29
ಯೆರೆಮೀಯನು ಬಾಬೆಲಿನಲ್ಲಿ ಸೆರೆಯಾಗಿದ್ದವರಿಗೆ ಕಳುಹಿಸಿದ ಕಾಗದ
1 ಪ್ರವಾದಿಯಾದ ಯೆರೆಮೀಯನು ಸೆರೆಹೋಗಿದ್ದ ಹಿರಿಯರಲ್ಲಿ ಉಳಿದವರಿಗೂ, ಯಾಜಕರಿಗೂ, ಪ್ರವಾದಿಗಳಿಗೂ ಅಂತು ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದಿದ್ದ ಸಕಲ ಜನರಿಗೂ ಯೆರೂಸಲೇಮಿನಿಂದ ಬರೆದು ರವಾನಿಸಿದ ಕಾಗದದ ಮಾತುಗಳು. 2 ಇದು ಅರಸನಾದ ಯೆಕೊನ್ಯನು, ರಾಜಮಾತೆಯು, ಕಂಚುಕಿಗಳು, ಯೆಹೂದದ ಮತ್ತು ಯೆರೂಸಲೇಮಿನ ಸರದಾರರು, ಶಿಲ್ಪಿಗಳು, ಕಮ್ಮಾರರು ಇವರು ಯೆರೂಸಲೇಮಿನಿಂದ ತೊಲಗಿದ ಮೇಲೆ ನಡೆದ ಸಂಗತಿಗಳು. 3 ಯೆಹೂದದ ಅರಸನಾದ ಚಿದ್ಕೀಯನಿಂದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ರಾಯಭಾರಿಗಳಾಗಿ ಬಾಬಿಲೋನಿಗೆ ಕಳುಹಿಸಲ್ಪಟ್ಟ ಶಾಫಾನನ ಮಗನಾದ ಎಲ್ಲಾಸ, ಹಿಲ್ಕೀಯನ ಮಗನಾದ ಗೆಮರ್ಯ ಇವರ ಕೈಯಲ್ಲಿ ಅದನ್ನು ಕಳುಹಿಸಿದನು. 4 ಅದರಲ್ಲಿ, “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ತಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಸಾಗಿಸಿದ ಸೆರೆಯವರೆಲ್ಲರಿಗೂ ಹೀಗೆ ಹೇಳುತ್ತಾನೆ, 5 ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಅವುಗಳ ಫಲವನ್ನು ಅನುಭವಿಸಿರಿ. 6 ಸಂಸಾರಿಗಳಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೆ ಹೆಣ್ಣುಮಕ್ಕಳನ್ನು ತೆಗೆದುಕೊಳ್ಳಿರಿ, ನಿಮ್ಮ ಹೆಣ್ಣುಮಕ್ಕಳಿಗೆ ಗಂಡುಮಕ್ಕಳನ್ನು ಕೊಡಿರಿ; ಅವರೂ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಲಿ; ನೀವು ಇರುವಲ್ಲಿಯೇ ವೃದ್ಧಿಯಾಗಿರಿ, ಕೊರತೆ ಅನುಭವಿಸದಿರಿ. 7 ನಾನು ಯಾವ ಪಟ್ಟಣಕ್ಕೆ ನಿಮ್ಮನ್ನು ಸಾಗಿಸಿದೆನೋ, ಅದರ ಕ್ಷೇಮವನ್ನು ಹಾರೈಸಿ ಅದಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ; ಅದರ ಕ್ಷೇಮವೇ ನಿಮ್ಮ ಕ್ಷೇಮ. 8 ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳಿಂದಲೂ, ಶಕುನದವರಿಂದಲೂ ಮೋಸಹೋಗಬೇಡಿರಿ; ನಿಮಗಾಗಿ ಕನಸುಕಂಡು ಹೇಳುವವರಿಗೆ ಕಿವಿಗೊಡಬೇಡಿರಿ. 9 ಅವರು ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನು ಸಾರುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ. ಇದು ಯೆಹೋವನ ನುಡಿ” ಎಂದು ಬರೆಯಲ್ಪಟ್ಟಿತು.
10 ಯೆಹೋವನು ಇಂತೆನ್ನುತ್ತಾನೆ, “ಬಾಬೆಲ್ ರಾಜ್ಯವು ಎಪ್ಪತ್ತು ವರ್ಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಕಟಾಕ್ಷಿಸಿ, ಈ ಸ್ಥಳಕ್ಕೆ ತಿರುಗಿ ಬರಮಾಡುವೆನೆಂಬ ನನ್ನ ಶುಭವಾಕ್ಯವನ್ನು ನಿಮಗಾಗಿ ನೆರವೇರಿಸುವೆನು. 11 ಇವರಿಗೆ ಒಳ್ಳೆಯದಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ. 12 ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು. 13 ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. 14 ನಾನು ನಿಮಗೆ ದೊರೆಯುವೆನು, ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ, ನಾನು ನಿಮ್ಮನ್ನು ಅಟ್ಟಿಬಿಟ್ಟಿದ್ದ ಸಮಸ್ತ ದೇಶಗಳಿಂದಲೂ, ಸಕಲಜನಾಂಗಗಳ ಮಧ್ಯದಿಂದಲೂ ಒಟ್ಟುಗೂಡಿಸಿ ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದೆನೋ ಅಲ್ಲಿಗೆ ತಿರುಗಿ ಬರಮಾಡುವೆನು, ಇದು ಯೆಹೋವನ ನುಡಿ” ಎಂಬುದೇ. 15 ನೀವೋ, “ಯೆಹೋವನು ನಮಗಾಗಿ ಬಾಬೆಲಿನಲ್ಲೇ ಪ್ರವಾದಿಗಳನ್ನು ಏರ್ಪಡಿಸಿದ್ದಾನಲ್ಲಾ” ಅಂದುಕೊಂಡಿದ್ದೀರಿ.
16 ಸೇನಾಧೀಶ್ವರನಾದ ಯೆಹೋವನು ದಾವೀದನ ಸಿಂಹಾಸನಾರೂಢನಾದ ಅರಸನ ವಿಷಯವಾಗಿಯೂ, ನಿಮ್ಮೊಂದಿಗೆ ಸೆರೆಹೋಗದ ನಿಮ್ಮ ಸಹೋದರರಾದ ಈ ಪಟ್ಟಣದ ಸಕಲ ನಿವಾಸಿಗಳ ವಿಷಯವಾಗಿಯೂ ಇಂತೆನ್ನುತ್ತಾನೆ, 17 “ಆಹಾ, ನಾನು ಅವರ ಮೇಲೆ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳನ್ನು ಬರಮಾಡಿ ಯಾರೂ ತಿನ್ನದ ಹಾಗೆ ಕೆಟ್ಟು ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳ ಗತಿಗೆ ಅವರನ್ನು ತರುವೆನು. 18 ನಾನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಅವರನ್ನು ಹಿಂದಟ್ಟುತ್ತಾ, ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆಯೂ, ನಾನು ಅವರನ್ನು ಅಟ್ಟಿಬಿಟ್ಟಿರುವ ಸಕಲ ಜನಾಂಗಗಳಲ್ಲಿ ಶಾಪ, ಪರಿಹಾಸ್ಯ, ದೂಷಣೆ, ಇವುಗಳಿಗೆ ಗುರಿಯಾಗುವಂತೆಯೂ ಮಾಡುವೆನು. 19 ಅವರು ನನ್ನ ಮಾತುಗಳನ್ನು ಕೇಳಲಿಲ್ಲವಲ್ಲಾ; ನಾನು ನನ್ನ ಸೇವಕರಾದ ಪ್ರವಾದಿಗಳನ್ನು ಅವರ ಬಳಿಗೆ ತಪ್ಪದೆ ಕಳುಹಿಸಿ ಎಚ್ಚರಿಸುತ್ತಾ ಬಂದರೂ ಅವರು ಕೇಳಲೊಲ್ಲದೆ ಹೋದರು ಇದು ಯೆಹೋವನ ನುಡಿ.”
20 ನಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಸಾಗಿಸಿದ ಸೆರೆಯವರೇ, ನೀವೆಲ್ಲರೂ ಯೆಹೋವನ ವಾಕ್ಯವನ್ನು ಕೇಳಿರಿ. 21 ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ತನ್ನ ಹೆಸರೆತ್ತಿ ಸುಳ್ಳನ್ನು ಸಾರುವ ಕೊಲಾಯನ ಮಗನಾದ ಅಹಾಬ, ಮಾಸೇಯನ ಮಗನಾದ ಚಿದ್ಕೀಯ ಇವರ ವಿಷಯವಾಗಿ ಇಂತೆನ್ನುತ್ತಾನೆ, “ಇಗೋ, ನಾನು ಇವರನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಕೊಡುವೆನು; ಅವನು ನಿಮ್ಮ ಕಣ್ಣೆದುರಿಗೆ ಇವರನ್ನು ಕೊಲ್ಲಿಸುವನು. 22 ಇವರ ಚರಿತ್ರೆಯನ್ನು ಬಾಬೆಲಿನಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಶಪಿಸುವ ಮಾತಾಗಿ ತೆಗೆದುಕೊಂಡು ‘ಬಾಬೆಲಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ’ ಎಂದು ಶಪಿಸುವರು. 23 ಇವರು ಇಸ್ರಾಯೇಲಿನಲ್ಲಿ ದುರಾಚಾರವನ್ನು ನಡೆಸಿ, ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರಮಾಡಿ, ನಾನು ಆಜ್ಞಾಪಿಸದ ಮಾತುಗಳನ್ನು ನನ್ನ ಹೆಸರಿನ ಮೇಲೆ ಸುಳ್ಳಾಗಿ ಸಾರಿದಿರಲ್ಲಾ; ನಾನೇ ಬಲ್ಲೆ, ನಾನೇ ಸಾಕ್ಷಿ ಎಂದು ಯೆಹೋವನು ಅನ್ನುತ್ತಾನೆ” ಎಂಬುದೇ.
ಶೆಮಾಯನ ಆಕ್ಷೇಪಣೆ, ಯೆರೆಮೀಯನ ಉತ್ತರ
24 ಆಮೇಲೆ ಯೆಹೋವನು ಯೆರೆಮೀಯನಿಗೆ ಈ ಅಪ್ಪಣೆಯನ್ನು ಕೊಟ್ಟನು, ನೀನು ನೆಹೆಲಾಮ್ಯನಾದ ಶೆಮಾಯನಿಗೆ ಹೀಗೆ ತಿಳಿಸಬೇಕು, 25 ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀನು ಯೆರೂಸಲೇಮಿನಲ್ಲಿರುವ ಎಲ್ಲಾ, ಜನರಿಗೂ ಯಾಜಕನಾದ ಮಾಸೇಯನ ಮಗನಾಗಿರುವ ಚೆಫನ್ಯನಿಗೂ ಮತ್ತು ಸಮಸ್ತ ಯಾಜಕರಿಗೂ ನಿನ್ನ ಹೆಸರಿಗೆ ಕಳುಹಿಸಿದ ಕಾಗದದಲ್ಲಿ, 26 “ಯೆಹೋವನು ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ಯಾಜಕನನ್ನಾಗಿ ನೇಮಿಸಿ, ಯಾರು ತನ್ನನ್ನು ತಾನೇ ಪ್ರವಾದಿಯಂತೆ ನಟಿಸುತ್ತಾನೋ ಅವನನ್ನು ಕೋಳಕ್ಕೆ ಹಾಕಿ, ಕೊರಳಿಗೆ ಕವೆಯೊಡ್ಡುವ ಅಧಿಕಾರವನ್ನು ತನ್ನ ಆಲಯದಲ್ಲಿ ನಿನಗೆ ವಹಿಸಿದ್ದಾನಲ್ಲಾ. 27 ಹೀಗಿರಲು ನಿಮ್ಮ ಮಧ್ಯದಲ್ಲಿ ಪ್ರವಾದಿಯಾಗಿ ನಟಿಸುವ ಅನಾತೋತಿನವನಾದ ಯೆರೆಮೀಯನನ್ನು ನೀನು ಏಕೆ ಖಂಡಿಸಲಿಲ್ಲ? 28 ಇವನು, ‘ಪರದೇಶ ವಾಸವು ನಿಮಗೆ ದೀರ್ಘವಾಗುವುದು, ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಫಲವನ್ನು ಅನುಭವಿಸಿರಿ’ ಎಂದು ಬಾಬೆಲಿನಲ್ಲಿರುವ ನಮಗೆ ಹೇಳಿ ಕಳುಹಿಸಿದ್ದಾನೆ ನೋಡು ಎಂಬುದಾಗಿ ಬರೆದ ಕಾರಣ ನಾನು ನಿನ್ನನ್ನು ದಂಡಿಸುವುದು ಖಂಡಿತ.”
29 ಯಾಜಕನಾದ ಚೆಫನ್ಯನು ಈ ಕಾಗದವನ್ನು ಪ್ರವಾದಿಯಾದ ಯೆರೆಮೀಯನ ಮುಂದೆ ಓದಿದನು. 30 ಅನಂತರ ಯೆರೆಮೀಯನಿಗೆ ಯೆಹೋವನು ಈ ಮಾತುಗಳನ್ನು ತಿಳಿಸಿದನು. 31 ನೀನು ಸೆರೆಯವರೆಲ್ಲರಿಗೆ ಹೀಗೆ ಹೇಳಿ ಕಳುಹಿಸು, “ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಯೆಹೋವನು ಇಂತೆನ್ನುತ್ತಾನೆ, ನಾನು ಕಳುಹಿಸದೆ ಹೋದರೂ ಶೆಮಾಯನು ನಿಮಗೆ ಪ್ರವಾದನೆಮಾಡಿ ಸುಳ್ಳಿನಲ್ಲಿ ನಂಬಿಕೆಯನ್ನು ಹುಟ್ಟಿಸಿದ ಕಾರಣ ಇಗೋ, 32 ನಾನು ಆ ನೆಹೆಲಾಮ್ಯನಾದ ಶೆಮಾಯನನ್ನೂ ಮತ್ತು ಅವನ ಸಂತತಿಯವರನ್ನೂ ದಂಡಿಸುವೆನು; ಅವನು ಯೆಹೋವನಾದ ನನ್ನ ವಿರುದ್ಧವಾಗಿ ದ್ರೋಹದ ಮಾತನ್ನು ಆಡಿದ್ದರಿಂದ ಈ ಜನರ ಮಧ್ಯದಲ್ಲಿ ವಾಸಿಸಲು ಅವನಿಗೆ ಯಾವ ಸಂತಾನವೂ ಇರದು; ನಾನು ನನ್ನ ಜನರಿಗೆ ಉಂಟುಮಾಡಬೇಕೆಂದಿರುವ ಮೇಲನ್ನು ಅವನು ನೋಡದೆ ಹೋಗುವನು; ಇದು ಯೆಹೋವನ ನುಡಿ” ಎಂಬುದೇ.