16
ಅರಸನಾದ ಆಸನ ಅಂತ್ಯ
ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರಾಯೇಲರ ರಾಜನಾದ ಬಾಷನು ಯೆಹೂದ್ಯರಿಗೆ ವಿರುದ್ಧವಾಗಿ ಹೊರಟುಬಂದನು. ಯಾರೂ ಯೆಹೂದ್ಯರ, ಅರಸನಾದ ಆಸನ ಬಳಿಗೆ ಹೋಗಿ ಬರುವುದಕ್ಕಾಗದಂತೆ ರಾಮ ಕೋಟೆಯನ್ನು ಭದ್ರಪಡಿಸಿದನು. ಆಗ ಆಸನು ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಿಂದ ಬೆಳ್ಳಿ ಬಂಗಾರವನ್ನು ತೆಗೆದುಕೊಂಡು ದಮಸ್ಕದಲ್ಲಿದ್ದ ಅರಾಮ್ಯರ ಅರಸನಾದ ಬೆನ್ಹದದನಿಗೆ ಕಳುಹಿಸಿ ಅವನಿಗೆ, “ನನಗೂ ನಿನಗೂ, ನನ್ನ ತಂದೆಗೂ ನಿನ್ನ ತಂದೆಗೂ ಒಪ್ಪಂದ ಇದೆಯಲ್ಲಾ? ಇಗೋ, ನಿನಗೆ ಬೆಳ್ಳಿಬಂಗಾರವನ್ನು ಕಳುಹಿಸಿದ್ದೇನೆ: ಇಸ್ರಾಯೇಲರ ಅರಸನಾದ ಬಾಷನು ನನ್ನನ್ನು ಬಿಟ್ಟು ಹೋಗುವಂತೆ ಮಾಡು; ಅವನ ಸಂಗಡ ನೀನು ಮಾಡಿಕೊಂಡಿರುವ ಒಪ್ಪಂದವನ್ನು ಮುರಿದುಬಿಡು” ಎಂದು ಹೇಳಿ ಕಳುಹಿಸಿದನು. ಬೆನ್ಹದದನು ಅರಸನಾದ ಆಸನ ಮಾತನ್ನು ಕೇಳಿ, ತನ್ನ ಸೈನ್ಯಾಧಿಪತಿಗಳನ್ನು ಇಸ್ರಾಯೇಲ್ಯರ ಪಟ್ಟಣಗಳಿಗೆ ವಿರುದ್ಧವಾಗಿ ಕಳುಹಿಸಿದನು; ಅವರು ಇಯ್ಯೋನ್, ದಾನ್, ಆಬೇಲ್ಮಯಿಮ್, ಇವುಗಳನ್ನೂ ನಫ್ತಾಲ್ಯರ ಪಟ್ಟಣಗಳ ಎಲ್ಲಾ ಉಗ್ರಾಣಗಳನ್ನೂ ಹಾಳು ಮಾಡಿದರು. ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆ ಕಟ್ಟಿಸುವ ಕೆಲಸವನ್ನು ನಿಲ್ಲಿಸಿಬಿಟ್ಟನು. ಅನಂತರ ಅರಸನಾದ ಆಸನು ಎಲ್ಲಾ ಯೆಹೂದ್ಯರನ್ನು ಕರೆಯಿಸಿ ರಾಮ ಕೋಟೆಗಾಗಿ ಬಾಷನು ತರಿಸಿದ್ದ ಕಲ್ಲುಮರಗಳನ್ನು ಅವರ ಮುಖಾಂತರವಾಗಿ ತೆಗೆದುಕೊಂಡು ಹೋಗಿ ಗೆಬ, ಮಿಚ್ಪ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು. ಆ ಕಾಲದಲ್ಲಿ ದರ್ಶಕನಾದ ಹನಾನಿಯು ಯೆಹೂದ್ಯರ ಅರಸನಾದ ಆಸನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ದೇವರಾದ ಯೆಹೋವನನ್ನು ಆಶ್ರಯಿಸಿಕೊಳ್ಳದೆ ಅರಾಮ್ಯರ ಅರಸನನ್ನು ಆಶ್ರಯಿಸಿಕೊಂಡದ್ದರಿಂದ ಅರಾಮ್ ರಾಜನ ಸೈನ್ಯವು ನಿನ್ನ ಕೈಗೆ ಬೀಳದಂತೆ ತಪ್ಪಿಸಿಕೊಂಡಿತು. ಕೂಷ್ಯ ಹಾಗೂ ಲೂಬ್ಯರ ಸೈನ್ಯವು ಅಪರಿಮಿತ ರಥಾಶ್ವಬಲಗಳುಳ್ಳ ಮಹಾಸೈನ್ಯವಲ್ಲವೇ? ನೀನು ಯೆಹೋವನನ್ನು ಆಶ್ರಯಿಸಿಕೊಂಡದ್ದರಿಂದ ಆತನು ಅದನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟನು. ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಠಿಯನ್ನು ಹರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ. ನೀನು ಈ ಕಾರ್ಯದಲ್ಲಿ ಬುದ್ಧಿಹೀನನಾಗಿ ನಡೆದುಕೊಂಡಿರುವೆ; ಇನ್ನು ಮುಂದೆ ನಿನಗೆ ಯುದ್ಧಗಳು ಇದ್ದೇ ಇರುತ್ತವೆ” ಎಂದು ಹೇಳಿದನು. 10 ಆಸನು ಈ ಮಾತುಗಳಿಂದ ಬೇಸರಗೊಂಡು, ದರ್ಶಕನ ಮೇಲೆ ಕೋಪಗೊಂಡು, ಅವನನ್ನು ಸೆರೆಮನೆಯಲ್ಲಿಡಿಸಿ ಕೋಳ ಹಾಕಿಸಿದನು. ಇದಲ್ಲದೆ, ಜನರಲ್ಲಿ ಕೆಲವರನ್ನು ಪೀಡಿಸಿದನು. 11 ಆಸನ ಪೂರ್ವೋತ್ತರಚರಿತ್ರೆಗಳನ್ನು ಯೆಹೂದ ಮತ್ತು ಇಸ್ರಾಯೇಲ್ ರಾಜರ ಇತಿಹಾಸ ಗ್ರಂಥಗಳಲ್ಲಿ ಬರೆದಿರುತ್ತದೆ. 12 ಆಸನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ಬಹು ಕಠಿಣವಾದ ರೋಗ ತಗಲಿತು. ಈ ರೋಗದಲ್ಲೂ ಅವನು ಯೆಹೋವನ ಸಹಾಯವನ್ನು ಕೋರದೆ ವೈದ್ಯರ ಸಹಾಯವನ್ನೇ ಕೋರಿದನು. 13 ಆಸನು ತನ್ನ ಆಳ್ವಿಕೆಯ ನಲ್ವತ್ತೊಂದನೆಯ ವರ್ಷದಲ್ಲಿ ತೀರಿಕೊಂಡು ಪೂರ್ವಿಕರ ಬಳಿಗೆ ಸೇರಿದನು. 14 ಅವನ ಶರೀರವನ್ನು ವೈದ್ಯರ ಆಲೋಚನೆ ಮೇರೆಗೆ ಮಿಶ್ರಣ ಮಾಡಲ್ಪಟ್ಟ ತರತರಹದ ಸುಗಂಧದ್ರವ್ಯಗಳಿಂದ ತುಂಬಿರುವ ಹಾಸಿಗೆಯ ಮೇಲಿಟ್ಟು, ಅವನು ತನಗೋಸ್ಕರ ದಾವೀದನಗರದಲ್ಲಿ ತೆಗೆಸಿದ್ದ ಸಮಾಧಿಯಲ್ಲಿ ಇಟ್ಟರು. ಹೇರಳವಾಗಿ ಅವನಿಗೋಸ್ಕರ ಬಹಳಷ್ಟು ಧೂಪ ಹಾಕಿ ಸಂತಾಪ ಸೂಚಿಸಿದರು.