ಸೊಲೊಮೋನನ ಜ್ಞಾನೋಕ್ತಿಗಳು
10
ಸೊಲೊಮೋನನ ಜ್ಞಾನೋಕ್ತಿಗಳು:
ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನು ಉಂಟುಮಾಡುತ್ತಾನೆ.
ಅಜ್ಞಾನಿಯಾದ ಮಗನಾದರೋ ತನ್ನ ತಾಯಿಗೆ ಶೋಕವನ್ನುಂಟು ಮಾಡುತ್ತಾನೆ.
 
ಅನ್ಯಾಯದ ಸಂಪತ್ತುಗಳು ಶಾಶ್ವತವಲ್ಲ,
ಆದರೆ ನೀತಿಯು ಮರಣದಿಂದ ಬಿಡಿಸುತ್ತದೆ.
 
ನೀತಿವಂತನನ್ನು ಹಸಿವೆಯಿಂದ ಬಳಲುವಂತೆ ಯೆಹೋವ ದೇವರು ಬಿಡುವುದಿಲ್ಲ;
ಆದರೆ ದುಷ್ಟರ ಆಶೆಯನ್ನು ಅವರು ಭಂಗಪಡಿಸುತ್ತಾರೆ.
 
ಆಲಸ್ಯದ ಕೈ ದರಿದ್ರನನ್ನಾಗಿ ಮಾಡುವದು;
ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ.
 
ಬೇಸಿಗೆಯಲ್ಲಿ ಫಸಲನ್ನು ಕೂಡಿಸುವವರು ಬುದ್ಧಿವಂತ ಮಕ್ಕಳು,
ಸುಗ್ಗಿಯಲ್ಲಿ ನಿದ್ರೆ ಮಾಡುವವರು ನಾಚಿಕೆಗೆಟ್ಟ ಮಕ್ಕಳು.
 
ನೀತಿವಂತರ ತಲೆಯ ಮೇಲೆ ಆಶೀರ್ವಾದವಿದೆ;
ಆದರೆ ದುಷ್ಟರ ಬಾಯಲ್ಲಿ ಕ್ರೌರ್ಯ ಅಡಗಿದೆ.
 
ನೀತಿವಂತರ ಸ್ಮರಣೆಯು ಆಶೀರ್ವಾದಕ್ಕೆ ಆಸ್ಪದ;
ಆದರೆ ದುಷ್ಟನ ಹೆಸರು ಕೊಳೆಯುವುದು.* 10:7 ಆದಿ 48:20
 
ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು;
ಆದರೆ ಹರಟೆಯ ಮೂರ್ಖನು ಬೀಳುವನು.
 
ಯಥಾರ್ಥ ನಡತೆಯವರು ಸುರಕ್ಷಿತವಾಗಿ ಜೀವಿಸುತ್ತಾರೆ;
ಆದರೆ ವಕ್ರಮಾರ್ಗಗಳಲ್ಲಿ ನಡೆಯುವವನು ಬಯಲಿಗೆ ಬರುವನು.
 
10 ದುರುದ್ದೇಶದಿಂದ ಕಣ್ಣು ಮಿಟಕಿಸುವವನು ದುಃಖವನ್ನು ಉಂಟುಮಾಡುತ್ತಾನೆ,
ಆದರೆ ಹರಟೆಯ ಮೂರ್ಖನು ಬೀಳುವನು.
 
11 ನೀತಿವಂತನ ಬಾಯಿಯು ಜೀವದ ಬುಗ್ಗೆ;
ಆದರೆ ದುಷ್ಟನ ಬಾಯಿ ಹಿಂಸೆಯನ್ನು ಮರೆಮಾಡುತ್ತದೆ.
 
12 ದ್ವೇಷವು ಜಗಳಗಳನ್ನು ಎಬ್ಬಿಸುತ್ತದೆ;
ಆದರೆ ಪ್ರೀತಿಯು ಎಲ್ಲಾ ಪಾಪಗಳನ್ನು ಮುಚ್ಚುತ್ತದೆ.
 
13 ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕುತ್ತದೆ;
ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ.
 
14 ಜ್ಞಾನಿಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ;
ಆದರೆ ಮೂರ್ಖನ ಬಾಯಿ ವಿನಾಶವನ್ನು ಆಹ್ವಾನಿಸುತ್ತದೆ.
 
15 ಐಶ್ವರ್ಯವಂತರಿಗೆ ಸಂಪತ್ತೇ ಅವರ ಬಲವಾದ ಕೋಟೆ;
ಆದರೆ, ಬಡತನವೇ ಬಡವರ ನಾಶನಕ್ಕೆ ಕಾರಣ.
 
16 ನೀತಿವಂತರ ದುಡಿತವು ಜೀವವಾಗುವುದು;
ಆದರೆ, ದುಷ್ಟರ ಆದಾಯವು ಪಾಪ ಹಾಗು ಮರಣ.
 
17 ಶಿಸ್ತನ್ನು ಕೈಗೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು;
ಆದರೆ ತಿದ್ದುಪಾಟನ್ನು ತಿರಸ್ಕರಿಸುವವನು ಇತರರ ದಾರಿತಪ್ಪಿಸುವನು.
 
18 ದ್ವೇಷವನ್ನು ಮರೆಮಾಚುವವನು ಸುಳ್ಳುಗಾರ
ಮತ್ತು ಚಾಡಿ ಹೇಳುವವನು ಮೂರ್ಖನು.
 
19 ಅತಿಯಾದ ಮಾತುಗಳಿಂದ ಪಾಪವು ಕೊನೆಗೊಳ್ಳುವುದಿಲ್ಲ.
ಆದರೆ ಜ್ಞಾನವಂತನು ತನ್ನ ನಾಲಿಗೆಯನ್ನು ತಡೆಯುವನು.
 
20 ನೀತಿವಂತರ ನಾಲಿಗೆಯು ಚೊಕ್ಕಬೆಳ್ಳಿಯಂತಿದೆ;
ದುಷ್ಟರ ಹೃದಯವು ಬೆಲೆಯಿಲ್ಲದ್ದು.
 
21 ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ,
ಜ್ಞಾನದ ಕೊರತೆಯಿಂದ ಬುದ್ಧಿಹೀನರು ಸಾಯುತ್ತಾರೆ.
 
22 ಯೆಹೋವ ದೇವರ ಆಶೀರ್ವಾದವು ಸಂಪತ್ತನ್ನು ಉಂಟುಮಾಡುವುದು;
ಅವರು ಅದರೊಂದಿಗೆ ಯಾವ ದುಃಖವನ್ನೂ ಸೇರಿಸುವುದಿಲ್ಲ.
 
23 ಮೂರ್ಖನಿಗೆ ಕೇಡು ಮಾಡುವುದರಲ್ಲಿ ಆನಂದ;
ಆದರೆ ತಿಳುವಳಿಕೆಯ ವ್ಯಕ್ತಿಯು ಜ್ಞಾನದಲ್ಲಿ ಸಂತೋಷಪಡುತ್ತಾನೆ.
 
24 ದುಷ್ಟನ ಭೀತಿಯೇ ಅವನನ್ನು ಹಿಂದಿಕ್ಕುವುದು;
ಆದರೆ ನೀತಿವಂತರ ಇಷ್ಟವು ಸಫಲವಾಗುವುದು.
 
25 ಬಿರುಗಾಳಿಯು ಬೀಸಿದರೆ, ದುಷ್ಟರು ಇಲ್ಲವಾಗುವರು;
ಆದರೆ ನೀತಿವಂತರು ಶಾಶ್ವತವಾಗಿ ನಿಲ್ಲುವರು.
 
26 ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ,
ಯಜಮಾನನಿಗೆ ಸೋಮಾರಿಯು ಹಾಗೆಯೇ ಇರುವನು.
 
27 ಯೆಹೋವ ದೇವರ ಭಯವು ಜೀವನದ ದಿನಗಳನ್ನು ಹೆಚ್ಚಿಸುತ್ತದೆ;
ದುಷ್ಟರ ವರ್ಷಗಳು ಕಡಿಮೆ ಆಗುವವು.
 
28 ನೀತಿವಂತರ ನಿರೀಕ್ಷೆಯು ಆನಂದಕರವಾಗಿರುವುದು;
ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವುದು.
 
29 ಯೆಹೋವ ದೇವರ ಮಾರ್ಗವು ನಿರ್ದೋಷಿಗಳಿಗೆ ಆಶ್ರಯವಾಗಿದೆ;
ಆದರೆ ಕೇಡು ಮಾಡುವವರಿಗೆ ಅದು ವಿನಾಶಕರವಾಗಿದೆ.
 
30 ನೀತಿವಂತರು ಎಂದಿಗೂ ಕದಲುವುದೇ ಇಲ್ಲ;
ಆದರೆ ದುಷ್ಟರು ಭೂಮಿಯಲ್ಲಿ ನಿಲ್ಲುವುದಿಲ್ಲ.
 
31 ನೀತಿವಂತರ ಬಾಯಲ್ಲಿ ಜ್ಞಾನವು ಫಲಿಸುತ್ತದೆ;
ಆದರೆ ಮೂರ್ಖನ ನಾಲಿಗೆಯು ಕತ್ತರಿಸಲಾಗುವುದು.
 
32 ಯೋಗ್ಯವಾದದ್ದು ಯಾವುದೆಂದು ನೀತಿವಂತರ ತುಟಿಗಳಿಗೆ ತಿಳಿಯುವುದು,
ಆದರೆ, ದುಷ್ಟರ ಬಾಯಿ ಮೂರ್ಖತನವನ್ನೇ ಹೊರಗೆಡವುದು.
 

*10:7 10:7 ಆದಿ 48:20