94
ದೇವರ ಶಿಕ್ಷೆ ಮತ್ತು ರಕ್ಷಣೆಗೆ ಒಳಗಾದವನು ಧನ್ಯನು
1 ಯೆಹೋವನೇ, ಮುಯ್ಯಿತೀರಿಸುವ ದೇವರೇ,
ಮುಯ್ಯಿತೀರಿಸುವ ದೇವರೇ, ಕೋಪವನ್ನು ತೋರ್ಪಡಿಸು.* 94:1 ಕೋಪವನ್ನು ತೋರ್ಪಡಿಸು. ಅಥವಾ ಪ್ರಕಾಶಿಸು.
2 ಲೋಕದ ನ್ಯಾಯಾಧಿಪತಿಯೇ, ಏಳು;
ಗರ್ವಿಷ್ಠರಿಗೆ ತಕ್ಕ ಶಿಕ್ಷೆಯನ್ನು ಕೊಡು.
3 ಯೆಹೋವನೇ, ದುಷ್ಟರು ಎಲ್ಲಿಯವರೆಗೆ,
ದುಷ್ಟರು ಎಲ್ಲಿಯವರೆಗೆ ಹಿಗ್ಗುತ್ತಿರಬೇಕು?
4 ಕೆಡುಕರೆಲ್ಲರು ಉಬ್ಬಿಕೊಂಡು,
ಅಹಂಕಾರವನ್ನು ಕಕ್ಕುತ್ತಾರೆ.
5 ಯೆಹೋವನೇ, ನಿನ್ನ ಪ್ರಜೆಯನ್ನು ಜಜ್ಜಿಹಾಕುತ್ತಾರೆ;
ನಿನ್ನ ಸ್ವತ್ತನ್ನು ಕುಗ್ಗಿಸಿಬಿಡುತ್ತಾರೆ;
6 ವಿಧವೆಯರನ್ನೂ, ಪರದೇಶಿಯನ್ನೂ ಕೊಲ್ಲುತ್ತಾರೆ;
ಅನಾಥರನ್ನು ಹತಮಾಡುತ್ತಾರೆ.
7 ಅವರು, “ಯಾಹುವು ನೋಡುವುದೇ ಇಲ್ಲ;
ಯಾಕೋಬ್ಯರ ದೇವರು ಲಕ್ಷಿಸುವುದೇ ಇಲ್ಲ” ಅನ್ನುತ್ತಾರೆ.
8 ಪಶುಪ್ರಾಯರಾದ ಪ್ರಜೆಗಳಿರಾ, ಲಕ್ಷಿಸಿರಿ;
ಮೂರ್ಖರೇ, ನಿಮಗೆ ಬುದ್ಧಿಬರುವುದು ಯಾವಾಗ?
9 ಕಿವಿಮಾಡಿದವನು ಕೇಳನೋ?
ಕಣ್ಣುಕೊಟ್ಟವನು ನೋಡನೋ?
10 ಜನಾಂಗಗಳನ್ನು ಶಿಕ್ಷಿಸುವವನೂ,
ಮನುಷ್ಯರಿಗೆ ಬುದ್ಧಿಕಲಿಸುವವನೂ ಗದರಿಸನೋ?
11 ಮನುಷ್ಯನ ಯೋಚನೆಗಳು, “ಉಸಿರೇ” ಎಂದು ಯೆಹೋವನು ತಿಳುಕೊಳ್ಳುತ್ತಾನೆ.
12 ಯಾಹುವೇ, ನೀನು ಯಾರನ್ನು ಶಿಕ್ಷಿಸಿ,
ಧರ್ಮೋಪದೇಶಮಾಡುತ್ತೀಯೋ ಅವನೇ ಧನ್ಯನು.
13 ಅಂಥವನನ್ನು, ದುಷ್ಟನಿಗೋಸ್ಕರ ಗುಂಡಿಯು ಅಗೆಯಲ್ಪಡುವ ತನಕ,
ಆಪತ್ತಿನಲ್ಲಿಯೂ ನೀನು ಸಂರಕ್ಷಿಸುತ್ತಿ.
14 ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವುದಿಲ್ಲ;
ತನ್ನ ಸ್ವತ್ತನ್ನು ಕೈಬಿಡುವುದಿಲ್ಲ.
15 ನ್ಯಾಯತೀರ್ಪು ನೀತಿಗೆ ತಿರುಗಿಕೊಳ್ಳುವುದು;
ಯಥಾರ್ಥಚಿತ್ತರೆಲ್ಲರೂ ಅದನ್ನೇ ಅನುಸರಿಸುವರು.
16 ದುಷ್ಟರಿಗೆ ವಿರುದ್ಧವಾಗಿ ನನಗೋಸ್ಕರ ಏಳುವವರು ಯಾರು?
ಕೆಡುಕರಿಗೆ ವಿರುದ್ಧವಾಗಿ ನನಗೋಸ್ಕರ ಎದ್ದು ನಿಲ್ಲುವವರು ಯಾರು?
17 ಯೆಹೋವನ ಸಹಾಯವಿಲ್ಲದಿದ್ದರೆ ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 ಯೆಹೋವನೇ, ನನ್ನ ಕಾಲು ಜಾರಿತೆಂದು ಅಂದುಕೊಂಡಾಗಲೇ,
ನಿನ್ನ ಕೃಪೆಯು ನನಗೆ ಆಧಾರವಾಯಿತು.
19 ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ,
ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.
20 ಧರ್ಮಶಾಸ್ತ್ರದ ನೆಪದಿಂದ ಕೇಡುಕಲ್ಪಿಸುವ ದುಷ್ಟ ಅಧಿಪತಿಗಳಿಗೂ,
ನಿನಗೂ ಸಂಬಂಧವೇನು?
21 ಜೀವವನ್ನು ತೆಗೆಯಬೇಕೆಂದು ನೀತಿವಂತರ ಮೇಲೆ ಬೀಳುತ್ತಾರೆ;
ನಿರಪರಾಧಿಗಳಿಗೆ ಮರಣಶಿಕ್ಷೆ ವಿಧಿಸುತ್ತಾರೆ.
22 ಆದರೆ ಯೆಹೋವನು ನನ್ನ ದುರ್ಗವೂ,
ನನ್ನ ದೇವರು ಆಶ್ರಯಗಿರಿಯೂ ಆಗಿದ್ದಾನೆ.
23 ಅವರ ಕೆಟ್ಟತನವನ್ನು ಅವರಿಗೇ ತಿರುಗಿಸುವನು;
ಅವರ ದುಷ್ಟತನದಿಂದಲೇ ಅವರನ್ನು ನಿರ್ಮೂಲಮಾಡುವನು.
ನಮ್ಮ ಯೆಹೋವ ದೇವರು ಅವರನ್ನು ಸಂಹರಿಸಿಬಿಡುವನು.