18
ಕೂಷಿಗೆ ವಿರೋಧವಾದ ಪ್ರವಾದನೆಗಳು
1 ಕೂಷ್ ನದಿಯ ಆಚೆಯಲ್ಲಿರುವ ಸೀಮೆ,
ರೆಕ್ಕೆಗಳನ್ನು* 18:1 ರೆಕ್ಕೆಗಳನ್ನು ಅಥವಾ ಮಿಡತೆಯ ರೆಕ್ಕೆ ಪಟಪಟನೆ ಬಡಿಯುವ ನಾಡಿಗೆ ಕಷ್ಟ!
2 ಇದು ಆಪಿನ ದೋಣಿಗಳಲ್ಲಿ ಸಮುದ್ರ ಮಾರ್ಗದಿಂದ
ರಾಯಭಾರಿಗಳನ್ನು ನೀರಿನ ಮೇಲೆ ಕಳುಹಿಸುತ್ತದೆ.
ಶೀಘ್ರವಾಗಿ ಬರುತ್ತಿರುವ ದೂತರೇ,
ಎತ್ತರವಾದವರೂ, ನುಣುಪಾದ ಚರ್ಮವುಳ್ಳ ಜನರ ಬಳಿಗೂ,
ಸರ್ವರಿಗೂ ಭಯಪ್ರಧರಾಗಿರುವ ಜನರ ಬಳಿಗೂ,
ವಿಚಿತ್ರ ಭಾಷೆಯಿರುವ ಹಾಗೂ ನದಿಗಳಿಂದ ವಿಂಗಡವಾಗಿರುವ
ಆಕ್ರಮಣಕಾರಿ ರಾಷ್ಟ್ರದವರ ಬಳಿಗೂ ಹೋಗಿರಿ.
3 ಜಗದ ಸಕಲ ನಿವಾಸಿಗಳೇ!
ಭೂಮಿಯಲ್ಲಿ ವಾಸಿಸುವವರೇ!
ಬೆಟ್ಟಗಳ ಮೇಲೆ ಧ್ವಜವನ್ನು ಎತ್ತುವಾಗ
ಅದನ್ನು ನೀವು ನೋಡುವಿರಿ,
ತುತೂರಿಯನ್ನು ಊದುವಾಗ ಕೇಳಿಸಿಕೊಳ್ಳುವಿರಿ.
4 ಯೆಹೋವ ದೇವರು ನನಗೆ ಹೀಗೆ ಹೇಳಿದರು,
“ನಾನು ನನ್ನ ವಿಶ್ರಾಂತಿಯನ್ನು ತೆಗೆದುಕೊಳ್ಳುವೆನು.
ಬಿಸಿಹಗಲಿನ ಸೂರ್ಯನಂತೆಯೂ
ಸುಗ್ಗಿಯಲ್ಲಿನ ಮಂಜಿನ ಮೋಡದಂತೆಯೂ
ನಾನು ನನ್ನ ನಿವಾಸಸ್ಥಾನದಲ್ಲಿ ಸುಮ್ಮನೆ ನೋಡುತ್ತಿರುವೆನು.”
5 ಏಕೆಂದರೆ ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ
ಹೂವಿನಲ್ಲಿ ದ್ರಾಕ್ಷಿ ಕಾಯಿಯಾಗುವಾಗ ಅವರು
ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ,
ಚಿಗುರುಗಳನ್ನು ಕಡಿದುಹಾಕುವರು.
6 ಅವುಗಳೆಲ್ಲ ಬೆಟ್ಟದ ಹದ್ದುಗಳಿಗೂ,
ಭೂಮಿಯ ಮೃಗಗಳಿಗೂ ಆಹಾರವಾಗುವುವು.
ಅದು ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿಯೂ,
ಕಾಡುಮೃಗಗಳಿಗೆ ಚಳಿಗಾಲದಲ್ಲಿಯೂ ಆಹಾರವಾಗುವುದು.
7 ಆಗ ಎತ್ತರವಾದ ಹಾಗೂ ನುಣುಪು ಚರ್ಮವುಳ್ಳ ಜನರಿಂದಲೂ,
ಸರ್ವರಿಗೂ ಭಯಪ್ರಧರಾದ ಜನರಿಂದಲೂ,
ವಿಚಿತ್ರ ಭಾಷೆಯಿಂದ ಹಾಗೂ ನದಿಗಳಿಂದ
ವಿಂಗಡವಾಗಿರುವ ಆಕ್ರಮಣಕಾರಿ ಜನರಿಂದಲೂ
ಸರ್ವಶಕ್ತರಾದ ಯೆಹೋವ ದೇವರಿಗೆ ಕಾಣಿಕೆಗಳು ತರಲಾಗುವುದು.
ಹೌದು, ಸೇನಾಧೀಶ್ವರ ಯೆಹೋವ ದೇವರ ಹೆಸರುಳ್ಳ ಚೀಯೋನ್ ಪರ್ವತಕ್ಕೆ ಕಾಣಿಕೆಗಳು ತರಲಾಗುವುದು.