, “ಮೀಕಾಯೆಹುವನ್ನು ಹಿಡಿದುಕೊಂಡು ಹೋಗಿ ಪಟ್ಟಣದ ಅಧಿಕಾರಿಯಾದ ಆಮೋನನಿಗೂ ರಾಜಪುತ್ರನಾದ ಯೋವಾಷನಿಗೂ ಒಪ್ಪಿಸಿರಿ. ೨೬ ಅವರಿಗೆ, ‘ನಾನು ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕುಗ್ಗಿಸಬೇಕೆಂದು ಅರಸನು ಹೇಳಿದ್ದಾನೆ’ ಎಂದು ಹೇಳಿರಿ” ಎಂಬುದಾಗಿ ಆಜ್ಞಾಪಿಸಿದನು. ೨೭ ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತನಾಗಿ ಬರುವುದಾದರೆ, ನಾನು ನುಡಿದದ್ದು ಯೆಹೋವನ ಮಾತಲ್ಲ” ಎಂದು ಹೇಳಿ, “ಮಹಾ ಜನರೇ, ನನ್ನ ಮಾತನ್ನು ಗಮನದಲ್ಲಿಟ್ಟುಕೊಳ್ಳಿರಿ” ಎಂದು ಕೂಗಿ ಹೇಳಿದನು. ೨೮ ಇಸ್ರಾಯೇಲರ ಅರಸನೂ ಹಾಗೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಮೋತ್ ಗಿಲ್ಯಾದಿಗೆ ಯುದ್ಧಕ್ಕೆ ಹೊರಟರು. ೨೯ ಇಸ್ರಾಯೇಲರ ಅರಸನು ಯೆಹೋಷಾಫಾಟನಿಗೆ, “ನಾನು ವೇಷ ಹಾಕಿಕೊಂಡು ಯುದ್ಧ ಭೂಮಿಗೆ ಬರುತ್ತೇನೆ; ನೀನಾದರೋ ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡೇ ಬಾ” ಎಂದು ಹೇಳಿ ವೇಷ ಹಾಕಿಕೊಂಡನು; ತರುವಾಯ ಯುದ್ಧ ಭೂಮಿಗೆ ಹೋದರು. ೩೦ ಅರಾಮ್ಯರ ಅರಸನು ತನ್ನ ರಥಬಲದ ಅಧಿಪತಿಗಳಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ, ಅಧಿಪತಿಗಳನ್ನೂ ಬಿಟ್ಟು ಇಸ್ರಾಯೇಲರ ಅರಸನಿಗೇ ಗುರಿಯಿಡಿರಿ” ಎಂದು ಆಜ್ಞಾಪಿಸಿದ್ದನು. ೩೧ ರಥಬಲದ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ ಅವನೇ ಇಸ್ರಾಯೇಲರ ಅರಸನೆಂದು ನೆನೆದು, ಅವನಿಗೆ ವಿರುದ್ಧವಾಗಿ ಯುದ್ಧ ಮಾಡುವುದಕ್ಕೆ ಸುತ್ತಿಕೊಂಡರು. ಆಗ ಯೆಹೋಷಾಫಾಟನು ಯೆಹೋವನನ್ನು ಸಾಹಯಕ್ಕಾಗಿ ಕೂಗಿದನು. ಆಗ ದೇವರಾದ ಯೆಹೋವನು ಅವನ ನೆರವಿಗೆ ಬಂದು, ಶತ್ರುಗಳನ್ನು ಅವನ ಕಡೆಯಿಂದ ಹೊರಟು ಹೋಗುವಂತೆ ಮಾಡಿದನು. ೩೨ ಅವನು ಇಸ್ರಾಯೇಲರ ಅರಸನಲ್ಲವೆಂಬುದು ರಥಬಲವ ಅಧಿಪತಿಗಳಿಗೆ ಗೊತ್ತಾದಾಗ ಅವರು ಅವನನ್ನು ಬಿಟ್ಟು ಹಿಂತಿರುಗಿದರು.
೩೩ ಅರಾಮ್ಯರ ಒಬ್ಬ ಸೈನಿಕನು ಗುರಿಯಿಡದೆ ಸುಮ್ಮನೆ ಒಂದು ಬಾಣವನ್ನೆಸೆಯಲು, ಆ ಬಾಣವು ಇಸ್ರಾಯೇಲರ ಅರಸನಿಗೆ, ಅವನ ಕವಚದ ಸಂದಿನಲ್ಲಿ ತಾಕಿತು. ಆಗ ಅವನು ತನ್ನ ಸಾರಥಿಗೆ, “ರಥವನ್ನು ತಿರುಗಿಸಿ ನನ್ನನ್ನು ರಣರಂಗದಿಂದ ಆಚೆಗೆ ತೆಗೆದುಕೊಂಡು ಹೋಗು; ನನಗೆ ದೊಡ್ಡ ಗಾಯವಾಗಿದೆ” ಎಂದು ಹೇಳಿದನು. ೩೪ ಆ ದಿನ ಯುದ್ಧವು ಬಹು ಘೋರವಾಗಿದ್ದುದರಿಂದ ಇಸ್ರಾಯೇಲರ ಅರಸನು ಸಾಯಂಕಾಲದವರೆಗೂ ಅರಾಮ್ಯರ ಎದುರಾಗಿ ತನ್ನ ರಥದಲ್ಲೇ ಆತುಕೊಂಡಿರಬೇಕಾಯಿತು. ಸೂರ್ಯಾಸ್ತಮಾನವಾದಾಗ ಅವನು ಸತ್ತನು.