109
ರಕ್ಷಣೆಗಾಗಿ ಭಕ್ತನ ಪ್ರಾರ್ಥನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ.
ಯಾಜ 26; ಧರ್ಮೋ 28; ಕೀರ್ತ 35; 69; ಮತ್ತಾ 5:38-44
ನಾನು ಸ್ತುತಿಸುವ ದೇವರೇ, ಸುಮ್ಮನಿರಬೇಡ.
ದುಷ್ಟರು, ವಂಚಕರು ನನಗೆ ವಿರುದ್ಧವಾಗಿ ಬಾಯ್ದೆರೆದಿದ್ದಾರೆ.
ಅವರು ಸುಳ್ಳು ನಾಲಿಗೆಯಿಂದ ನನ್ನೊಡನೆ ಮಾತನಾಡುತ್ತಿದ್ದಾರೆ.
ಅವರು ಹಗೆಯ ನುಡಿಗಳಿಂದ ನನ್ನನ್ನು ಮುತ್ತಿಕೊಂಡು,
ಕಾರಣವಿಲ್ಲದೆ ನನ್ನ ಸಂಗಡ ಯುದ್ಧ ಮಾಡಿದ್ದಾರೆ.
ನಾನು ಅವರನ್ನು ಪ್ರೀತಿಸಿದರೂ, ಅವರು ನನ್ನನ್ನು ವಿರೋಧಿಸುತ್ತಾರೆ;
ನಾನಾದರೋ ನಿನಗೆ ಮೊರೆಯಿಡುತ್ತೇನೆ.
ಉಪಕಾರಕ್ಕೆ ಅಪಕಾರವನ್ನು ಮಾಡಿದ್ದಾರೆ;
ನಾನು ಪ್ರೀತಿಸಿದ್ದಕ್ಕೆ ಪ್ರತಿಯಾಗಿ ನನ್ನನ್ನು ದ್ವೇಷಿಸಿದ್ದಾರೆ.
ದುಷ್ಟ ಅಧಿಕಾರಿಯನ್ನು ಅವರ ಮೇಲೆ ನೇಮಿಸು;
ತಪ್ಪು ಹೊರಿಸುವವನನ್ನು ಅವನ ಬಲಗಡೆಯಲ್ಲಿ ನಿಲ್ಲಿಸು.
ನ್ಯಾಯವಿಚಾರಣೆಯಲ್ಲಿ ಅವನು ಅಪರಾಧಿ ಎಂದು ತೀರ್ಪುಹೊಂದಲಿ;
ಅವನ ಪ್ರಾರ್ಥನೆಯೂ ಪಾಪವೆಂದು ಎಣಿಸಲ್ಪಡಲಿ.
ಅವನ ಜೀವಿತದ ದಿನಗಳು ಸ್ವಲ್ಪವಾಗಿರಲಿ;
ಅವನ ಉದ್ಯೋಗವು ಮತ್ತೊಬ್ಬನಿಗಾಗಲಿ.
ಅವನ ಮಕ್ಕಳು ಅನಾಥರೂ ಮತ್ತು ಹೆಂಡತಿ ವಿಧವೆಯೂ ಆಗಲಿ.
10 ಅವನ ಮಕ್ಕಳು ತಮ್ಮ ಹಾಳಾದ ಸ್ಥಳಗಳನ್ನು ಬಿಟ್ಟು,
ದಿಕ್ಕಿಲ್ಲದವರಂತೆ ಅಲೆಯುತ್ತಾ ಭಿಕ್ಷೆಬೇಡಲಿ.
11 ಸಾಲಕೊಟ್ಟವನು ಅವನ ಆಸ್ತಿಯನ್ನೆಲ್ಲಾ ಕಸಿದುಕೊಳ್ಳಲಿ;
ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ.
12 ಅವನಿಗೆ ಯಾರೂ ಕೃಪೆತೋರಿಸದಿರಲಿ,
ದಿಕ್ಕಿಲ್ಲದ ಅವನ ಮಕ್ಕಳಿಗೆ ಯಾರೂ ದಯೆತೋರದಿರಲಿ,
13 ಅವನ ಸಂತತಿಯು ನಿರ್ಮೂಲವಾಗಲಿ;
ಎರಡನೆಯ ತಲೆಯಲ್ಲಿಯೇ ಅದು ನಿರ್ನಾಮವಾಗಿ ಹೋಗಲಿ.
14 ಯೆಹೋವನು ಅವನ ಹಿರಿಯರ ಪಾಪವನ್ನು ಮರೆಯದಿರಲಿ;
ಅವನ ತಾಯಿಯ ಪಾಪವು ಅಳಿದುಹೋಗದಿರಲಿ.
15 ಅವು ಯೆಹೋವನ ಜ್ಞಾಪಕದಲ್ಲಿ ಇದ್ದೇ ಇರಲಿ.
ಆತನು ಅವರ ಹೆಸರನ್ನು ಭೂಮಿಯಿಂದ ತೆಗೆದುಹಾಕಲಿ.
16 ಏಕೆಂದರೆ ಅವನು ಕರುಣೆ ತೋರಿಸುವುದನ್ನು ಮರೆತುಬಿಟ್ಟನು,
ಬಡವನನ್ನು, ದೀನನನ್ನು, ಮನಗುಂದಿದವನನ್ನು ಹಿಂಸಿಸಿ ಕೊಲ್ಲಬೇಕೆಂದು ಯತ್ನಿಸಿದನು.
17 ಶಪಿಸುವುದು ಅವನಿಗೆ ಇಷ್ಟವಾಗಿತ್ತು, ಅದೇ ಅವನಿಗೆ ಬರಲಿ!
ಆಶೀರ್ವದಿಸುವುದು ಅವನಿಗೆ ಇಷ್ಟವಿರಲ್ಲಿಲ್ಲ, ಅದು ಅವನಿಂದ ದೂರವಿರಲಿ!
18 ಅವನು ಶಾಪವನ್ನೇ ವಸ್ತ್ರವನ್ನಾಗಿ ಹೊದ್ದುಕೊಳ್ಳಲಿ,
ಅದು ನೀರಿನಂತೆ ಅವನ ಅಂತರಂಗದಲ್ಲಿಯೂ,
ಎಣ್ಣೆಯಂತೆ ಎಲುಬುಗಳಲ್ಲಿಯೂ ಸೇರಲಿ.
19 ಶಾಪವೇ ಅವನ ಹೊದಿಕೆಯಂತೆಯೂ,
ನಿತ್ಯವಾದ ನಡುಕಟ್ಟಿನಂತೆಯೂ ಆಗಲಿ.
20 ನನ್ನನ್ನು ಎದುರಿಸಿ ಕೀಳುಮಾತನಾಡುವವರಿಗೆ
ಯೆಹೋವನಿಂದ ಬರುವ ಪ್ರತಿಫಲವು ಇದೇ ಆಗಿರಲಿ.
21 ಕರ್ತನೇ, ಯೆಹೋವನೇ, ನಿನ್ನ ಕೃಪೆಯು ಹಿತಕರವಾಗಿದೆ;
ನಿನ್ನ ಹೆಸರಿನ ನಿಮಿತ್ತ ನನ್ನ ಪಕ್ಷವನ್ನು ಹಿಡಿದು ರಕ್ಷಿಸು.
22 ನಾನು ಬಡವನೂ, ದೀನನೂ ಆಗಿದ್ದೇನಲ್ಲಾ!
ನನ್ನ ಹೃದಯದಲ್ಲಿ ಅಲಗು ನೆಟ್ಟಂತಾಗಿದೆ.
23 ಸಂಜೆಯ ನೆರಳಿನಂತೆ ಗತಿಸಿಹೋಗುತ್ತಿದ್ದೇನೆ;
ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಿದ್ದೇನೆ.
24 ಉಪವಾಸದಿಂದ ನನ್ನ ಮೊಣಕಾಲುಗಳು ಬಲಹೀನವಾದವು;
ನನ್ನ ದೇಹವು ಎಣ್ಣೆಯಿಲ್ಲದೆ ಕ್ಷೀಣವಾಯಿತು.
25 ನಾನು ಜನರ ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ;
ನನ್ನನ್ನು ನೋಡುವವರು ತಲೆಯಾಡಿಸುತ್ತಾರೆ.
26 ಯೆಹೋವನೇ, ನನ್ನ ದೇವರೇ, ಸಹಾಯಮಾಡು;
ನಿನ್ನ ಕೃಪೆಗೆ ತಕ್ಕಂತೆ ರಕ್ಷಿಸು.
27 ಆಗ ಅವರು ಇದು ನಿನ್ನ ಕೈಕೆಲಸವೆಂದೂ,
ಯೆಹೋವನಾದ ನೀನೇ ಇದನ್ನು ಮಾಡಿದೆ ಎಂದು ತಿಳಿದುಕೊಳ್ಳುವರು.
28 ಅವರು ಶಪಿಸಲಿ, ಚಿಂತೆಯಿಲ್ಲ; ನೀನು ಆಶೀರ್ವದಿಸುವಿ.
ಅವರು ಎದ್ದು ಅಪಮಾನ ಹೊಂದುವರು.
ಆದರೆ ನಿನ್ನ ಸೇವಕನಾದ ನಾನು ಉಲ್ಲಾಸಿಸುವೆನು.
29 ಮಾನಭಂಗವೇ ನನ್ನ ವಿರೋಧಿಗಳಿಗೆ ವಸ್ತ್ರವಾಗಲಿ;
ನಾಚಿಕೆಯೇ ಅವರ ಹೊದಿಕೆಯಾಗಲಿ.
30 ಯೆಹೋವನನ್ನು ಬಹಳವಾಗಿ ಕೊಂಡಾಡುವೆನು;
ಜನಸಮೂಹದ ಮಧ್ಯದಲ್ಲಿ ಆತನನ್ನು ಕೀರ್ತಿಸುವೆನು.
31 ಆತನು ದೀನನ ಬಲಗಡೆಯಲ್ಲಿ ನಿಂತುಕೊಂಡು,
ಪ್ರಾಣಶಿಕ್ಷೆ ವಿಧಿಸುವವರ ಕೈಯಿಂದ ತಪ್ಪಿಸಿ ರಕ್ಷಿಸುವನು.