34
ಯೆಹೋವನು ಸದಾ ಭಕ್ತಪಾಲಕನೆಂದು ವರ್ಣಿಸುವ ಇಬ್ರಿಯ ಅಕ್ಷರಕ್ರಮಾನುಸಾರವಾದ ಕೀರ್ತನೆ
ದಾವೀದನು ಅಬೀಮೆಲೆಕನ ಎದುರಿನಲ್ಲಿ ಹುಚ್ಚನಂತೆ ತೋರ್ಪಡಿಸಿಕೊಂಡು ಅವನ ಬಳಿಯಿಂದ ಹೊರಟಾಗ ರಚಿಸಿದ ಕೀರ್ತನೆ.
ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು;
ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು.
ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದು;
ಇದನ್ನು ದೀನರು ಕೇಳಿ ಸಂತೋಷಿಸುವರು.
ನನ್ನೊಡನೆ ಯೆಹೋವನನ್ನು ಕೊಂಡಾಡಿರಿ;
ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.
ನಾನು ಯೆಹೋವನ ಸನ್ನಿಧಿಯಲ್ಲಿ * 34:4 ಅಥವಾ ಹುಡುಕಿದೆನು.ಬೇಡಿಕೊಳ್ಳಲು,
ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು.
ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು;
ಅವರ ಮುಖವು ಅವಮಾನಕ್ಕೆ ಈಡಾಗುವುದೇ ಇಲ್ಲ.
ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು,
ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.
ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು,
ಆತನ ದೂತನು ದಂಡಿಳಿಸಿ, ಕಾವಲಾಗಿದ್ದು ಕಾಪಾಡುತ್ತಾನೆ.
ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ;
ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.
ಯೆಹೋವನ ಜನರೇ, ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ;
ಆತನಲ್ಲಿ ಭಯಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇರುವುದಿಲ್ಲ.
10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು;
ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಒಳಿತಿಗೆ ಕೊರತೆಯಿಲ್ಲ.
11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;
ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು.
12 ದೀರ್ಘಾಯುಷ್ಯವು ಬೇಕೋ?
ಬಹುದಿನ ಬದುಕಿ ಸುಖವನ್ನು ಅನುಭವಿಸಬೇಕೋ?
13 ಹಾಗಾದರೆ ಕೆಟ್ಟದ್ದಕ್ಕೆ ಹೋಗದಂತೆ ನಾಲಿಗೆಯನ್ನು ಕಾದುಕೋ;
ವಂಚನೆಯ ಮಾತುಗಳಿಗೆ ಬಿಡದೆ ತುಟಿಗಳನ್ನು ಇಟ್ಟುಕೋ.
14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನೇ ಮಾಡು;
ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನಪಡು.
15 ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ;
ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.
16 ಕೆಡುಕರಿಗೋ ಯೆಹೋವನು ಕೋಪದ ಮುಖವುಳ್ಳವನಾಗಿರುವನು;
ಲೋಕದಲ್ಲಿ ಅವರ ನೆನಪೇ ಉಳಿಯದಂತೆ ತೆಗೆದುಹಾಕುವನು.
17 ಯೆಹೋವನು ನೀತಿವಂತರ ಕೂಗನ್ನು ಕೇಳಿ,
ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುತ್ತಾನೆ.
18 ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ;
ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.
19 ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ,
ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.
20 ಆತನು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾನೆ;
ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟನ ಕೆಡುಕು ಅವನನ್ನೇ ಕೊಲ್ಲುವುದು;
ನೀತಿವಂತನನ್ನು ದ್ವೇಷಿಸುವವರು ಅಪರಾಧಿಗಳೆಂದು ಎಣಿಸಲ್ಪಡುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ.
ಆತನ ಆಶ್ರಿತರಲ್ಲಿ ಒಬ್ಬರಾದರೂ ಅಪರಾಧಿಯೆಂದು ಎಣಿಸಲ್ಪಡುವುದಿಲ್ಲ.

*34:4 34:4 ಅಥವಾ ಹುಡುಕಿದೆನು.