3
ದೇವಾಲಯವನ್ನು ಕಟ್ಟಿಸಿದ್ದು
ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ, * 3:1 ಅಥವಾ ಯೆಹೋವನು ತೋರಿಸಿದ.ಯೆಹೋವನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ಆಲಯವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು. ಇದು ಮುಂಚೆ ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು ದಾವೀದನು ಇದಕ್ಕೋಸ್ಕರ ಸಿದ್ಧಮಾಡಿದ್ದನು. ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಅದನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು. ಸೊಲೊಮೋನನು ಕಟ್ಟಿಸಿದ ದೇವಾಲಯದ ಅಸ್ತಿವಾರದ ಉದ್ದವು ಮೊದಲಿದ್ದ ಮೊಳದ ಪ್ರಕಾರ ಅರುವತ್ತು ಮೊಳ ಉದ್ದವೂ, ಇಪ್ಪತ್ತು ಮೊಳ ಅಗಲವು ಆಗಿತ್ತು. ದೇವಾಲಯದ ಮುಂಭಾಗದಲ್ಲಿದ್ದ ಮಂಟಪದ ಉದ್ದವು ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಎತ್ತರವು ಇಪ್ಪತ್ತು ಮೊಳ ಆಗಿತ್ತು. ಸೊಲೊಮೋನನು ಅದರ ಒಳಭಾಗವನ್ನು ಶುದ್ಧ ಬಂಗಾರದ ತಗಡಿನಿಂದ ಹೊದಿಸಿದನು. ದೊಡ್ಡ ಕೋಣೆಯನ್ನು ತುರಾಯಿ ಮರದ ಹಲಗೆಗಳಿಂದ ಮುಚ್ಚಿ, ಅದನ್ನು ಶುದ್ಧ ಬಂಗಾರದಿಂದ ಹೊದಿಸಿ, ಆದರ ಹಲಗೆಗಳ ಮೇಲೆ ಖರ್ಜೂರದ ಮರಗಳನ್ನೂ ಬಳ್ಳಿಗಳನ್ನೂ ಸರಪಣಿಗಳನ್ನು ಕೆತ್ತಿಸಿದನು. ಅಮೂಲ್ಯವಾದ ರತ್ನದ ಕಲ್ಲುಗಳಿಂದ ಅಲಯವನ್ನು ಅಲಂಕರಿಸಿದನು. ಆದರ ಬಂಗಾರವು ಪರ್ವಯಿಮ್ ದೇಶದ ಬಂಗಾರವಾಗಿತ್ತು. ಹೀಗೆ ಆಲಯದಲ್ಲಿನ ತೊಲೆಗಳನ್ನೂ, ಹೊಸ್ತಿಲುಗಳನ್ನು, ಗೋಡೆಗಳನ್ನೂ, ಬಾಗಿಲುಗಳನ್ನೂ ಬಂಗಾರದಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.
ಇದಲ್ಲದೆ ಅವನು ಮಹಾಪರಿಶುದ್ಧ ಸ್ಥಳವನ್ನು ಕಟ್ಟಿಸಿದನು. ಅದರ ಉದ್ದವು, ಆಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ; ಅದರ ಅಗಲವೂ ಇಪ್ಪತ್ತು ಮೊಳವಾಗಿತ್ತು. ಅದನ್ನು ಆರುನೂರು ತಲಾಂತು ಚೊಕ್ಕ ಬಂಗಾರದಿಂದ ಹೊದಿಸಿದನು. ಬಂಗಾರದ ಮೊಳೆಗಳ ತೂಕ ಐವತ್ತು ತೊಲವಾಗಿತ್ತು. ಮೇಲುಪ್ಪರಿಗೆಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು. 10 ಮಹಾಪರಿಶುದ್ಧ ಸ್ಥಳದಲ್ಲಿ ಎರಡು ಕೆರೂಬಿಗಳ ಪ್ರತಿಮೆಗಳನ್ನು ಮಾಡಿಸಿದನು; ಅವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು. 11 ಕೆರೂಬಿಗಳ ರೆಕ್ಕೆಗಳು ಒಟ್ಟು ಇಪ್ಪತ್ತು ಮೊಳ ಉದ್ದವಾಗಿದ್ದವು. ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು; ಐದು ಮೊಳ ಉದ್ದವಾದ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು. 12 ಅದರಂತೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಐದು ಮೊಳ ಉದ್ದವಾಗಿದ್ದು, ಅದು ಕೋಣೆಯ ಗೋಡೆಯವರೆಗೆ ತಗಲುತ್ತಿತ್ತು.; ಇನ್ನೊಂದು ರೆಕ್ಕೆಯು ಐದು ಮೊಳ ಉದ್ದವಾಗಿದ್ದು ಮತ್ತೊಂದು ಕೆರೂಬಿಯ ರೆಕ್ಕೆಯವರೆಗೆ ತಗಲುತ್ತಿತ್ತು. 13 ಈ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಉದ್ದಕ್ಕೆ ಚಾಚಿಕೊಂಡಿದ್ದವು. ಕೆರೂಬಿಗಳು ತಮ್ಮ ಕಾಲುಗಳ ಮೇಲೆ ನಿಂತುಕೊಂಡು, ಪರಿಶುದ್ಧ ಸ್ಥಳದ ಕಡೆಗೆ ಮುಖಮಾಡಿದ್ದವು. 14 ಸೊಲೊಮೋನನು ಪರದೆಯನ್ನು ನೀಲ, ಧೂಮ್ರ, ರಕ್ತವರ್ಣಗಳುಳ್ಳ ನಯವಾದ ನಾರಿನಿಂದ ಮಾಡಿಸಿದನು. ಅದರಲ್ಲಿ ಕೆರೂಬಿಗಳ ಕಸೂತಿಯನ್ನು ಹಾಕಿಸಿದನು.
15 ಇದಲ್ಲದೆ ದೇವಾಲಯದ ಮುಂದೆ ಎರಡು ಸ್ತಂಭಗಳನ್ನು ನಿಲ್ಲಿಸಿದನು, ಅವು ಮೂವತ್ತೈದು ಮೊಳ (5.5 ಮೀಟರ್) ಎತ್ತರವಾಗಿದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ಐದು ಮೊಳ ಎತ್ತರವಾಗಿದ್ದವು. 16 ಸೊಲೊಮೋನನು ಗರ್ಭಗೃಹದ ಸರಪಣಿಗಳಂತೆ ಹಾರಗಳನ್ನು ಮಾಡಿಸಿ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕೆತ್ತಿಸಿ ಕಟ್ಟಿಸಿದನು. 17 ಸ್ತಂಭಗಳನ್ನು ದೇವಾಲಯದ ಮುಂಭಾಗದಲ್ಲಿ, ಒಂದನ್ನು ಬಲಗಡೆಗೂ, ಇನ್ನೊಂದನ್ನು ಎಡಗಡೆಗೂ ನಿಲ್ಲಿಸಿದನು. ಬಲಗಡೆಯ ಕಂಬಕ್ಕೆ “ಯಾಕೀನ್” ಎಂದೂ ಎಡಗಡೆಯಿದ್ದ ಕಂಬಕ್ಕೆ “ಬೋವಜ್” ಎಂದೂ ಹೆಸರಿಟ್ಟನು.

*3:1 3:1 ಅಥವಾ ಯೆಹೋವನು ತೋರಿಸಿದ.