ಲೂಕನ
ಸುವಾರ್ತೆ
1
ಯೇಸುವಿನ ಜೀವನದ ಬಗ್ಗೆ ಲೂಕನ ಬರಹ
1 ಸನ್ಮಾನ್ಯ ಥೆಯೊಫಿಲನೇ,
ನಮ್ಮ ಮಧ್ಯದಲ್ಲಿ ಸಂಭವಿಸಿದ ಸಂಗತಿಗಳ ಚರಿತ್ರೆಯನ್ನು ತಿಳಿಸುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ. 2 ಪ್ರಾರಂಭದಿಂದಲೂ ಆ ಸಂಗತಿಗಳನ್ನು ಕಣ್ಣಾರೆ ಕಂಡು ದೇವರ ಸಂದೇಶವನ್ನು ಸಾರಿದವರಿಂದ ನಾವು ಕೇಳಿದ ಸಂಗತಿಗಳನ್ನೇ ಅವರು ಬರೆದಿದ್ದಾರೆ. 3 ಪ್ರತಿಯೊಂದು ಸಂಗತಿಯನ್ನು ಪ್ರಾರಂಭದಿಂದ ನಾನೇ ಶ್ರದ್ಧೆವಹಿಸಿ ಅಧ್ಯಯನ ಮಾಡಿರುವುದರಿಂದ ಅವೆಲ್ಲವನ್ನೂ ನಿನಗೆ ಕ್ರಮಬದ್ಧವಾಗಿ ತಿಳಿಸಲು ಪುಸ್ತಕ ರೂಪದಲ್ಲಿ ಬರೆದಿದ್ದೇನೆ. 4 ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನಿನಗೆ ಸ್ಪಷ್ಟವಾಗಿರುವುದು.
ಜಕರೀಯ ಮತ್ತು ಎಲಿಜಬೇತ್
5 ಹೆರೋದನು* ಹೆರೋದ ಜುದೇಯವನ್ನು ಆಳಿದ 1ನೇ ಹೆರೋದನು ಕ್ರಿ.ಪೂ. 40-4. ಜುದೇಯವನ್ನು ಆಳುತ್ತಿದ್ದ ಕಾಲದಲ್ಲಿ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಜಕರೀಯನು ಅಬೀಯನ ವರ್ಗಕ್ಕೆ† ಅಬೀಯನ ವರ್ಗ ಯೆಹೂದ್ಯಯಾಜಕರು 24 ವರ್ಗಗಳಾಗಿ ವಿಂಗಡಿಸಲ್ಪಟ್ಟಿದ್ದರು. ನೋಡಿರಿ: 1 ಪೂ.ಕಾ.ವೃ. 24. ಸೇರಿದವನು. ಜಕರೀಯನ ಹೆಂಡತಿ ಆರೋನನ ಕುಟುಂಬದವಳು. ಆಕೆಯ ಹೆಸರು ಎಲಿಜಬೇತ್. 6 ಜಕರೀಯನು ಮತ್ತು ಎಲಿಜಬೇತಳು ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗಿದ್ದರು. ಪ್ರಭುವಿನ (ದೇವರ) ಆಜ್ಞೆಗಳನ್ನೆಲ್ಲಾ ಕೈಕೊಂಡು ನಡೆಯುತ್ತಿದ್ದ ಅವರು, ಅದೇರೀತಿ ಬಾಳಲು ಇತರರಿಗೂ ಉಪದೇಶಿಸುತ್ತಿದ್ದರು. ಅವರು ತಪ್ಪಿಲ್ಲದವರಾಗಿದ್ದರು. 7 ಅವರಿಗೆ ಮಕ್ಕಳಿರಲಿಲ್ಲ. ಎಲಿಜಬೇತಳು ಬಂಜೆಯಾಗಿದ್ದಳು; ಮತ್ತು ಅವರಿಬ್ಬರೂ ಬಹಳ ಮುಪ್ಪಿನವರಾಗಿದ್ದರು.
8 ಒಮ್ಮೆ ತನ್ನ ವರ್ಗದ ಸರದಿ ಬಂದಾಗ, ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕಸೇವೆ ಸಲ್ಲಿಸುತ್ತಿದ್ದನು. 9 ಯಾಜಕರು ಧೂಪವನು ಅರ್ಪಿಸುವುದಕ್ಕಾಗಿ ತಮ್ಮ ಸಂಪ್ರದಾಯದ ಪ್ರಕಾರ ಚೀಟಿಹಾಕಿ ಒಬ್ಬ ಯಾಜಕನನ್ನು ಆರಿಸುತ್ತಿದ್ದರು. ಈ ಸಲ ಅದು ಜಕರೀಯನ ಪಾಲಿಗೆ ಬಂದಿತು. ಆದ್ದರಿಂದ ಜಕರೀಯನು ಧೂಪ ಅರ್ಪಿಸುವುದಕ್ಕಾಗಿ ಪ್ರಭುವಿನ ಆಲಯದೊಳಗೆ ಹೋದನು. 10 ಹೊರಗಡೆ ಬಹು ಜನರಿದ್ದರು. ಧೂಪವನ್ನರ್ಪಿಸುತ್ತಿದ್ದ ಸಮಯದಲ್ಲಿ ಅವರು ಪ್ರಾರ್ಥಿಸುತ್ತಿದ್ದರು.
11 ಆಗ, ಧೂಪಪೀಠದ ಬಲಗಡೆಯಲ್ಲಿ, ಪ್ರಭುವಿನ ದೂತನೊಬ್ಬನು ಬಂದು ಜಕರೀಯನ ಮುಂದೆ ನಿಂತನು. 12 ಅವನು ದೇವದೂತನನ್ನು ನೋಡಿ ಗಲಿಬಿಲಿಗೊಂಡು ಬಹು ಭಯಪಟ್ಟನು. 13 ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹೆಂಡತಿಯಾದ ಎಲಿಜಬೇತಳು ಒಂದು ಗಂಡುಮಗುವನ್ನು ಹೆರುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು. 14 ಅವನ ಜನನದಿಂದ ನಿಮಗೆ ಹರ್ಷಾನಂದವಾಗುವುದು. ಬಹುಜನರು ಸಂತೋಷಪಡುವರು. 15 ಪ್ರಭುವಿನ ದೃಷ್ಟಿಯಲ್ಲಿ ಯೋಹಾನನು ಮಹಾಪುರುಷನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯುವುದಿಲ್ಲ. ಯೋಹಾನನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.‡ ಪವಿತ್ರಾತ್ಮ ದೇವರ ಆತ್ಮನೆಂತಲೂ ಕ್ರಿಸ್ತನ ಆತ್ಮನೆಂತಲೂ ಸಂತೈಸುವವನೆಂತಲೂ ಕರೆಯಲ್ಪಟ್ಟಿದ್ದಾನೆ. ಆತನು ದೇವರೊಂದಿಗೆ ಮತ್ತು ಕ್ರಿಸ್ತನೊಂದಿಗೆ ಸೇರಿ, ಲೋಕದ ಜನರ ಮಧ್ಯದಲ್ಲಿ ದೇವರ ಕಾರ್ಯವನ್ನು ಮಾಡುತ್ತಾನೆ.
16 “ಅನೇಕ ಯೆಹೂದ್ಯರು ತಮ್ಮ ದೇವರಾದ ಪ್ರಭುವಿನ ಕಡೆಗೆ ತಿರುಗಿಕೊಳ್ಳಲು ಅವನು ಸಹಾಯ ಮಾಡುವನು. 17 ಅವನು ಪ್ರಭುವಿಗೆ ಮುಂದೂತನಾಗಿ ಹೋಗುವನು. ಅವನು ಎಲೀಯನ§ ಎಲೀಯ ಸುಮಾರು ಕ್ರಿ.ಪೂ. 850ರಲ್ಲಿ ಜೀವಿಸಿದ್ದ ಪ್ರವಾದಿ. ಗುಣಶಕ್ತಿಗಳಿಂದ ಕೂಡಿದವನಾಗಿರುವನು; ತಂದೆ ಮತ್ತು ಮಕ್ಕಳ ನಡುವೆ ಸಮಾಧಾನವನ್ನು ಉಂಟುಮಾಡುವನು; ಅವಿಧೇಯರಾದ ಅನೇಕರನ್ನು ನೀತಿವಂತರ ಜ್ಞಾನದ ಕಡೆಗೆ ನಡೆಸುವನು; ಜನರನ್ನು ಪ್ರಭುವಿನ ಆಗಮನಕ್ಕೆ ಸಿದ್ಧಪಡಿಸುವನು” ಎಂದು ಹೇಳಿದನು.
18 ಜಕರೀಯನು ದೇವದೂತನಿಗೆ, “ನೀನು ಹೇಳುತ್ತಿರುವುದು ಸತ್ಯವೆಂಬುದಕ್ಕೆ ಆಧಾರವೇನು? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಸಹ ಮುಪ್ಪಿನವಳಾಗಿದ್ದಾಳೆ” ಎಂದು ಹೇಳಿದನು.
19 ದೇವದೂತನು, “ನನ್ನ ಹೆಸರು ಗಬ್ರಿಯೇಲ. ನಾನು ದೇವರ ಸನ್ನಿಧಿಯಲ್ಲಿ ನಿಂತುಕೊಂಡಿರುವವನು. ನಿನಗೆ ಈ ಶುಭಸಮಾಚಾರವನ್ನು ತಿಳಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ. 20 ಈಗ ಕೇಳು! ಈ ಸಂಗತಿಗಳು ನೆರವೇರುವ ತನಕ ನೀನು ಮೂಕನಾಗಿರುವೆ. ಏಕೆಂದರೆ ನೀನು ನನ್ನ ಮಾತನ್ನು ನಂಬಲಿಲ್ಲ. ಆದರೆ ನಾನು ಹೇಳಿದ ಈ ಸಂಗತಿಗಳು ಖಂಡಿತವಾಗಿ ನೆರವೇರುತ್ತವೆ” ಎಂದು ಹೇಳಿದನು.
21 ಜನರು ಜಕರೀಯನಿಗಾಗಿ ಎದುರುನೋಡುತ್ತಾ ದೇವಾಲಯದೊಳಗೆ ಅವನು ಇಷ್ಟುಹೊತ್ತು ಇರಲು ಕಾರಣವೇನಿರಬಹುದೆಂದು ಆಶ್ಚರ್ಯಚಕಿತರಾದರು. 22 ಬಳಿಕ ಜಕರೀಯನು ಹೊರಗೆ ಬಂದಾಗ, ಅವನಿಗೆ ಅವರೊಡನೆ ಮಾತಾಡಲಾಗಲಿಲ್ಲ. ಆದ್ದರಿಂದ ಅವನಿಗೆ ದೇವಾಲಯದಲ್ಲಿ ದರ್ಶನವಾಗಿರಬೇಕೆಂದು ಅವರು ತಿಳಿದುಕೊಂಡರು. ಅಂದಿನಿಂದ ಅವನು ಮಾತಾಡಲಾಗದೆ ಕೇವಲ ಸನ್ನೆಗಳ ಮೂಲಕ ತಿಳಿಸುತ್ತಿದ್ದನು. 23 ತನ್ನ ಯಾಜಕಸೇವೆಯ ಸರದಿಯು ಮುಗಿದ ಮೇಲೆ ಜಕರೀಯನು ಮನೆಗೆ ಹಿಂತಿರುಗಿ ಹೋದನು.
24 ಆ ಬಳಿಕ, ಜಕರೀಯನ ಹೆಂಡತಿಯಾದ ಎಲಿಜಬೇತಳು ಗರ್ಭಿಣಿಯಾದಳು. ಆದ್ದರಿಂದ ಆಕೆ ಐದು ತಿಂಗಳವರೆಗೆ ತನ್ನ ಮನೆಯಿಂದ ಹೊರಗೆ ಹೋಗಲಿಲ್ಲ. 25 ಎಲಿಜಬೇತಳು, “ನೋಡಿ, ಪ್ರಭುವು ನನಗೋಸ್ಕರ ಎಂಥಾ ಕಾರ್ಯಮಾಡಿದ್ದಾನೆ! ನನ್ನ ಜನರ ನಡುವೆ ನನಗಿದ್ದ ಅವಮಾನವನ್ನು ಪ್ರಭುವು ತೊಲಗಿಸಿದ್ದಾನೆ” ಎಂದು ಹೇಳಿದಳು.
ಕನ್ಯೆ ಮರಿಯಳು
26-27 ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನನ್ನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು. ಆಕೆಗೆ ದಾವೀದನ ಮನೆತನದ ಯೋಸೇಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು. 28 ದೇವದೂತನು ಆಕೆಯ ಬಳಿಗೆ ಬಂದು, “ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ! ಪ್ರಭುವು ನಿನ್ನೊಡನೆ ಇದ್ದಾನೆ” ಎಂದು ಹೇಳಿದನು.
29 ದೇವದೂತನ ಮಾತನ್ನು ಕೇಳಿ ಬಹು ಗಲಿಬಿಲಿಗೊಂಡ ಮರಿಯಳು, “ಇದರ ಅರ್ಥವೇನಿರಬಹುದು?” ಎಂದು ಆಶ್ಚರ್ಯಪಟ್ಟಳು.
30 ದೇವದೂತನು ಆಕೆಗೆ, “ಮರಿಯಳೇ, ಭಯಪಡಬೇಡ. ದೇವರು ನಿನ್ನನ್ನು ಬಹಳವಾಗಿ ಆಶೀರ್ವದಿಸಿದ್ದಾನೆ. 31 ಕೇಳು! ನೀನು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವೆ. ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. 32 ಆತನು ಮಹಾಪುರುಷನಾಗುವನು. ಜನರು ಆತನನ್ನು ಮಹೋನ್ನತನ (ದೇವರ) ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು. 33 ಯೇಸುವು ಯಾಕೋಬನ ಜನರನ್ನು ಸದಾಕಾಲ ಆಳುವನು. ಆತನ ರಾಜ್ಯ ಎಂದಿಗೂ ಅಂತ್ಯವಾಗುವುದಿಲ್ಲ” ಎಂದು ಹೇಳಿದನು.
34 ಮರಿಯಳು ದೇವದೂತನಿಗೆ, “ಇದು ಹೇಗೆ ಸಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲಾ!” ಎಂದು ಹೇಳಿದಳು.
35 ದೇವದೂತನು ಮರಿಯಳಿಗೆ, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರಮಗುವು ‘ದೇವರ ಮಗ’ ಎನಿಸಿಕೊಳ್ಳುವನು. 36 ಇದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ. ಆಕೆಯು ಬಹಳ ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು. ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. 37 ದೇವರಿಗೆ ಯಾವುದೂ ಅಸಾಧ್ಯವಲ್ಲ,” ಎಂದು ಹೇಳಿದನು.
38 ಮರಿಯಳು, “ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!” ಅಂದಳು. ಬಳಿಕ ದೇವದೂತನು ಹೊರಟುಹೋದನು.
ಮರಿಯಳು ನೀಡಿದ ಸಂದರ್ಶನ
39 ಆಗ ಮರಿಯಳು ಎದ್ದು ಜುದೇಯದ ಗುಡ್ಡಪ್ರದೇಶದಲ್ಲಿರುವ ಒಂದು ಊರಿಗೆ ಬೇಗಬೇಗನೆ ಹೋದಳು. 40 ಅಲ್ಲಿ ಜಕರೀಯನ ಮನೆಯೊಳಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. 41 ಎಲಿಜಬೇತಳು ಮರಿಯಳ ವಂದನೆಯನ್ನು ಕೇಳಿದಾಗ, ಆಕೆಯ ಗರ್ಭದಲ್ಲಿದ್ದ ಮಗು ನಲಿದಾಡಿತು. ಆಗ ಎಲಿಜಬೇತಳು ಪವಿತ್ರಾತ್ಮಭರಿತಳಾಗಿ
42 ಹರ್ಷೋದ್ಗಾರದಿಂದ ಹೀಗೆಂದಳು: “ದೇವರು ನಿನ್ನನ್ನು (ಮರಿಯ) ಬೇರೆಲ್ಲಾ ಸ್ತ್ರೀಯರಿಗಿಂತ ಹೆಚ್ಚಾಗಿ ಆಶೀರ್ವದಿಸಿದ್ದಾನೆ. ನಿನ್ನಲ್ಲಿ ಜನಿಸಲಿರುವ ಮಗುವನ್ನು ದೇವರು ಆಶೀರ್ವದಿಸಿದ್ದಾನೆ. 43 ನನ್ನ ಪ್ರಭುವಿನ ತಾಯಿಯಾದ ನೀನೇ ನನ್ನ ಬಳಿಗೆ ಬಂದದ್ದು ನನಗೆಷ್ಟೋ ಭಾಗ್ಯ! 44 ನಿನ್ನ ಧ್ವನಿಯನ್ನು ಕೇಳಿದಾಗ, ನನ್ನೊಳಗಿರುವ ಕೂಸು ಸಂತೋಷದಿಂದ ನಲಿದಾಡಿತು. 45 ಪ್ರಭುವು ನಿನಗೆ ಹೇಳಿದ್ದು ಸಂಭವಿಸೇ ತೀರುವುದೆಂದು ನೀನು ನಂಬಿ ಧನ್ಯಳಾದೆ” ಎಂದಳು.
ಮರಿಯಳು ದೇವರನ್ನು ಸ್ತುತಿಸಿದಳು
46 ಆಗ ಮರಿಯಳು,
47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.
56 ಮರಿಯಳು ಸುಮಾರು ಮೂರು ತಿಂಗಳ ಕಾಲ ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂತಿರುಗಿದಳು.
ಯೋಹಾನನ ಜನನ
57 ಎಲಿಜಬೇತಳಿಗೆ ಹೆರಿಗೆ ಕಾಲ ಬಂದಿತು. ಆಕೆಯಲ್ಲಿ ಒಬ್ಬ ಮಗನು ಹುಟ್ಟಿದನು. 58 ಪ್ರಭುವು ಆಕೆಗೆ ತೋರಿದ ಮಹಾಕರುಣೆಯು ಆಕೆಯ ನೆರೆಹೊರೆಯವರಿಗೆ ಮತ್ತು ಬಂಧುಗಳಿಗೆ ತಿಳಿಯಿತು. ಅವರು ಆಕೆಯ ವಿಷಯದಲ್ಲಿ ಸಂತೋಷಪಟ್ಟರು.
59 ಮಗುವಿಗೆ ಎಂಟು ದಿನವಾದಾಗ ಅವರು ಸುನ್ನತಿ ಮಾಡಿಸುವುದಕ್ಕಾಗಿ ಬಂದರು. ಅವರು ಆ ಮಗುವಿಗೆ “ಜಕರೀಯ” ಎಂಬ ಹೆಸರು ಇಡಬೇಕೆಂದಿದ್ದರು. ಏಕೆಂದರೆ ಅದು ಮಗುವಿನ ತಂದೆಯ ಹೆಸರಾಗಿತ್ತು. 60 ಆದರೆ ಮಗುವಿನ ತಾಯಿ, “ಇಲ್ಲ! ಆತನಿಗೆ ‘ಯೋಹಾನ’ ಎಂಬ ಹೆಸರಿಡಬೇಕು” ಎಂದು ಹೇಳಿದಳು.
61 ಜನರು ಎಲಿಜಬೇತಳಿಗೆ, “ನಿನ್ನ ಕುಟುಂಬದಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ!” ಎಂದು ಹೇಳಿದರು. 62 ಬಳಿಕ ಅವರು ಅವನ ತಂದೆಗೆ ಸನ್ನೆಮಾಡಿ, “ಆತನಿಗೆ ಯಾವ ಹೆಸರಿಡಬೇಕು?” ಎಂದು ಕೇಳಿದರು.
63 ಆಗ ಜಕರೀಯನು ಸನ್ನೆಮಾಡಿ, ಒಂದು ಹಲಗೆಯನ್ನು ತರಿಸಿಕೊಂಡು, “ಈತನ ಹೆಸರು ಯೋಹಾನ” ಎಂದು ಬರೆದನು. ಜನರೆಲ್ಲರಿಗೂ ಆಶ್ಚರ್ಯವಾಯಿತು. 64 ಆ ಕೂಡಲೇ ಜಕರೀಯನು ಮತ್ತೆ ಮಾತಾಡಬಲ್ಲವನಾಗಿ ದೇವರನ್ನು ಸ್ತುತಿಸತೊಡಗಿದನು. 65 ಇದನ್ನು ಕೇಳಿ ನೆರೆಹೊರೆಯವರಿಗೆಲ್ಲಾ ಭಯವಾಯಿತು. ಜುದೇಯದ ಗುಡ್ಡಪ್ರದೇಶದಲ್ಲೆಲ್ಲಾ ಈ ಸಂಗತಿಗಳ ಬಗ್ಗೆ ಜನರು ಮಾತನಾಡತೊಡಗಿದರು. 66 ಈ ಸಂಗತಿಗಳನ್ನು ಕೇಳಿದ ಜನರೆಲ್ಲರು ಆಶ್ಚರ್ಯಪಟ್ಟು “ಈ ಮಗು (ಯೋಹಾನ) ಬೆಳೆದು ದೊಡ್ಡವನಾದ ಮೇಲೆ ಎಂಥ ವ್ಯಕ್ತಿಯಾಗುವನೋ?” ಎಂದು ಯೋಚಿಸತೊಡಗಿದರು. ಏಕೆಂದರೆ ಪ್ರಭುವು ಈ ಮಗುವಿನ ಸಂಗಡವಿದ್ದನು.
ಜಕರೀಯನ ಪ್ರವಾದನೆ
67 ಬಳಿಕ ಯೋಹಾನನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:
68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.
76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.
78 “ನಮ್ಮ ದೇವರ ಮಹಾಕರುಣೆಯಿಂದ
ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”
80 ಆ ಮಗುವು (ಯೋಹಾನನು) ಬೆಳೆದು ದೊಡ್ಡವನಾಗಿ ಆತ್ಮದಲ್ಲಿ ಬಲವುಳ್ಳವನಾದನು. ಇಸ್ರೇಲರಿಗೆ ತನ್ನ ಉಪದೇಶವನ್ನು ಆರಂಭಿಸುವ ತನಕ ಯೋಹಾನನು ಅಡವಿಯಲ್ಲಿ ವಾಸವಾಗಿದ್ದನು.
*1:5: ಹೆರೋದ ಜುದೇಯವನ್ನು ಆಳಿದ 1ನೇ ಹೆರೋದನು ಕ್ರಿ.ಪೂ. 40-4.
†1:5: ಅಬೀಯನ ವರ್ಗ ಯೆಹೂದ್ಯಯಾಜಕರು 24 ವರ್ಗಗಳಾಗಿ ವಿಂಗಡಿಸಲ್ಪಟ್ಟಿದ್ದರು. ನೋಡಿರಿ: 1 ಪೂ.ಕಾ.ವೃ. 24.
‡1:15: ಪವಿತ್ರಾತ್ಮ ದೇವರ ಆತ್ಮನೆಂತಲೂ ಕ್ರಿಸ್ತನ ಆತ್ಮನೆಂತಲೂ ಸಂತೈಸುವವನೆಂತಲೂ ಕರೆಯಲ್ಪಟ್ಟಿದ್ದಾನೆ. ಆತನು ದೇವರೊಂದಿಗೆ ಮತ್ತು ಕ್ರಿಸ್ತನೊಂದಿಗೆ ಸೇರಿ, ಲೋಕದ ಜನರ ಮಧ್ಯದಲ್ಲಿ ದೇವರ ಕಾರ್ಯವನ್ನು ಮಾಡುತ್ತಾನೆ.
§1:17: ಎಲೀಯ ಸುಮಾರು ಕ್ರಿ.ಪೂ. 850ರಲ್ಲಿ ಜೀವಿಸಿದ್ದ ಪ್ರವಾದಿ.