19
ಇಸ್ರಾಯೇಲರು ಅನುಸರಿಸಬೇಕಾದ ಧರ್ಮ ನಿಯಮಗಳು
ಯೆಹೋವನು ಮೋಶೆಯೊಂದಿಗೆ ಮಾತನಾಡಿ, “ನೀನು ಇಸ್ರಾಯೇಲರ ಸಮೂಹದವರಿಗೆ ಹೀಗೆ ಆಜ್ಞಾಪಿಸಬೇಕು, ‘ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು.
“ ‘ಪ್ರತಿಯೊಬ್ಬನು ತನ್ನ ತಾಯಿತಂದೆಗಳ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ಆಚರಿಸಬೇಕು. ನಾನು ನಿಮ್ಮ ದೇವರಾದ ಯೆಹೋವನು.
“ ‘ಸುಳ್ಳುದೇವರುಗಳ ಕಡೆಗೆ ತಿರುಗಿಕೊಳ್ಳಬಾರದು; ದೇವರೆಂದು ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬಾರದು. ನಾನು ನಿಮ್ಮ ದೇವರಾದ ಯೆಹೋವನು.
“ ‘ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ ಆತನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಸಮರ್ಪಿಸಬೇಕು. ನೀವು ಮಾಡುವ ಯಜ್ಞದ ಮಾಂಸವನ್ನು ಆ ದಿನದಲ್ಲಿಯಾಗಲಿ ಇಲ್ಲವೇ ಮರುದಿನದಲ್ಲಿಯಾಗಲಿ ಊಟಮಾಡಬೇಕು. ಮೂರನೆಯ ದಿನದವರೆಗೆ ಏನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. ಮೂರನೆಯ ದಿನದ ತನಕ ಉಳಿದದ್ದು ಹೇಯವಾದುದರಿಂದ ಅದರಲ್ಲಿ ಏನಾದರೂ ತಿಂದರೆ ಆ ಯಜ್ಞವು ಯೆಹೋವನಿಗೆ ಅಂಗೀಕಾರವಾಗುವುದೇ ಇಲ್ಲ. ಅದರಲ್ಲಿ ಏನಾದರೂ ತಿಂದವನು ಯೆಹೋವನ ಪವಿತ್ರ ದ್ರವ್ಯವನ್ನು ಹೊಲೆಮಾಡಿದವನಾದುದರಿಂದ ತನ್ನ ಪಾಪದ ಫಲವನ್ನು ಅನುಭವಿಸಬೇಕು; ಅವನನ್ನು ಕುಲದಿಂದ ಹೊರಗೆ ಹಾಕಬೇಕು.
“ ‘ನೀವು ಪೈರುಗಳನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿ ಇರುವುದನ್ನೆಲ್ಲಾ ಕೊಯ್ಯಬಾರದು ಮತ್ತು ಕೊಯ್ದಾಗ ಹಕ್ಕಲಾಯಬಾರದು. 10 ದ್ರಾಕ್ಷಿಯ ತೋಟಗಳಲ್ಲಿಯೂ ಹಕ್ಕಲಾಯಬಾರದು; ಉದುರಿದ ಹಣ್ಣುಗಳನ್ನು ಆರಿಸಿಕೊಳ್ಳದೆ ಬಡವರಿಗೂ ಮತ್ತು ಪರದೇಶಿಗಳಿಗೂ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾದ ಯೆಹೋವನು.
11 “ ‘ಕದಿಯಬಾರದು,
“ ‘ಮೋಸಮಾಡಬಾರದು,
“ ‘ಒಬ್ಬರಿಗೊಬ್ಬರು ಸುಳ್ಳು ಹೇಳಬಾರದು.
12 “ ‘ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿಮ್ಮ ದೇವರ ನಾಮವನ್ನು ಅಪಕೀರ್ತಿಗೆ ಒಳಪಡಿಸಬಾರದು. ನಾನು ಯೆಹೋವನು.
13 “ ‘ಮತ್ತೊಬ್ಬನನ್ನು ಬಲಾತ್ಕರಿಸಬಾರದು ಅಥವಾ ಅವನ ಸೊತ್ತನ್ನು ಅಪಹರಿಸಬಾರದು. ಅವನ ಕೂಲಿಯನ್ನು ಮರುದಿನದ ವರೆಗೆ ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಬಾರದು. 14 ಕಿವುಡರನ್ನು ದೂಷಿಸಬಾರದು; ಕುರುಡರು ನಡೆಯುವ ದಾರಿಯಲ್ಲಿ ಅವರ ಕಾಲು ಎಡವುವಂತೆ ಕಲ್ಲನ್ನು ಇಡಬಾರದು; ನಿಮ್ಮ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ಯೆಹೋವನು.
15 “ ‘ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ಅಥವಾ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ, ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.
16 “ ‘ಪರಿಚಯವುಳ್ಳವರಲ್ಲಿ ಒಬ್ಬರ ಮೇಲೊಬ್ಬರು ಚಾಡಿಹೇಳಬಾರದು. * 19:16 ನೆರೆಯವರಿಗೆ ಅಥವಾ ಇತರರಿಗೆ ಅಪಾಯವುಂಟಾಗುವಂಥದ್ದನ್ನು ಮಾಡಬೇಡಿರಿ.ನೆರೆಯವನಿಗೆ ಮರಣ ಶಿಕ್ಷೆಯಾಗಲೇಬೇಕು ಎಂದು ಹಠ ಹಿಡಿಯಬಾರದು. ನಾನು ಯೆಹೋವನು.
17 “ ‘ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು. ನೆರೆಯವನ ದೋಷಕ್ಕೆ ನೀವು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ತಿಳಿಸಲೇಬೇಕು.
18 “ ‘ನಿಮ್ಮ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡನ್ನು ಮಾಡದೆ, ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ, ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ನಾನು ಯೆಹೋವನು.
19 “ ‘ನನ್ನ ಆಜ್ಞೆಗಳನ್ನು ನೀವು ಅನುಸರಿಸಿ ನಡೆಯಬೇಕು.
“ ‘ನಿಮ್ಮ ಪಶುಗಳನ್ನು ಬೇರೆ ಜಾತಿಯ ಪಶುಗಳೊಂದಿಗೆ ಕೂಡಿಸಿ ತಳಿಪಡಿಯಬಾರದು;
“ ‘ನಿಮ್ಮ ಹೊಲಗಳಲ್ಲಿ ಮಿಶ್ರಬೀಜಗಳನ್ನು ಬಿತ್ತಬಾರದು;
“ ‘ನಾರು ಮತ್ತು ಉಣ್ಣೆ ಕೂಡಿರುವ ಬಟ್ಟೆಯನ್ನು ಹಾಕಿಕೊಳ್ಳಬಾರದು.
20 “ ‘ಒಬ್ಬನ ಅಧೀನದಲ್ಲಿರುವ ದಾಸಿ ಹಣಕೊಡುವುದರಿಂದಾಗಲಿ ಅಥವಾ ಉಚಿತವಾಗಿಯಾಗಲಿ ಬಿಡುಗಡೆಯನ್ನು ಹೊಂದದೆ ಇದ್ದರೆ, ಯಾವನಾದರೂ ಅವಳನ್ನು ಸಂಗಮಿಸಿದರೆ ಅವರಿಗೆ ವಿಧಿಸಬೇಕಾದ ಶಿಕ್ಷೆಯ ವಿಷಯವಾಗಿ ನ್ಯಾಯವಿಚಾರಣೆ ಆಗಬೇಕು. ಅವಳು ಸ್ವತಂತ್ರಳಲ್ಲವಾದುದರಿಂದ ಅವರಿಗೆ ಮರಣಶಿಕ್ಷೆಯನ್ನು ವಿಧಿಸಬಾರದು. 21 ಆ ಪುರುಷನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಯೆಹೋವನ ಸನ್ನಿಧಿಗೆ ದೇವದರ್ಶನದ ಗುಡಾರದ ಬಾಗಿಲಿಗೆ ಒಂದು ಟಗರನ್ನು ತರಬೇಕು. 22 ಅವನ ದೋಷಪರಿಹಾರಕ್ಕಾಗಿ ಯಾಜಕನು ಆ ಟಗರನ್ನು ಪ್ರಾಯಶ್ಚಿತ್ತಯಜ್ಞವಾಗಿ ಯೆಹೋವನಿಗೆ ಸಮರ್ಪಿಸಿ, ಅವನಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು.
23 “ ‘ನೀವು ಆ ದೇಶದಲ್ಲಿ ಸೇರಿದಾಗ ಆಹಾರಕ್ಕಾಗಿ ಯಾವ ಜಾತಿಯ ಹಣ್ಣಿನ ಸಸಿಯನ್ನು ನೆಟ್ಟರೂ, ಅದರ ಫಲವನ್ನು ಮೂರು ವರ್ಷದ ತನಕ ಅಶುದ್ಧವೆಂದೆಣಿಸಿ ತಿನ್ನದಿರಬೇಕು. 24 ನಾಲ್ಕನೆಯ ವರ್ಷದಲ್ಲಿ ಅದರ ಎಲ್ಲಾ ಹಣ್ಣುಗಳೂ ದೇವರದಾಗಿರಬೇಕು; ಅವುಗಳನ್ನು ಯೆಹೋವನಿಗೆ ಕೃತಜ್ಞತೆಯ ಕಾಣಿಕೆಯನ್ನಾಗಿ ಸಮರ್ಪಿಸಬೇಕು. 25 ಐದನೆಯ ವರ್ಷದಲ್ಲಿ ಅದರಿಂದ ಉಂಟಾಗುವ ಆದಾಯವು ನಿಮ್ಮದೇ ಆಗಿರುವುದು; ಅದರ ಫಲಗಳನ್ನು ನೀವು ತಿನ್ನಬಹುದು. ನಾನು ನಿಮ್ಮ ದೇವರಾದ ಯೆಹೋವನು.
26 “ ‘ರಕ್ತಸಹಿತವಾದ ಯಾವ ಮಾಂಸವನ್ನು ತಿನ್ನಬಾರದು.
“ ‘ಯಂತ್ರಮಂತ್ರಗಳನ್ನು ಮಾಡಬಾರದು, ಶಕುನಗಳನ್ನು ನೋಡಬಾರದು.
27 “ ‘ಚಂಡಿಕೆ ಬಿಡಬಾರದು ಹಾಗೂ ಗಡ್ಡವನ್ನು ವಿಕಾರಗೊಳಿಸಬಾರದು.
28 “ ‘ಸತ್ತವರಿಗೋಸ್ಕರ ದುಃಖವನ್ನು ಸೂಚಿಸುವುದಕ್ಕಾಗಿ ದೇಹವನ್ನು ಗಾಯಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಹಾಕಿಸಿಕೊಳ್ಳಬಾರದು. ನಾನು ಯೆಹೋವನು.
29 “ ‘ಮಗಳನ್ನು 19:29 ಕಾನಾನ್ಯರ ಧಾರ್ಮಿಕ ದೇವಾಲಯಗಳಲ್ಲಿ ವೇಶ್ಯೆಯರು ಇರುತ್ತಿದ್ದರು ಅಲ್ಲಿ ಫಲವತ್ತತೆಯ ದೇವಾನುದೇವತೆಗಳನ್ನು ಪೂಜಿಸಲಾಗುತ್ತಿತ್ತು. ಆರಾಧಕರು ತಮ್ಮ ಹೊಲಗಳು ಮತ್ತು ಹಿಂಡುಗಳು ಫಲವತ್ತಾಗಿರಲು ಅಲ್ಲಿನ ವೇಶ್ಯೆಯರೊಂದಿಗೆ ಸಂಭೋಗ ಮಾಡುತ್ತಿದ್ದರು. ವೇಶ್ಯೆಯನ್ನಾಗಿ ಮಾಡಬಾರದು. ಹಾಗೆ ಮಾಡಿದರೆ ವೇಶ್ಯಾವಾಟಿಕೆ ಪ್ರಬಲವಾಗಿ ದೇಶದಲ್ಲೆಲ್ಲಾ ತುಂಬಿಹೋಗುವುದು.
30 “ ‘ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ನೀವು ಆಚರಿಸಬೇಕು; ನನ್ನ ದೇವಸ್ಥಾನದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ಯೆಹೋವನು.
31 “ ‘ಸತ್ತವರಲ್ಲಿ ವಿಚಾರಿಸುವವರ ಮತ್ತು ಮಂತ್ರವಾದಿಗಳ ಹತ್ತಿರ ಹೋಗಬಾರದು; ಅವರ ಆಲೋಚನೆಯನ್ನು ಕೇಳಿ ಅಶುದ್ಧರಾಗಬಾರದು. ನಾನು ನಿಮ್ಮ ದೇವರಾದ ಯೆಹೋವನು.
32 “ ‘ವಯೋ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ನಾನು ಯೆಹೋವನು.
33 “ ‘ನಿಮ್ಮ ದೇಶದಲ್ಲಿ ವಾಸವಾಗಿರುವ ಪರದೇಶದವರಿಗೆ ಅನ್ಯಾಯವೇನೂ ಮಾಡಬಾರದು. 34 ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತ ದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು.
35 “ ‘ನ್ಯಾಯವಿಚಾರಣೆ, ತೂಕ, ಅಳತೆ ಮತ್ತು ಪರಿಮಾಣಗಳಲ್ಲಿ ನೀವು ನ್ಯಾಯವಿರುದ್ಧವಾಗಿ ನಡೆಯಬಾರದು. 36 ತಕ್ಕಡಿ, ತೂಕದ ಕಲ್ಲು, ಕೊಳಗ ಮತ್ತು ಸೇರು ಇವುಗಳೆಲ್ಲಾ ನ್ಯಾಯವಾಗಿಯೇ ಇರಬೇಕು. ನಾನು ನಿಮ್ಮನ್ನು ಐಗುಪ್ತದೇಶದಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ. 37 ಆದುದರಿಂದ ನನ್ನ ಆಜ್ಞಾವಿಧಿಗಳನ್ನೆಲ್ಲಾ ನೀವು ಅನುಸರಿಸಿ ನಡೆಯಬೇಕು. ನಾನು ಯೆಹೋವನು’ ” ಎಂದು ಹೇಳಿದನು.

*19:16 19:16 ನೆರೆಯವರಿಗೆ ಅಥವಾ ಇತರರಿಗೆ ಅಪಾಯವುಂಟಾಗುವಂಥದ್ದನ್ನು ಮಾಡಬೇಡಿರಿ.

19:29 19:29 ಕಾನಾನ್ಯರ ಧಾರ್ಮಿಕ ದೇವಾಲಯಗಳಲ್ಲಿ ವೇಶ್ಯೆಯರು ಇರುತ್ತಿದ್ದರು ಅಲ್ಲಿ ಫಲವತ್ತತೆಯ ದೇವಾನುದೇವತೆಗಳನ್ನು ಪೂಜಿಸಲಾಗುತ್ತಿತ್ತು. ಆರಾಧಕರು ತಮ್ಮ ಹೊಲಗಳು ಮತ್ತು ಹಿಂಡುಗಳು ಫಲವತ್ತಾಗಿರಲು ಅಲ್ಲಿನ ವೇಶ್ಯೆಯರೊಂದಿಗೆ ಸಂಭೋಗ ಮಾಡುತ್ತಿದ್ದರು.