7
ನೀತಿವಂತರಿಗೆ ಧರ್ಮಶಾಸ್ತ್ರದ ಹಂಗಿಲ್ಲ
ಸಹೋದರ ಸಹೋದರಿಯರೇ, ನೀವೆಲ್ಲರು ಮೋಶೆಯ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳುತ್ತೀರಿ. ಒಬ್ಬ ವ್ಯಕ್ತಿಯು ಜೀವದಿಂದಿರುವವರೆಗೆ ಮಾತ್ರ ಧರ್ಮಶಾಸ್ತ್ರವು ಆ ವ್ಯಕ್ತಿಯನ್ನು ಆಳುತ್ತದೆ ಎಂಬುದು ನಿಮಗೆ ತಿಳಿದಿಲ್ಲವೇ? ನಾನು ನಿಮಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ: ಗಂಡನು ಬದುಕಿರುವ ತನಕ ಹೆಂಡತಿಯು ಕಾನೂನಿನ ಪ್ರಕಾರ ಅವನಿಗೆ ಬದ್ಧಳಾಗಿರಬೇಕು. ಆದರೆ ಆಕೆಯ ಗಂಡನು ತೀರಿಕೊಂಡರೆ, ವಿವಾಹದ ಕಾನೂನಿನಿಂದ ಆಕೆಯು ಬಿಡುಗಡೆಯಾಗಿದ್ದಾಳೆ. ಆದರೆ ತನ್ನ ಗಂಡನು ಜೀವದಿಂದಿರುವಾಗಲೇ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುತ್ತಾಳೆಂದು ಧರ್ಮಶಾಸ್ತ್ರವು ಹೇಳುತ್ತದೆ. ಆದರೆ ಆಕೆಯ ಗಂಡನು ಸತ್ತುಹೋದರೆ ಆಕೆಯು ವಿವಾಹದ ಹಂಗಿನಿಂದ ಬಿಡುಗಡೆಯಾಗಿದ್ದಾಳೆ. ಹೀಗಿರಲಾಗಿ, ತನ್ನ ಗಂಡನು ತೀರಿಕೊಂಡ ಮೇಲೆ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುವುದಿಲ್ಲ.
ನನ್ನ ಸಹೋದರ ಸಹೋದರಿಯರೇ, ಇದೇ ರೀತಿಯಲ್ಲಿ ನಿಮ್ಮ ಹಳೆಯ ಸ್ವಭಾವವು ಸತ್ತುಹೋಯಿತು; ನೀವು ಕ್ರಿಸ್ತನ ದೇಹದ ಮೂಲಕ ಧರ್ಮಶಾಸ್ತ್ರದಿಂದ ಬಿಡುಗಡೆಯಾದಿರಿ. ಈಗ ನೀವು, ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಾತನಿಗೆ ಸೇರಿದವರಾಗಿದ್ದೀರಿ. ನಾವು ದೇವರಿಗೋಸ್ಕರ ಫಲವನ್ನು ಫಲಿಸುವುದಕ್ಕಾಗಿ ಕ್ರಿಸ್ತನಿಗೆ ಸೇರಿದವರಾಗಿದ್ದೇವೆ. ಹಿಂದಿನ ಕಾಲದಲ್ಲಿ, ನಮ್ಮ ಪಾಪಾಧೀನಸ್ವಭಾವವು ನಮ್ಮನ್ನು ಆಳುತ್ತಿತ್ತು. ಪಾಪಕೃತ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಧರ್ಮಶಾಸ್ತ್ರವು ನಮ್ಮಲ್ಲಿ ಉಂಟುಮಾಡಿತು. ಮತ್ತು ನಾವು ಮಾಡಲಿಚ್ಛಿಸಿದ್ದ ಆ ಪಾಪಕೃತ್ಯಗಳು ನಮ್ಮ ದೇಹಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡವು. ಇದರಿಂದಾಗಿ, ನಾವು ಮಾಡಿದ ಕಾರ್ಯಗಳೆಲ್ಲ ನಮಗೆ ಆತ್ಮಿಕ ಮರಣವನ್ನು ಮಾತ್ರ ಉಂಟು ಮಾಡುತ್ತಿದ್ದವು. ಹಿಂದಿನ ಕಾಲದಲ್ಲಿ, ಧರ್ಮಶಾಸ್ತ್ರವು ನಮ್ಮನ್ನು ಸೆರೆಯಾಳುಗಳಂತೆ ಬಂಧಿಸಿತ್ತು. ಆದರೆ ನಮ್ಮ ಹಳೆಯ ಸ್ವಭಾವವು ಸತ್ತುಹೋದ ಕಾರಣ ನಾವು ಧರ್ಮಶಾಸ್ತ್ರದಿಂದ ಬಿಡುಗಡೆಯಾದೆವು. ಆದ್ದರಿಂದ ಈಗ ನಾವು ಲಿಖಿತ ನಿಯಮಗಳೊಡನೆ ಹಳೇ ರೀತಿಯಲ್ಲಿ ದೇವರ ಸೇವೆಮಾಡದೆ ಪವಿತ್ರಾತ್ಮ ಪ್ರೇರಿತವಾದ ಹೊಸ ರೀತಿಯಲ್ಲಿ ದೇವರ ಸೇವೆ ಮಾಡುತ್ತೇವೆ.
ಪಾಪದೊಡನೆ ಹೋರಾಟ
ಪಾಪ ಮತ್ತು ಧರ್ಮಶಾಸ್ತ್ರ ಇವೆರಡೂ ಒಂದೇ ಎಂದು ನಾನು ಹೇಳುತ್ತಿರುವುದಾಗಿ ನೀವು ಭಾವಿಸಬಹುದು. ಆದರೆ ಅದು ನಿಜವಲ್ಲ. ಪಾಪವೆಂದರೆ ಏನೆಂಬುದನ್ನು ಕಲಿತುಕೊಳ್ಳಲು ಧರ್ಮಶಾಸ್ತ್ರವೊಂದೇ ನನಗೆ ಏಕೈಕ ಮಾರ್ಗವಾಗಿದೆ. ಧರ್ಮಶಾಸ್ತ್ರವಿಲ್ಲದಿದ್ದರೆ, ದುರಾಶೆ ಎಂದರೆ ಏನೆಂಬುದೇ ನನಗೆ ತಿಳಿಯುತ್ತಿರಲಿಲ್ಲ. “ಬೇರೆಯವರ ವಸ್ತುಗಳನ್ನು ನೀವು ಆಶಿಸಕೂಡದು” ಉಲ್ಲೇಖನ: ವಿಮೋಚನ. 20:17; ಧರ್ಮೋಪದೇಶ. 5:21. ಎಂದು ಧರ್ಮಶಾಸ್ತ್ರವು ಹೇಳಿದ್ದರಿಂದಲೇ ಅದು ನನಗೆ ತಿಳಿಯಿತು. ಆದರೆ ಪಾಪವು ಆ ಆಜ್ಞೆಯನ್ನೇ ಬಳಸಿಕೊಂಡು ನನ್ನಲ್ಲಿ ಎಲ್ಲಾ ಬಗೆಯ ದುರಾಶೆಗಳನ್ನು ಕೆರಳಿಸಿತು. ಆದ್ದರಿಂದ ಆ ಆಜ್ಞೆಯಿಂದಾಗಿ ಪಾಪವು ನನ್ನ ಬಳಿಗೆ ಬಂದಿತು. ಆದರೆ ಧರ್ಮಶಾಸ್ತ್ರವಿಲ್ಲದಿದ್ದರೆ, ಪಾಪಕ್ಕೆ ಅಧಿಕಾರವೇ ಇಲ್ಲ. ನಾನು ಧರ್ಮಶಾಸ್ತ್ರವನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು ಧರ್ಮಶಾಸ್ತ್ರವಿಲ್ಲದವನಾಗಿ ಜೀವಂತವಾಗಿದ್ದೆನು. ಆದರೆ ಧರ್ಮಶಾಸ್ತ್ರದ ಆಜ್ಞೆಯು ನನ್ನ ಬಳಿಗೆ ಬಂದಾಗ, ಪಾಪವು ಜೀವಿಸತೊಡಗಿತು. 10 ನಾನು ಪಾಪದ ನಿಮಿತ್ತ ಆತ್ಮಿಕವಾಗಿ ಸತ್ತುಹೋದೆನು. ಜೀವವನ್ನು ತರಬೇಕಾಗಿದ್ದ ಆಜ್ಞೆಯೇ ನನಗೆ ಮರಣವನ್ನು ತಂದಿತು. 11 ಪಾಪವು ಆ ಆಜ್ಞೆಯನ್ನು ಬಳಸಿಕೊಂಡು ನನ್ನನ್ನು ವಂಚಿಸಿ, ನನ್ನಲ್ಲಿ ಆತ್ಮಿಕ ಮರಣವನ್ನು ಉಂಟುಮಾಡಿತು.
12 ಹೀಗಿರಲು ಧರ್ಮಶಾಸ್ತ್ರ ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಒಳ್ಳೆಯದೂ ಆಗಿದೆ. 13 ಹಾಗಾದರೆ, ಒಳ್ಳೆಯದೇ ನನಗೆ ಮರಣವನ್ನು ಬರಮಾಡಿತೆಂದರ್ಥವೇ? ಇಲ್ಲ! ಆದರೆ ಪಾಪವು ಒಳ್ಳೆಯದನ್ನೇ ಬಳಸಿಕೊಂಡು ನನಗೆ ಮರಣವನ್ನು ಬರಮಾಡಿತು. ಇದರಿಂದಾಗಿ, ನಾನು ಪಾಪದ ನಿಜಸ್ವರೂಪವನ್ನು ಕಾಣುವಂತಾಯಿತು. ಪಾಪವು ಬಹು ಕೆಟ್ಟದ್ದೆಂದು ಆಜ್ಞೆಯ ಮೂಲಕ ಸ್ಪಷ್ಟವಾಯಿತು.
ಮನುಷ್ಯನಲ್ಲಿ ಗೊಂದಲ
14 ಧರ್ಮಶಾಸ್ತ್ರವು ಆತ್ಮಿಕವಾದದ್ದೆಂದು ನಾವು ಬಲ್ಲೆವು. ಆದರೆ ನಾನು ಆತ್ಮಿಕನಲ್ಲ. ನಾನು ಪಾಪಕ್ಕೆ ಮಾರಲ್ಪಟ್ಟ ಗುಲಾಮನೋ ಎಂಬಂತೆ ಪಾಪವು ನನ್ನನ್ನು ಆಳುತ್ತದೆ. 15 ನಾನು ಮಾಡುವ ಕಾರ್ಯಗಳು ನನಗೇ ಅರ್ಥವಾಗುವುದಿಲ್ಲ. ನಾನು ಯಾವ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಇಚ್ಛಿಸುತ್ತೇನೋ ಆ ಕಾರ್ಯಗಳನ್ನು ಮಾಡದೆ ನಾನು ದ್ವೇಷಿಸುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 16 ನಾನು ಮಾಡುವ ಕೆಟ್ಟಕಾರ್ಯಗಳನ್ನು ಮಾಡಲು ನನಗೆ ಇಷ್ಟವಿಲ್ಲದಿದ್ದರೆ, ಧರ್ಮಶಾಸ್ತ್ರವು ಒಳ್ಳೆಯದೆಂದು ನಾನು ಒಪ್ಪಿಕೊಂಡಂತಾಯಿತು. 17 ಹೀಗಿರಲಾಗಿ ಈ ಕೆಟ್ಟಕಾರ್ಯಗಳನ್ನು ಮಾಡುವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಈ ಕೆಟ್ಟಕಾರ್ಯಗಳನ್ನು ಮಾಡುತ್ತದೆ. 18 ಹೌದು, ನನ್ನಲ್ಲಿ ಅಂದರೆ ನನ್ನ ಪಾಪಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂಬುದು ನನಗೆ ಗೊತ್ತಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಮನಸ್ಸಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ನನಗೆ ಸಾಧ್ಯವಿಲ್ಲ. 19 ನಾನು ಮಾಡಲಿಚ್ಛಿಸುವ ಒಳ್ಳೆಯ ಕಾರ್ಯಗಳನ್ನು ಮಾಡದೆ ಮಾಡಲಿಚ್ಛಿಸದಿರುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 20 ಹೀಗಿರಲಾಗಿ, ನಾನು ಮಾಡಲಿಚ್ಛಿಸದಿರುವ ಕಾರ್ಯಗಳನ್ನು ನಾನು ಮಾಡಿದರೆ, ಅವುಗಳನ್ನು ಮಾಡವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಆ ಕೆಟ್ಟಕಾರ್ಯಗಳನ್ನು ಮಾಡುತ್ತದೆ.
21 ಹೀಗಿರಲಾಗಿ, ನಾನು ಈ ನಿಯಮವನ್ನು ಕಲಿತುಕೊಂಡಿದ್ದೇನೆ: ನಾನು ಒಳ್ಳೆಯದನ್ನು ಮಾಡಲಿಚ್ಛಿಸುವಾಗ, ಕೆಟ್ಟದ್ದು ನನ್ನೊಳಗೇ ಇರುತ್ತದೆ. 22 ನನ್ನ ಅಂತರಂಗದಲ್ಲಿ ದೇವರ ನಿಯಮದ ವಿಷಯದಲ್ಲಿ ನಾನು ಸಂತೋಷಪಡುತ್ತೇನೆ. 23 ಆದರೆ ನನ್ನ ದೇಹದಲ್ಲಿ ಮತ್ತೊಂದು ನಿಯಮ ಕೆಲಸ ಮಾಡುತ್ತಿರುವುದನ್ನು ನಾನು ಕಾಣುತ್ತೇನೆ. ನನ್ನ ಅಂತರಂಗ ಒಪ್ಪಿಕೊಳ್ಳುವ ನಿಯಮಕ್ಕೆ ವಿರುದ್ಧವಾಗಿ ಆ ನಿಯಮ ಹೋರಾಡುತ್ತದೆ. ನನ್ನ ದೇಹದಲ್ಲಿ ಕೆಲಸ ಮಾಡುತ್ತಿರುವ ಆ ಮತ್ತೊಂದು ನಿಯಮವೇ ಪಾಪದ ನಿಯಮವಾಗಿದೆ. ಆ ನಿಯಮವು ನನ್ನನ್ನು ತನ್ನ ಸೆರೆಯಾಳನ್ನಾಗಿ ಮಾಡುತ್ತದೆ. 24 ನಾನು ದುರಾವಸ್ಥೆಗೆ ಒಳಗಾಗಿದ್ದೇನೆ. ನನಗೆ ಮರಣವನ್ನು ತರುವ ಈ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು? 25 ದೇವರು ನನ್ನನ್ನು ರಕ್ಷಿಸುವನು! ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಮೂಲಕ ಆತನು ದಯಪಾಲಿಸುವ ರಕ್ಷಣೆಗಾಗಿ ಆತನಿಗೆ ಸ್ತೋತ್ರವಾಗಲಿ!
ಆದ್ದರಿಂದ ನನ್ನ ಅಂತರಂಗದಲ್ಲಿ ನಾನು ದೇವರ ನಿಯಮಕ್ಕೆ ಗುಲಾಮನಾಗಿದ್ದೇನೆ. ಆದರೆ ನನ್ನ ಪಾಪಾಧೀನಸ್ವಭಾವದಲ್ಲಿ ನಾನು ಪಾಪದ ನಿಯಮಕ್ಕೆ ಗುಲಾಮನಾಗಿದ್ದೇನೆ.

7:7: ಉಲ್ಲೇಖನ: ವಿಮೋಚನ. 20:17; ಧರ್ಮೋಪದೇಶ. 5:21.