20
ಒಂದುಸಾವಿರ ವರ್ಷಗಳು
1 ಆಗ ಒಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಆ ದೇವದೂತನು ತಳವಿಲ್ಲದ ಕೂಪದ ಬೀಗದ ಕೈಯನ್ನು ಹೊಂದಿದ್ದನು ಮತ್ತು ಒಂದು ದೊಡ್ಡ ಸರಪಣಿಯನ್ನೂ ತನ್ನ ಕೈಯಲ್ಲಿ ಹಿಡಿದಿದ್ದನು. 2 ಆ ದೇವದೂತನು ಪುರಾತನ ಘಟಸರ್ಪವನ್ನು ಹಿಡಿದನು. ಆ ಘಟಸರ್ಪವೇ ಸೈತಾನ. ದೇವದೂತನು ಅವನನ್ನು ಸರಪಣಿಗಳಿಂದ ಕಟ್ಟಿ ಒಂದುಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು. 3 ಆ ದೇವದೂತನು ಘಟಸರ್ಪವನ್ನು ತಳವಿಲ್ಲದ ಕೂಪಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿ ಬೀಗಹಾಕಿದನು, ಆ ಘಟಸರ್ಪವು ಒಂದುಸಾವಿರ ವರ್ಷಗಳ ಕಾಲ ಮುಗಿಯುವ ತನಕ ಲೋಕದ ಜನರನ್ನು ಮರುಳು ಮಾಡದಿರಲೆಂದು ಆ ದೇವದೂತನು ಹೀಗೆ ಮಾಡಿದನು. ಒಂದುಸಾವಿರ ವರ್ಷಗಳ ತರುವಾಯ ಆ ಘಟಸರ್ಪಕ್ಕೆ ಸ್ವಲ್ಪಕಾಲ ಬಿಡುಗಡೆ ಮಾಡಲಾಗುವುದು.
4 ನಂತರ ನಾನು ಕೆಲವು ಸಿಂಹಾಸನಗಳನ್ನು ಮತ್ತು ಅವುಗಳ ಮೇಲೆ ಜನರು ಕುಳಿತಿರುವುದನ್ನು ನೋಡಿದೆನು. ಈ ಜನರು ತೀರ್ಪು ನೀಡುವ ಅಧಿಕಾರವನ್ನು ಹೊಂದಿದ್ದರು. ಯೇಸುವಿನ ಸತ್ಯಕ್ಕೆ ಮತ್ತು ದೇವರ ಸಂದೇಶಕ್ಕೆ ನಂಬಿಗಸ್ತರಾಗಿದ್ದರ ನಿಮಿತ್ತವಾಗಿ ಕೊಲ್ಲಲ್ಪಟ್ಟವರ ಜೀವಾತ್ಮಗಳನ್ನು ನಾನು ನೋಡಿದೆನು. ಆ ಜನರು ಮೃಗವನ್ನಾಗಲಿ ಅದರ ವಿಗ್ರಹವನ್ನಾಗಲಿ ಆರಾಧಿಸಿರಲಿಲ್ಲ. ಅವರು ತಮ್ಮ ಹಣೆಯ ಮೇಲಾಗಲಿ ಕೈಗಳ ಮೇಲಾಗಲಿ ಮೃಗದ ಗುರುತನ್ನು ಹಾಕಿಸಿಕೊಂಡಿರಲಿಲ್ಲ. ಆ ಜನರು ಮತ್ತೆ ಜೀವವನ್ನು ಪಡೆದು ಕ್ರಿಸ್ತನೊಂದಿಗೆ ಒಂದುಸಾವಿರ ವರ್ಷ ಆಳಿದರು. 5 (ಸತ್ತುಹೋಗಿದ್ದ ಇತರ ಜನರು ಒಂದುಸಾವಿರ ವರ್ಷಗಳು ಮುಗಿಯುವ ತನಕ ಜೀವಂತರಾಗಲೇ ಇಲ್ಲ.)
ಇದೇ ಪ್ರಥಮ ಪುನರುತ್ಥಾನ. 6 ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಪವಿತ್ರರೂ ಧನ್ಯರೂ ಆಗಿದ್ದಾರೆ. ಈ ಜನರ ಮೇಲೆ ಎರಡನೆ ಮರಣಕ್ಕೆ ಅಧಿಕಾರವಿಲ್ಲ. ಆ ಜನರು ದೇವರಿಗೆ ಮತ್ತು ಕ್ರಿಸ್ತನಿಗೆ ಯಾಜಕರಾಗಿರುತ್ತಾರೆ. ಅವರು ಆತನೊಂದಿಗೆ ಒಂದು ಸಾವಿರ ವರ್ಷ ಆಳುತ್ತಾರೆ.
ಸೈತಾನನಿಗೆ ಸೋಲು
7 ಒಂದುಸಾವಿರ ವರ್ಷಗಳು ಮುಗಿದ ನಂತರ, ಸೈತಾನನನ್ನು ಅವನ ಸೆರೆಯಿಂದ ಬಿಡುಗಡೆ ಮಾಡಲಾಗುತ್ತದೆ. 8 ಸೈತಾನನು ಗೋಗ್ ಮತ್ತು ಮಾಗೋಗ್ ಜನಾಂಗಗಳನ್ನು ಮರುಳುಗೊಳಿಸಲು ಭೂಲೋಕದಲ್ಲೆಲ್ಲಾ ಹೋಗಿ ಆ ಜನರನ್ನು ಯುದ್ಧಕ್ಕೆ ಒಟ್ಟುಗೂಡಿಸುತ್ತಾನೆ. ಅವರು ಸಮುದ್ರ ತೀರದ ಮರಳಿನ ಕಣಗಳಂತೆ ಅಸಂಖ್ಯಾತವಾಗಿರುತ್ತಾರೆ.
9 ಸೈತಾನನ ಸೈನ್ಯವು ಭೂಮಿಯಲ್ಲೆಲ್ಲಾ ಶಿಸ್ತಿನಿಂದ ನಡೆದಾಡಿ ದೇವಜನರ ಶಿಬಿರದ ಸುತ್ತಲೂ ದೇವರ ಪ್ರಿಯ ನಗರದ ಸುತ್ತಲೂ ಒಟ್ಟುಗೂಡಿದರು. ಆದರೆ ಪರಲೋಕದಿಂದ ಇಳಿದು ಬಂದ ಬೆಂಕಿಯು ಸೈತಾನನ ಸೈನ್ಯವನ್ನು ನಾಶಗೊಳಿಸಿತು. 10 ಸೈತಾನನನ್ನು (ಇವನೇ ಜನರನ್ನು ಮೋಸಗೊಳಿಸಿದವನು.) ಬೆಂಕಿಗಂಧಕಗಳು ಉರಿಯುತ್ತಿದ್ದ ಕೆರೆಗೆ ಎಸೆಯಲಾಯಿತು. ಅಲ್ಲಿ ಮೃಗವೂ ಇತ್ತು, ಸುಳ್ಳುಪ್ರವಾದಿಗಳೂ ಇದ್ದರು. ಅಲ್ಲಿ ಅವರು ಹಗಲಿರುಳು ಎಂದೆಂದಿಗೂ ಹಿಂಸೆ ಅನುಭವಿಸುವರು.
ಲೋಕದ ಜನರಿಗಾಗುವ ತೀರ್ಪು
11 ಬಳಿಕ ನಾನು ಒಂದು ದೊಡ್ಡ ಬಿಳಿ ಸಿಂಹಾಸನವನ್ನೂ ಆ ಸಿಂಹಾಸನದ ಮೇಲೆ ಕುಳಿತಿದ್ದಾತನನ್ನೂ ನೋಡಿದೆನು. ಭೂಮಿ ಮತ್ತು ಆಕಾಶಗಳು ಆತನ ಬಳಿಯಿಂದ ಓಡಿಹೋಗಿ ಅದೃಶ್ಯವಾದವು. 12 ಸತ್ತುಹೋಗಿದ್ದ ಚಿಕ್ಕವರು ಮತ್ತು ದೊಡ್ಡವರು ಸಿಂಹಾಸನದ ಮುಂದೆ ನಿಂತಿದ್ದರು. ಆಗ ಜೀವಬಾಧ್ಯರ ಪುಸ್ತಕವನ್ನು ತೆರೆಯಲಾಯಿತು. ತೆರೆದಿದ್ದ ಇತರ ಪುಸ್ತಕಗಳೂ ಅಲ್ಲಿದ್ದವು. ಸತ್ತುಹೋಗಿದ್ದ ಈ ಜನರಿಗೆ ಅವರು ಮಾಡಿದ್ದ ಕಾರ್ಯಗಳ ಆಧಾರದ ಮೇಲೆ ತೀರ್ಪು ನೀಡಲಾಯಿತು. ಇವುಗಳು ಪುಸ್ತಕಗಳಲ್ಲಿ ಬರೆಯಲ್ಪಟ್ಟಿವೆ.
13 ಸಮುದ್ರವು ತನ್ನಲ್ಲಿ ಸತ್ತಿದ್ದ ಜನರನ್ನು ಒಪ್ಪಿಸಿತು. ಮೃತ್ಯುವೂ ಪಾತಾಳವೂ ತನ್ನಲ್ಲಿದ್ದ ಸತ್ತ ಜನರನ್ನು ಒಪ್ಪಿಸಿದವು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಕಾರ್ಯಗಳಿಗನುಸಾರವಾಗಿ ತೀರ್ಪು ನೀಡಲಾಯಿತು. 14 ಆಮೇಲೆ ಮೃತ್ಯುವನ್ನೂ ಪಾತಾಳವನ್ನೂ ಬೆಂಕಿಯ ಕೆರೆಗೆ ಎಸೆಯಲಾಯಿತು. ಈ ಬೆಂಕಿಯ ಕೆರೆಯು ಎರಡನೆಯ ಮರಣ. 15 ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರು ಬರೆಯಲ್ಪಟ್ಟಿಲ್ಲವೋ ಆ ವ್ಯಕ್ತಿಯನ್ನು ಬೆಂಕಿಯ ಕೆರೆಗೆ ಎಸೆಯಲಾಯಿತು.