22
ರಚನೆಗಾರ: ದಾವೀದ.
1 ನನ್ನ ದೇವರೇ, ನನ್ನ ದೇವರೇ! ಯಾಕೆ ನನ್ನನ್ನು ತೊರೆದಿರುವೆ?
ನನ್ನನ್ನು ರಕ್ಷಿಸದೆ ಯಾಕೆ ಬಹುದೂರವಾಗಿರುವೆ!
ಸಹಾಯಕ್ಕಾಗಿ ನಾನು ಗೋಳಾಡುತ್ತಿದ್ದರೂ ಕೇಳದೆ ಯಾಕೆ ಬಹದೂರವಾಗಿರುವೆ?
2 ನನ್ನ ದೇವರೇ, ಹಗಲಿನಲ್ಲಿ ನಾನು ನಿನ್ನನ್ನು ಕೂಗಿಕೊಂಡೆನು,
ಆದರೂ ನೀನು ನನಗೆ ಉತ್ತರಿಸಲಿಲ್ಲ.
ರಾತ್ರಿಯಲ್ಲೂ ನಿನ್ನನ್ನು ಕೂಗಿಕೊಳ್ಳುತ್ತಲೇ ಇದ್ದೆನು.
3 ದೇವರೇ, ಪರಿಶುದ್ಧನು ನೀನೇ.
ನೀನು ರಾಜನಂತೆ ಕುಳಿತಿರುವೆ. ಇಸ್ರೇಲರ ಸ್ತುತಿಗಳೇ ನಿನ್ನ ಸಿಂಹಾಸನ.
4 ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟಿದ್ದರು.
ಅವರು ನಿನ್ನಲ್ಲಿಯೇ ಭರವಸವಿಟ್ಟಿದ್ದರು, ನೀನು ಅವರನ್ನು ರಕ್ಷಿಸಿದೆ.
5 ನಮ್ಮ ಪೂರ್ವಿಕರು ನಿನ್ನಲ್ಲಿ ಮೊರೆಯಿಟ್ಟಾಗ ಅವರನ್ನು ಶತ್ರುಗಳಿಂದ ಬಿಡಿಸಿದೆ.
ನಿನ್ನಲ್ಲಿ ಭರವಸವಿಟ್ಟಿದ್ದ ಅವರಿಗೆ ನಿರಾಶೆಯಾಗಲಿಲ್ಲ.
6 ಹೀಗಿರಲು, ನಾನು ಹುಳವೇ? ನಾನು ಮನುಷ್ಯನಲ್ಲವೇ?
ನನ್ನ ವಿಷಯದಲ್ಲಿ ಜನರು ನಾಚಿಕೆಪಡುತ್ತಾರೆ; ಅವರು ನನ್ನನ್ನು ತಿರಸ್ಕರಿಸುತ್ತಾರೆ.
7 ನನ್ನನ್ನು ನೋಡಿದವರೆಲ್ಲರೂ ಗೇಲಿಮಾಡುವರು.
ಅವರು ಓರೆ ತುಟಿಮಾಡಿ ತಲೆಯಾಡಿಸುತ್ತಾ,
8 “ಯೆಹೋವನಿಗೆ ಮೊರೆಯಿಡು,
ಆತನು ನಿನ್ನನ್ನು ರಕ್ಷಿಸಬಹುದು.
ಆತನು ನಿನ್ನನ್ನು ಬಹಳವಾಗಿ ಇಷ್ಟಪಡುವುದಾದರೆ ನಿನ್ನನ್ನು ಖಂಡಿತವಾಗಿ ರಕ್ಷಿಸುವನು” ಅನ್ನುತ್ತಾರೆ.
9 ನಾನಂತೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ. ಹುಟ್ಟಿದ ದಿನದಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.
ನಾನಿನ್ನೂ ತಾಯಿಯ ಗರ್ಭದಲ್ಲಿದ್ದಾಗ ನನಗೆ ಭರವಸೆ ನೀಡಿ ಸಂತೈಸಿದವನು ನೀನೇ.
10 ಹುಟ್ಟಿದ ದಿನದಿಂದಲೂ ನೀನೇ ನನ್ನ ದೇವರಾಗಿರುವೆ.
ತಾಯಿಯ ಗರ್ಭದಿಂದ ಬಂದಂದಿನಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.
11 ಹೀಗಿರಲು, ನನ್ನನ್ನು ತೊರೆಯಬೇಡ!
ಆಪತ್ತು ಸಮೀಪಿಸಿದೆ, ನನಗೆ ಸಹಾಯಮಾಡಲು ಯಾರೂ ಇಲ್ಲ.
12 ಜನರು ನನ್ನನ್ನು ಸುತ್ತುಗಟ್ಟಿದ್ದಾರೆ;
ಅವರು ಬಲಿಷ್ಠವಾದ ಹೋರಿಗಳಂತಿದ್ದಾರೆ.
13 ಪ್ರಾಣಿಯೊಂದನ್ನು ಸೀಳಿಹಾಕುತ್ತಾ ಗರ್ಜಿಸುವ ಸಿಂಹದಂತೆ
ಅವರ ಬಾಯಿಗಳು ಅಗಲವಾಗಿ ತೆರೆದಿವೆ.
14 ನೆಲದ ಮೇಲೆ ಸುರಿದ ನೀರಿನಂತೆ
ನನ್ನ ಬಲವು ಇಲ್ಲವಾಗಿದೆ;
ಮೂಳೆಗಳು ಸಡಿಲಗೊಂಡಿವೆ;
ಹೃದಯವು ಮೇಣದಂತೆ ಕರಗಿಹೋಗಿದೆ.
15 ನನ್ನ ಶಕ್ತಿಯು ಒಡೆದುಹೋದ ಮಡಿಕೆಯ ಒಣ ತುಂಡಿನಂತಿದೆ.
ನನ್ನ ನಾಲಿಗೆಯು ಬಾಯಿ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತಿದೆ.
ನೀನು ನನ್ನನ್ನು ಮಣ್ಣಿಗೆ ಸೇರಿಸಿರುವೆ.
16 ದುಷ್ಟರು ನಾಯಿಗಳಂತೆ ನನ್ನನ್ನು ಸುತ್ತಿಕೊಂಡಿದ್ದಾರೆ.
ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.* ಅವರು … ತಿವಿದಿದ್ದಾರೆ ಪುರಾತನ ಕಾಲದ ಗ್ರೀಕ್ ಅನುವಾದದ ಪ್ರಕಾರ. “ಅವರು ನನ್ನ ಕೈಗಳನ್ನು ಮತ್ತು ಕಾಲುಗಳನ್ನು ತಿವಿದಿದ್ದಾರೆ.” ಹೀಬ್ರೂವಿನಲ್ಲಿ, “ತಿವಿದಿದ್ದಾರೆ” ಎಂಬ ಪದವೇ “ಸಿಂಹದಂತೆ” ಎಂಬರ್ಥವನ್ನು ಕೊಡುತ್ತದೆ.
17 ನನ್ನ ಮೂಳೆಗಳು ಎದ್ದುಕಾಣುತ್ತಿವೆ!
ಜನರು ನನ್ನನ್ನು ದಿಟ್ಟಿಸಿ ನೋಡುತ್ತಿದ್ದಾರೆ!
ಅವರು ನನ್ನನ್ನೇ ನೋಡುತ್ತಿದ್ದಾರೆ!
18 ಅವರು ನನ್ನ ಮೇಲ್ಹೊದಿಕೆಯನ್ನು ಪಾಲು ಮಾಡಿಕೊಳ್ಳುವರು;
ನನ್ನ ನಿಲುವಂಗಿಗಾಗಿ ಚೀಟುಹಾಕುವರು.
19 ಯೆಹೋವನೇ, ನನ್ನನ್ನು ತೊರೆಯಬೇಡ!
ನೀನೇ ನನ್ನ ಬಲ! ಬೇಗನೆ ನನಗೆ ಸಹಾಯಮಾಡು!
20 ಖಡ್ಗಕ್ಕೆ ಸಿಕ್ಕದಂತೆ ತನ್ನ ಜೀವವನ್ನು ರಕ್ಷಿಸು.
ನನ್ನ ಅಮೂಲ್ಯವಾದ ಜೀವವು ನಾಯಿಗಳ ಪಾಲಾಗದಂತೆ ರಕ್ಷಿಸು.
21 ನನ್ನನ್ನು ಸಿಂಹದ ಬಾಯಿಂದ ಬಿಡಿಸು;
ಹೋರಿಯ ಕೊಂಬುಗಳಿಂದ ನನ್ನನ್ನು ಸಂರಕ್ಷಿಸು.
22 ನಿನ್ನ ಕುರಿತು ನನ್ನ ಸಹೋದರರಿಗೆ ಹೇಳುವೆನು;
ಮಹಾಸಭೆಯಲ್ಲಿ ನಿನ್ನನ್ನು ಸುತ್ತಿಸುವೆನು.
23 ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ.
ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ!
ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
24 ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ;
ಆತನು ಅವರನ್ನು ದ್ವೇಷಿಸುವುದಿಲ್ಲ.
ಅವರು ಆತನನ್ನು ಕೂಗಿಕೊಳ್ಳುವಾಗ
ಆತನು ಅವರಿಗೆ ಮರೆಯಾಗುವುದಿಲ್ಲ.
25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
ನನ್ನ ಯಜ್ಞಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
ನಿಮ್ಮ ಹೃದಯಗಳು ಯಾವಾಗಲೂ ಸಂತೋಷವಾಗಿರಲಿ.† ಸಂತೋಷವಾಗಿರಲಿ ಅಕ್ಷರಶಃ, “ಜೀವಿಸಲಿ.”
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
ಆತನು ಜನಾಂಗಗಳನ್ನೆಲ್ಲಾ ಆಳುವನು.
29 ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು.
ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
30 ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು.
ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
31 ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ
ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.‡ ಈ ವಚನಗಳನ್ನು ಹೀಬ್ರೂ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಕಷ್ಟ.