1 ಯೋಹಾನನು
ಗ್ರಂಥಕರ್ತೃತ್ವ
ಪತ್ರಿಕೆಯು ಗ್ರಂಥಕರ್ತನನ್ನು ಗುರುತಿಸುವುದಿಲ್ಲ, ಆದರೆ ಸಭೆಯ ಬಲವಾದ, ಸ್ಥಿರವಾದ ಮತ್ತು ಆದಿಕಾಲದ ಸಾಕ್ಷ್ಯವು ಇದು ಶಿಷ್ಯನು ಮತ್ತು ಅಪೊಸ್ತಲನು ಆದ ಯೋಹಾನನದು ಎಂದು ಹೇಳುತ್ತದೆ (ಲೂಕ 6:13,14). ಈ ಪತ್ರಿಕೆಗಳಲ್ಲಿ ಯೋಹಾನನ ಹೆಸರನ್ನು ಉಲ್ಲೇಖಿಸಲಾಗಿಲ್ಲವಾದರೂ, ಅವನನ್ನು ಗ್ರಂಥಕರ್ತನೆಂದು ಸೂಚಿಸುವ ಮೂರು ಬಲವಾದ ಸುಳಿವುಗಳಿವೆ. ಮೊದಲನೆಯದಾಗಿ, ಎರಡನೇ ಶತಮಾನದ ಆರಂಭಿಕ ಬರಹಗಾರರು ಅವನನ್ನು ಗ್ರಂಥಕರ್ತನೆಂದು ಸೂಚಿಸಿದರು. ಎರಡನೆಯದಾಗಿ, ಈ ಪತ್ರಿಕೆಯು ಯೋಹಾನನ ಸುವಾರ್ತೆಯಲ್ಲಿರುವ ಅದೇ ಪದಗಳನ್ನು ಮತ್ತು ಬರಹ ಶೈಲಿಯನ್ನು ಒಳಗೊಂಡಿದೆ. ಮೂರನೆಯದಾಗಿ, ಗ್ರಂಥಕರ್ತನು ತಾನು ಯೇಸುವಿನ ದೇಹವನ್ನು ಕಣ್ಣಾರೆ ಕಂಡವನು ಮತ್ತು ಕೈಯಾರೆ ಮುಟ್ಟಿದವನು ಎಂದು ಬರೆದಿದ್ದಾನೆ, ಅದು ಖಂಡಿತವಾಗಿಯೂ ಅಪೊಸ್ತಲನ ವಿಷಯದಲ್ಲಿ ಸತ್ಯವಾಗಿದೆ (1 ಯೋಹಾ 1:1-4; 4:14).
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 85-95 ರ ನಡುವೆ ಬರೆಯಲ್ಪಟ್ಟಿದೆ.
ಯೋಹಾನನು ತನ್ನ ಜೀವನದ ಅಂತಿಮ ಅವಧಿಯನ್ನು ಅಂದರೆ ತನ್ನ ವೃದ್ಧಾಪ್ಯವನ್ನು ಕಳೆಯುತ್ತಿದ್ದ ಎಫೆಸದಿಂದ ಈ ಪತ್ರಿಕೆಯನ್ನು ಬರೆದನು.
ಸ್ವೀಕೃತದಾರರು
1 ಯೋಹಾನ ಪತ್ರಿಕೆಯ ವಾಚಕರನ್ನು ಪತ್ರಿಕೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿಲ್ಲ. ಆದಾಗ್ಯೂ, ಯೋಹಾನನು ವಿಶ್ವಾಸಿಗಳಿಗೆ ಬರೆದಿರುವುದಾಗಿ ವಿಷಯಗಳು ಸೂಚಿಸುತ್ತವೆ (1 ಯೋಹಾ 1:3-4; 2:12-14). ಇದನ್ನು ಬೇರೆ ಬೇರೆ ಸ್ಥಳಗಳಲ್ಲಿದ್ದ ದೇವಜನರಿಗೆ ಬರೆದಿರುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಎಲ್ಲೆಡೆಯಿರುವ ಕ್ರೈಸ್ತರಿಗೆ, ಏಕೆಂದರೆ 2:1 ರಲ್ಲಿ “ನನ್ನ ಪ್ರಿಯಮಕ್ಕಳೇ” ಎಂದು ಬರೆಯಲಾಗಿದೆ.
ಉದ್ದೇಶ
ಅನ್ಯೋನ್ಯತೆಯನ್ನು ಉತ್ತೇಜಿಸುವುದಕ್ಕಾಗಿ, ನಾವು ಸಂತೋಷದಿಂದ ತುಂಬಿರಬೇಕೆಂದು, ಪಾಪದಿಂದ ದೂರವಿರಬೇಕೆಂದು, ರಕ್ಷಣೆಯ ಭರವಸೆಯನ್ನು ಕೊಡಲು, ವಿಶ್ವಾಸಿಗೆ ರಕ್ಷಣೆಯ ಪೂರ್ಣ ಭರವಸೆ ನೀಡಲು ಮತ್ತು ವಿಶ್ವಾಸಿಯನ್ನು ಕ್ರಿಸ್ತನೊಂದಿಗೆ ವೈಯಕ್ತಿಕ ಅನ್ಯೋನ್ಯತೆಗೆ ತರಲು ಯೋಹಾನನು ಬರೆದನು. ಸಭೆಯಿಂದ ಹೊರಟುಹೋಗಿರುವ ಮತ್ತು ಜನರನ್ನು ಸುವಾರ್ತೆಯ ಸತ್ಯದಿಂದ ದಾರಿತಪ್ಪಿಸಲು ಪ್ರಯತ್ನಿಸುತ್ತಿರುವ ಸುಳ್ಳು ಬೋಧಕರ ವಿಷಯದ ಬಗ್ಗೆ ಯೋಹಾನನು ನಿರ್ದಿಷ್ಟವಾಗಿ ಬರೆದನು.
ಮುಖ್ಯಾಂಶ
ದೇವರೊಂದಿಗಿನ ಅನ್ಯೋನ್ಯತೆ
ಪರಿವಿಡಿ
1. ನರಾವತಾರದ ವಾಸ್ತವಿಕತೆ — 1:1-4
2. ಅನ್ಯೋನ್ಯತೆ — 1:5-2:17
3. ವಂಚನೆಯ ಗುರುತಿಸುವಿಕೆ — 2:18-27
4. ಪ್ರಸ್ತುತದಲ್ಲಿ ಪರಿಶುದ್ಧರಾಗಿ ಜೀವಿಸುವುಕ್ಕಾಗಿ ಪ್ರೇರಣೆ — 2:28-3:10
5. ಪ್ರೀತಿಯು ಭರವಸೆಯ ಆಧಾರ — 3:11-24
6. ಸುಳ್ಳು ಆತ್ಮಗಳ ವಿವೇಚನೆ — 4:1-6
7. ಪವಿತ್ರೀಕರಣದ ಅತ್ಯಗತ್ಯತೆ — 4:7-5:21
1
ಸಜೀವ ವಾಕ್ಯ
1 ನಾವು ನಿಮಗೆ ಪ್ರಚುರಪಡಿಸುವ ಜೀವವಾಕ್ಯವು
*ಆದಿಯಿಂದ ಇದ್ದದ್ದು. ನಾವು ಅದನ್ನು
†ಕಿವಿಯಾರೆ ಕೇಳಿ,
‡ಕಣ್ಣಾರೆ ಕಂಡು,
§ಮನಸ್ಸಿಟ್ಟು ಗ್ರಹಿಸಿ
*ಕೈಯಿಂದ ಮುಟ್ಟಿದ್ದೂ ಆಗಿರುವಂತದ್ದು.
2 †ಆ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು
‡ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತಿದ್ದೇವೆ.
3 §ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಸೇರಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ.
*ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರುವಂಥದ್ದಾಗಿದೆ.
4 †ನಿಮ್ಮ ಸಂತೋಷವು ಪರಿಪೂರ್ಣವಾಗಬೇಕೆಂದು ನಾವು ಇವುಗಳನ್ನು ನಿಮಗೆ ಬರೆಯುತ್ತಿದ್ದೇವೆ.
ದೇವರಲ್ಲಿ ಕತ್ತಲೆಯಿಲ್ಲದ ಕಾರಣ ನಾವು ಪಾಪವನ್ನು ಮರೆಮಾಡದೆ ಅದನ್ನು ಒಪ್ಪಿಕೊಂಡು ಪಾಪಪರಿಹಾರವನ್ನು ಪಡೆಯಬೇಕು
5 ನಾವು ಆತನಿಂದ ಕೇಳಿ ನಿಮಗೆ ತಿಳಿಸುತ್ತಿರುವ ಸಂದೇಶ ಯಾವುದೆಂದರೆ;
‡ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಸ್ವಲ್ಪವೂ ಕತ್ತಲೆಯಿಲ್ಲ ಎಂಬುದೇ.
6 §ನಾವು ದೇವರೊಂದಿಗೆ ಅನ್ಯೋನ್ಯತೆಯುಳ್ಳವರಾಗಿದ್ದೇವೆಂದು ಹೇಳಿಕೊಳ್ಳುತ್ತಾ ಕತ್ತಲೆಯಲ್ಲಿ ನಡೆದರೆ ಸುಳ್ಳಾಡುವವರಾಗಿದ್ದೇವೆ,
*ಸತ್ಯವನ್ನನುಸರಿಸುತ್ತಿಲ್ಲ ಎಂದು ತಿಳಿದು ಬರುತ್ತದೆ.
7 ಆದರೆ
†ಆತನು ಬೆಳಕಿನಲ್ಲಿರುವಂತೆಯೇ
‡ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲ್ಲೊಬ್ಬರು ಅನ್ಯೋನ್ಯತೆಯಲ್ಲಿರುತ್ತೇವೆ.
§ಆತನ ಒಬ್ಬನೇ ಕುಮಾರನಾದ ಯೇಸುವಿನ ರಕ್ತವು ನಮ್ಮನ್ನು ಸಕಲ ಪಾಪದಿಂದ ಬಿಡಿಸಿ ಶುದ್ಧೀಕರಿಸುತ್ತದೆ.
8 *ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಗೊಳಿಸಿಕೊಂಡ ಹಾಗಾಯಿತು ಮತ್ತು
†ಸತ್ಯವೆಂಬುದು ನಮ್ಮಲ್ಲಿಲ್ಲವೆಂದು ತಿಳಿಯುತ್ತದೆ.
9 ನಾವು
‡ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ
§ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ
*ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವನು.
10 ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ
†ಆತನನ್ನು ಸುಳ್ಳುಗಾರನನ್ನಾಗಿ ಮಾಡಿದಂತಾಗುತ್ತದೆ ಮತ್ತು
‡ಆತನ ವಾಕ್ಯವು ನಮ್ಮಲ್ಲಿ ನೆಲೆಗೊಂಡಿರುವುದಿಲ್ಲ.