4
ಹೇಗಾದರೂ ಜ್ಞಾನವನ್ನು ಪಡೆಯಿರಿ
ಮಕ್ಕಳೇ, ತಂದೆಯ ಶಿಕ್ಷಣವನ್ನು ಕೇಳಿರಿ;
ತಿಳುವಳಿಕೆಯನ್ನು ಗ್ರಹಿಸಲಿಕ್ಕೆ ಗಮನಕೊಡಿರಿ.
ಏಕೆಂದರೆ ನಾನು ನಿಮಗೆ ಸದುಪದೇಶವನ್ನು ಮಾಡುವೆನು,
ನನ್ನ ಉಪದೇಶವನ್ನು ಬಿಟ್ಟುಬಿಡಬೇಡಿರಿ.
ನಾನೂ ಕೂಡ ನನ್ನ ತಂದೆಗೆ ನೆಚ್ಚಿನ ಮಗನೂ
ನನ್ನ ತಾಯಿಗೆ ಮುದ್ದು ಮಗನೂ ಆಗಿದ್ದೆನು.
ನನ್ನ ತಂದೆ ನನಗೆ ಬೋಧಿಸಿ ಹೇಳಿದ್ದೇನೆಂದರೆ,
“ನನ್ನ ಮಾತುಗಳನ್ನು ಮನಃಪೂರ್ವಕವಾಗಿ ಪಾಲಿಸು;
ನನ್ನ ಆಜ್ಞೆಗಳನ್ನು ಕೈಗೊಳ್ಳು, ಆಗ ನೀನು ಬಾಳುವೆ.
ಜ್ಞಾನವನ್ನು ಪಡೆ, ತಿಳುವಳಿಕೆಯನ್ನು ಸಂಪಾದಿಸು;
ನನ್ನ ಮಾತುಗಳನ್ನು ಮರೆಯದಿರು, ಅವುಗಳಿಂದ ದೂರವಾಗಬೇಡ.
ಜ್ಞಾನವನ್ನು ಬಿಟ್ಟುಬಿಡಬೇಡ, ಆಕೆ* 4:6 ಆಕೆ ಅಂದರೆ ಜ್ಞಾನ ನಿನ್ನನ್ನು ಕಾಪಾಡುವಳು;
ಆಕೆಯನ್ನು ಪ್ರೀತಿಸು, ಆಕೆ ನಿನ್ನನ್ನು ಕಾಯುವಳು.
ಜ್ಞಾನವೇ ಮುಖ್ಯವಾದದ್ದು, ಆದ್ದರಿಂದ ಜ್ಞಾನವನ್ನು ಸಂಪಾದಿಸು;
ನಿನ್ನಲ್ಲಿರುವ ಎಲ್ಲಾ ಸಂಪತ್ತನ್ನು ವ್ಯಯಮಾಡಿದರೂ ತಿಳುವಳಿಕೆಯನ್ನು ಪಡೆದುಕೋ.
ಜ್ಞಾನವನ್ನು ನೀನು ಅಮೂಲ್ಯವೆಂದು ಎಣಿಸು, ಆಕೆಯು ನಿನ್ನನ್ನು ಮೇಲೆತ್ತುವಳು;
ಆಕೆಯನ್ನು ನೀನು ಅಪ್ಪಿಕೊ, ಆಕೆಯು ನಿನ್ನನ್ನು ಘನಪಡಿಸುವಳು.
ಆಕೆಯನ್ನು ನಿನ್ನ ತಲೆಗೆ ಮಹಿಮೆಯ ಕಿರೀಟವಾಗಿರುವಳು;
ಆಕೆಯನ್ನು ನಿನಗೆ ಘನತೆಯ ಕಿರೀಟವನ್ನು ಸಮರ್ಪಿಸುವಳು.”
 
10 ಮಗನೇ, ಆಲಿಸಿ ನನ್ನ ಮಾತುಗಳನ್ನು ಸ್ವೀಕರಿಸು,
ಆಗ ನಿನ್ನ ಜೀವನದ ವರ್ಷಗಳು ಹೆಚ್ಚುವವು.
11 ಜ್ಞಾನ ಮಾರ್ಗದಲ್ಲಿ ನಾನು ನಿನಗೆ ಶಿಕ್ಷಣಕೊಡುವೆನು,
ನೇರ ಮಾರ್ಗಗಳಲ್ಲಿ ನಿನ್ನನ್ನು ಮುನ್ನಡಿಸುವೆನು.
12 ನೀನು ನಡೆಯುವಾಗ ನಿನ್ನ ಹೆಜ್ಜೆಗೆ ತಡೆಯಾಗದು;
ನೀನು ಓಡುವಾಗ ಮುಗ್ಗರಿಸಿ ಬೀಳುವುದಿಲ್ಲ.
13 ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೋ, ಅದು ನಿನ್ನಿಂದ ತೊಲಗದೆ ಇರಲಿ;
ಸದುಪದೇಶವನ್ನು ಕಾಪಾಡಿಕೋ, ಏಕೆಂದರೆ ಅದು ನಿನ್ನ ಜೀವವಾಗಿದೆ.
14 ದುಷ್ಟರ ದಾರಿಯೊಳಗೆ ನೀನು ಪ್ರವೇಶಿಸದಿರು
ಕೆಟ್ಟವರ ಮಾರ್ಗದಲ್ಲಿ ನೀನು ಹೋಗಬೇಡ.
15 ಆ ದಾರಿಯಿಂದ ತೊಲಗು, ಅದರ ಪಕ್ಕದಲ್ಲಿ ಹಾದು ಹೋಗಬೇಡ;
ಅದರಿಂದ ತಪ್ಪಿಸಿಕೊಂಡು, ನಿನ್ನ ಮಾರ್ಗದಲ್ಲಿ ಮುಂದೆ ನಡೆ.
16 ಕೇಡು ಮಾಡದಿದ್ದರೆ ದುಷ್ಟರಿಗೆ ನಿದ್ರೆಬಾರದು;
ಯಾರನ್ನಾದರೂ ಬೀಳಿಸದಿದ್ದರೆ, ಅವರಿಗೆ ನಿದ್ರೆ ಹತ್ತುವುದಿಲ್ಲ.
17 ಅವರಿಗೆ ದುಷ್ಟತನವೇ ಆಹಾರ,
ಬಲಾತ್ಕಾರವೇ ಅವರಿಗೆ ದ್ರಾಕ್ಷಾರಸ.
 
18 ನೀತಿವಂತರ ಮಾರ್ಗವು ಮುಂಜಾನೆಯ ಸೂರ್ಯನ ಬೆಳಕಿನಂತೆ ಇದ್ದು,
ದಿನದ ಪೂರ್ಣ ಬೆಳಕಿನವರೆಗೂ ಪ್ರಕಾಶಿಸಿ ಹೊಳೆಯುತ್ತಾ ಇರುವುದು.
19 ಆದರೆ, ದುಷ್ಟರ ಮಾರ್ಗವು ಕಗ್ಗತ್ತಲಿನಂತಿದೆ.
ಅವರು ಯಾವುದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು.
 
20 ಮಗನೇ, ನನ್ನ ಮಾತುಗಳಿಗೆ ಗಮನಕೊಡು;
ನನ್ನ ನುಡಿಗಳಿಗೆ ಕಿವಿಗೊಡು.
21 ಆ ನುಡಿಗಳು ನಿನ್ನ ಕಣ್ಣುಗಳಿಂದ ತಪ್ಪಿ ಹೋಗದಿರಲಿ;
ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ.
22 ಏಕೆಂದರೆ ಆ ನುಡಿಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ,
ದೇಹಕ್ಕೆಲ್ಲಾ ಆರೋಗ್ಯವೂ ಆಗಿವೆ.
23 ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ;
ಏಕೆಂದರೆ ಅದರೊಳಗಿಂದ ನಿನ್ನ ಕೃತ್ಯಗಳು ಜೀವಧಾರೆಯಾಗಿ ಹೊರಡುತ್ತವೆ.
24 ವಕ್ರಮಾತುಗಳನ್ನು ನಿನ್ನ ಬಾಯಿಂದ ತೊಲಗಿಸಿ;
ಕೆಟ್ಟ ಮಾತುಗಳು ನಿನ್ನ ತುಟಿಗಳಿಂದ ದೂರವಿರಲಿ.
25 ನಿನ್ನ ದೃಷ್ಟಿ ನೇರವಾಗಿಯೇ ನೋಡಲಿ;
ನಿನ್ನ ನೋಟವು ನೇರವಾಗಿ ನಿನ್ನ ಮುಂದೆಯೇ ನಾಟಿರಲಿ.
26 ನೀನು ನಡೆಯುವ ದಾರಿಯ ಬಗ್ಗೆ ಗಮನವಿರಲಿ;
ನೀನು ಕೈಗೊಳ್ಳುವ ಹಾದಿ ಸ್ಥಿರವಾಗಿರಲಿ.
27 ನಿನ್ನ ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಬೇಡ;
ಕೇಡಿನಿಂದ ನಿನ್ನ ಕಾಲುಗಳು ದೂರವಿರಲಿ.

*4:6 4:6 ಆಕೆ ಅಂದರೆ ಜ್ಞಾನ